ಶಿವಮೊಗ್ಗ: ಗ್ರಾಮ ಮಟ್ಟದಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಟ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ
ಡಾ| ಎಂ. ಲೋಕೇಶ್ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಸಂಬಂಧ ಜಿಲ್ಲಾಮಟ್ಟದ ಕಾವಲು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ವರ್ಷ 200 ಮಹಿಳೆಯರ ನಾಪತ್ತೆ ಪ್ರಕರಣ ವರದಿಯಾಗಿದ್ದು, 169 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಈ ಅವಧಿಯಲ್ಲಿ 78 ಮಕ್ಕಳು ನಾಪತ್ತೆಯಾಗಿದ್ದು, 70 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಪ್ರಸ್ತುತ ವರ್ಷ ಇದುವರೆಗೆ 62 ಮಕ್ಕಳ ನಾಪತ್ತೆ ಪ್ರಕರಣ ವರದಿಯಾಗಿದೆ. ಅದರಲ್ಲಿ 51 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಇನ್ನೂ 11 ಮಕ್ಕಳು ಪತ್ತೆಯಾಗಬೇಕಿದೆ ಎಂದು ಮಾಹಿತಿ ನೀಡಿದರು.
ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿರುವುದಕ್ಕೂ ಮಕ್ಕಳ ಕಲ್ಯಾಣ ಸಮಿತಿ ಬಳಿ ಇರುವ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಇದಕ್ಕಾಗಿ ಪ್ರತಿ ತಿಂಗಳು ಪೊಲೀಸ್, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭೆ ಸೇರಿ ಪ್ರಕರಣಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿಪಂ ಸಿಇಒ ರಾಕೇಶ್ ಕುಮಾರ್ ಮಾತನಾಡಿ, ಗ್ರಾಮ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಕಾವಲು ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿರುವ ಮಹಿಳೆಯರು ಹಾಗೂ ಮಕ್ಕಳ ಕುರಿತಾಗಿ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಿದ್ದರೂ ಬಹುತೇಕ ಗ್ರಾಪಂಗಳಲ್ಲಿ ಮಾಹಿತಿ ಇಟ್ಟಿರುವುದಿಲ್ಲ. ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸರಿಪಡಿಸದಿದ್ದರೆ ಆಯಾ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ 415ಮಕ್ಕಳು ತೀವ್ರ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಪೌಷ್ಟಿಕಾಂಶ ಕೊರತೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಪ್ರತಿ ಮಕ್ಕಳ ಕೇಸ್ ಶೀಟ್ ಪ್ರತಿ ಅಂಗನವಾಡಿಗಳಲ್ಲಿ ತೆರೆದು ಮೂರು ತಿಂಗಳಿಗೊಮ್ಮೆ ವೈದ್ಯರಿಂದ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ವಿವಿಧ
ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.