Advertisement

ಪರಿಸರ ಸ್ವಚ್ಛವಾಗಿಟ್ಟು ಆರೋಗ್ಯ ಕಾಪಾಡಿಕೊಳ್ಳಿ

09:39 AM Apr 24, 2019 | Lakshmi GovindaRaju |

ದೇವನಹಳ್ಳಿ: ಮನುಷ್ಯರು ರೋಗಗಳಿಂದ ಮುಕ್ತರಾಗಲು ಮೊದಲು ಪರಿಸರವನ್ನು ಸ್ವಚ್ಛವಾಗಿಡಬೇಕು. ಪೌಷ್ಟಿಕ ಆಹಾರ ಮತ್ತು ಶುದ್ಧ ಕುಡಿಯುವ ನೀರು ಸೇವನೆ ಅತೀ ಮುಖ್ಯ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್‌ ತಿಳಿಸಿದರು.

Advertisement

ನಗರದ ಬಿಬಿ ರಸ್ತೆಯಲ್ಲಿರುವ ಕರ್ನಾಟಕ ಪತ್ರಕರ್ತರ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮೊದಲನೇ ಪ್ರಯತ್ನ: ಸಾರ್ವಜನಿಕರಿಗೆ ಆರೋಗ್ಯದ ಅರಿವು ತೀರಾ ಅಗತ್ಯ. ಜಿಲ್ಲಾಡಳಿತದ ವತಿಯಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಇತ್ತೀಚೆಗೆ ಆರೋಗ್ಯದಲ್ಲಿ ಆಗುತ್ತಿರುವ ದುಷ್ಪರಿಣಾಮಗಳ ಆಂದೋಲನಕ್ಕೆ ಮೊದಲನೇ ಪ್ರಯತ್ನ ಮಾಡಲಾಗಿದೆ ಎಂದರು.

ಮಾರಕ ರೋಗಗಳ ಬಗ್ಗೆ ಜಾಗೃತಿ: ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಲು ಏನೇನು ಕಾರ್ಯಕ್ರಮಗಳಿವೆ ಎಂಬುದರ ಬಗ್ಗೆ ಹಾಗೂ ರೋಗ ಲಕ್ಷಣಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. 10 ಮಾರಕ ರೋಗಗಳಿಂದ ಮಗುವನ್ನು ರಕ್ಷಿಸಲು ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕೆಂದು ತಿಳಿಸಿದರು.

ರೋಗ ನಿರೋಧಕ ಲಸಿಕೆ: ಜಿಲ್ಲೆಯಲ್ಲಿ 14,266 ಮಕ್ಕಳಿಗೆ ಲಸಿಕೆ ನೀಡಲಾಗಿದೆ. 16 ಸಾವಿರ ಗರ್ಭಿಣಿಯರು ಜಿಲ್ಲೆಯಲ್ಲಿದ್ದಾರೆ. 2019ನೇ ಸಾಲಿನ ಮಾ.10, 11 ರಂದು ಪಲ್ಸ್‌ ಪೋಲಿಯೋ ಒಂದೇ ಹಂತದ ಕಾರ್ಯಕ್ರಮವಿತ್ತು. ರೋಗ ನಿರೋಧಕ ಲಸಿಕೆ ಎಲ್ಲಾ ಮಕ್ಕಳು ಪಡೆದರೆ ಶೇ.100ರಷ್ಟು ವಿವಿಧ ಮಾರಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.

Advertisement

ಜಿಲ್ಲೆಯಲ್ಲಿ 50 ಪಿಎಚ್‌ಸಿ: ಬೆಂ.ಗ್ರಾ.ಜಿಲ್ಲೆಯಲ್ಲಿ 10ಲಕ್ಷ ಜನಸಂಖ್ಯೆಯಿದೆ. ನಾಲ್ಕು ಸಾರ್ವಜನಿಕ ಆಸ್ಪತ್ರೆ, 50 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈ ಪೈಕಿ 16 ಕೇಂದ್ರಗಳಲ್ಲಿ ದಿನದ 24 ತಾಸು ಕರ್ತವ್ಯ ನಿರ್ವಹಿಸಲಾಗುತ್ತಿದೆ. 1,320 ಗ್ರಾಮಗಳ ಪೈಕಿ 1,230 ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳಿದ್ದು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರು ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಸೊಳ್ಳೆಗಳ ಬಗ್ಗೆ ಜಾಗೃತಿ ವಹಿಸಿ: ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ, ಡೆಂಘೀ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕೆಂದರು.

ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಡಾ.ಶ್ರೀನಿವಾಸ್‌ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಮಹಿಳೆಯರ ಮತ್ತು ಪುರುಷರ ಜವಾಬ್ದಾರಿ, ಶ್ರವಣ ದೋಷ, ಬೇಟಿ ಪಡಾವೋ, ಬೇಟಿ ಬಚಾವೋ, ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣಾ ವ್ಯವಸ್ಥಾಪಕಿ ಡಾ.ವಿದ್ಯಾರಾಣಿ ಮಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಾಂತಲಾ, ಜಿಲ್ಲಾ ಮಾನಸಿಕ ತಜ್ಞ ಡಾ.ಗಿರೀಶ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್‌, ಜಿಲ್ಲಾ ಕಾಯಕಲ್ಪ ಕಾರ್ಯಕ್ರಮ ಅಧಿಕಾರಿ ಡಾ.ಗುಣಶೀಲ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಖಲೀಲ್‌ ಅಹಮ್ಮದ್‌,

ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಎಂ.ರೇವಣ್ಣ, ಉಪ ಜಿಲ್ಲಾ ಆರೋಗ್ಯಾಧಿಕಾರಿ ಗೋವಿಂದರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್‌, ಖಜಾಂಚಿ ಡಿ.ಕೆ.ಮಹೇಂದ್ರ ಕುಮಾರ್‌ ಹಾಗೂ ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next