ವಿಧಾನ ಪರಿಷತ್ತು: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯದ ಇತರೆಡೆ ನೆಲೆಸಿರುವ ವಲಸಿಗರ “ಆಧಾರ್’ ಸಂಖ್ಯೆಯ ಸಾಚಾತನ ಖಾತರಿಪಡಿಸಿಕೊಳ್ಳುವ ಜತೆಗೆ ಇನ್ಮುಂದೆ ವಿಳಾಸ ಬದಲಾವಣೆ ಅಥವಾ ಹೊಸ ಆಧಾರ್ ಸಂಖ್ಯೆ ಕೋರಿ ಬರುವ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸೂಚನೆ ನೀಡಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಜೆಡಿಎಸ್‌ನ ಟಿ.ಎ.ಶರವಣ ಪ್ರಶ್ನೆಗೆ ಉತ್ತರಿಸಿದ ಅವರು, ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ಪರಿಶೀಲನೆ ನಡೆಸಿದ್ದು, 363 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಅಕ್ರಮ ನುಸುಳುಕೋರರು ಪಶ್ಚಿಮ ಬಂಗಾಳ, ಅಸ್ಸಾಂ, ಈಶಾನ್ಯ ರಾಜ್ಯಗಳ ಗಡಿಯಿಂದ ದೇಶ ಪ್ರವೇಶಿಸುತ್ತಾರೆ. ಇದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಆಧಾರ್ ಇತರೆ ಗುರುತಿನ ಚೀಟಿಗಳಿದ್ದರೆ ಕ್ರಮ ಕೈಗೊಳ್ಳುವುದು ಕಷ್ಟವಾಗಲಿದೆ. ಮಿಜೋರಾಂ, ನಾಗಾಲ್ಯಾಂಡ್ ಸೇರಿ ಈಶಾನ್ಯ ರಾಜ್ಯಗಳ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದು, ಶಂಕಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸುವಂತೆಯೂ ಸೂಚನೆ ನೀಡಲಾಗಿದೆ. ಒಂದೊಮ್ಮೆ ಆಧಾರ್ ಕಾರ್ಡ್ ಬದಲಾವಣೆಗೆ ಮುಂದಾದಾಗ ಸೂಕ್ತ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ವಿಚಾರ ಪ್ರಸ್ತಾಪಿಸಿದ ಶರವಣ, ರಾಜ್ಯದಲ್ಲಿ 70,000ಕ್ಕೂ ಹೆಚ್ಚು ಅಕ್ರಮ ವಲಸಿಗರು ನೆಲೆಸಿದ್ದು, ಬೆಂಗಳೂರಿನಲ್ಲೇ ನಾಲ್ಕೈದು ಸಾವಿರ ಮಂದಿ ಇದ್ದಾರೆ. ಆದರೆ ರಾಜ್ಯದಲ್ಲಿ ಕೇವಲ 363 ಮಂದಿ ಅಕ್ರಮ ವಲಸಿಗರಿದ್ದಾರೆ ಎಂಬ ಅಂಕಿಸಂಖ್ಯೆ ಸಂಶಯ ಮೂಡಿಸುತ್ತದೆ. ಚಿಕ್ಕಮಗಳೂರು, ಕೊಡಗಿನಲ್ಲಿ ತಲಾ ಒಬ್ಬ ಅಕ್ರಮ ವಲಸಿಗರಿದ್ದಾರೆ ಎಂಬ ಮಾಹಿತಿಯು ತಪ್ಪಿದ್ದಂತಿದೆ. ಇವರ ಬಳಿಯಿರುವ ಗುರುತಿನ ಚೀಟಿಗಳ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದರು.