ಹೊಸದಿಲ್ಲಿ: ಜು. 20ರ ಮೊದಲು ನಿಷೇಧಕ್ಕೊಳಗಾದ ಹಳೆಯ 500 ಮತ್ತು 1000 ರೂ. ನೋಟುಗಳನ್ನು ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು, ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ಸೂಚನೆ ನೀಡಿದೆ.ಅದಕ್ಕಾಗಿ ಒಂದು ತಿಂಗಳ ಅವಕಾಶ ನೀಡಲಾಗಿದೆ. ನ.8ರಂದು ನೋಟು ನಿಷೇಧ ಘೋಷಣೆ ಬಳಿಕ, ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿಗಳಿಗೆ ಹಳೆ ನೋಟುಗಳನ್ನು ಡಿ.30ರವರೆಗೆ ಸ್ವೀಕರಿಸಲು ಅವಕಾಶ ಮಾಡಿಕೊಡಲಾಗಿತ್ತು. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ನ.14ರವರೆಗೆ ಈ ಅವಕಾಶವಿತ್ತು.
ಹಣಕಾಸು ಸಚಿವಾಲಯ ಸದ್ಯ ಹೊರಡಿಸಿದ ಸೂಚನೆ ಪ್ರಕಾರ, ಕಳೆದ ಡಿ.30ರೊಳಗೆ ಸ್ವೀಕರಿಸಿದ ಹಳೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು ಹೊಸ ನೋಟುಗಳನ್ನು ಒಂದು ತಿಂಗಳ ಒಳಗಾಗಿ ಪಡೆಯಲು ಅವಕಾಶವಿದೆ. ಸಹಕಾರಿ ಬ್ಯಾಂಕ್‌ಗಳಿಗೂ ಇದೇ ಅವಕಾಶ ನೀಡಲಾಗಿದೆ.
ಕಳೆದ ಡಿ. 30ರವರೆಗೆ ನೋಟುಗಳನ್ನು ಸ್ವೀಕರಿಸಲು, ಮತ್ತು ಡಿ.31ರವರೆಗೆ ನೋಟುಗಳನ್ನು ರಿಸರ್ವ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಪಮೌಲ್ಯದ ಸಂದರ್ಭಗಳಲ್ಲಿ ಹಲವು ಸಹಕಾರಿ ಬ್ಯಾಂಕುಗಳಿಗೆ ನೋಟುಗಳನ್ನು ವಾಪಸ್ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಟ್ಯಂತರ ರೂ. ಹಣ ಹಾಗೇ ಉಳಿದಿದ್ದು, ಸಹಕಾರಿ ಸಂಘಗಗಳು ಇಕ್ಕಟ್ಟಿಗೆ ಸಿಲುಕಿದ್ದವು. ಈ ಬಗ್ಗೆ ವಿಪಕ್ಷಗಳೂ ಆಕ್ಷೇಪ ಎತ್ತಿದ್ದವು. ಸದ್ಯ ನೋಟು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ನೋಟು ಠೇವಣಿಗೆ ವಿಳಂಬವಾದ್ದೇಕೆ ಎಂಬ ಬಗ್ಗೆಯೂ ರಿಸರ್ವ್ ಬ್ಯಾಂಕ್‌ಗೆ ಸ್ಪಷ್ಟೀಕರಣ ನೀಡುವಂತೆ ಸರಕಾರ ಸೂಚಿಸಿದೆ.