ಮಳೆಯೆಂಬುದು ಸೌಂದರ್ಯದ ರಾಯಭಾರಿ. ಹಸಿರು, ಹೂವು, ಧೋ ಎನ್ನುವ ನಿಸರ್ಗ ಸಂಗೀತಗಳೆಲ್ಲ ಮಾನ್ಸೂನ್‌ನ ಮರೆಯಲಾಗದ ಕಚಗುಳಿ. ಈ ಆಹ್ಲಾದ ವಾತಾವರಣದಲ್ಲಿ ನಮ್ಮ ದೇಹದ ಚರ್ಮವೂ ಅತ್ಯಂತ ಮೃದುತ್ವ ಪಡೆಯುತ್ತದೆ. ಅದಕ್ಕೆ ಸೂಕ್ತ ಉಪಚಾರ ದೊರೆತರೆ, ಆಕರ್ಷಕ ಕಾಂತಿ ಪಡೆಯುತ್ತದೆ…
– ಮುಖವನ್ನು ಮಾಯಿಶ್ಚರೈಸರ್‌ಗೊಳಿಸಲು, ಮೊಗದ ತೇವಾಂಶವರ್ಧಕವಾಗಿ ಗುಲಾಬಿ ಜಲ ಮತ್ತು ಗ್ಲಿಸರಿನ್ ಲೇಪನ ಹಚ್ಚಿದರೆ ಉತ್ತಮ ಫಲಿತಾಂಶ ದೊರಕುತ್ತದೆ.
– ಸ್ವಲ್ಪ ನೀರಿನಲ್ಲಿ ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ, ಹೆಸರು ಹಿಟ್ಟನ್ನು ಕರಗಿಸಬೇಕು. ಈ ಪೇಸ್ಟ್‌ಗೆ ಹಾಲು, ಜೇನು ಹಾಗೂ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ, ಮೃದುವಾಗಿ ತಿಕ್ಕಿ ತೊಳೆದರೆ, ಮೊಗದ ಚರ್ಮಕ್ಕೆ ಮೃದುತ್ವ, ಮಾರ್ದವತೆ ಸಿಗುತ್ತದೆ.
– ಮಳೆ ಎಷ್ಟೇ ಇದ್ದರೂ, ನಿತ್ಯವೂ 3 ಲೀಟರ್‌ನಷ್ಟು ಉಗುರು ಬೆಚ್ಚಗಿರುವ ನೀರಿನ ಸೇವನೆ ತಪ್ಪಿಸಬಾರದು.
– ಸ್ನಾನ ಮಾಡುವ ಮುನ್ನ, ಬಿಸಿ ನೀರಿಗೆ ಲಿಂಬೆರಸ ಮದ್ದು ಗುಲಾಬಿ ದಳವನ್ನು ಬೆರೆಸಿ, ಸ್ನಾನ ಮಾಡಿದರೆ ಚರ್ಮದ ತ್ವಚೆ ಹಿಗ್ಗುತ್ತದೆ.
– ತಾಜಾ ಗುಲಾಬಿ ದಳಗಳನ್ನು 15 ನಿಮಿಷ ಕುದಿಸಿ, ತಣಿಸಿದ ಹಾಲಿನಲ್ಲಿ ನೆನೆಸಿಡಬೇಕು. ತದನಂತರ ಅರೆದು ಪೇಸ್ಟ್ ತಯಾರಿಸಿ, ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ಮುಖ ತೊಳೆದರೆ ಶುಭ್ರ ಕಾಂತಿ ಸಿಗುತ್ತದೆ.