Advertisement

ವಂಚಕ ಕಂಪನಿಗಳ ಮೇಲೆ ಕಣ್ಣಿಡಿ

12:58 AM Jun 19, 2019 | Team Udayavani |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್‌ ಕುಮಾರ್‌, ಮಂಗಳವಾರ ನಗರದ ಎಲ್ಲ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಮೊದಲ ಸಭೆ ನಡೆಸಿ, ಅಪರಾಧ ನಿಯಂತ್ರಣದ ಬಗ್ಗೆ ಸಲಹೆ ಸೂಚನೆ ನೀಡಿದರು.

Advertisement

ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಆಗಬೇಕು, ರೌಡಿಗಳು, ಸರಗಳ್ಳರ ಮೇಲೆ ನಿಗಾವಹಿಸಬೇಕು, ಮಾದಕ ವಸ್ತು ಮಾರಾಟ ದಂಧೆಕೋರರು, ವೇಶ್ಯಾವಾಟಿಕೆ, ಅಕ್ರಮ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು, ಭೂಕಬಳಿಕೆ ಮಾಡುವವರ ಮೇಲೆ ನಿಗಾ ವಹಿಸಬೇಕು.

ಅಧಿಕ ಬಡ್ಡಿ, ನಿವೇಶನದ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಂಚಕ ಕಂಪನಿ ಹಾಗೂ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ನಿಗದಿತ ಸಮಯದಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲ ವಲಯಗಳ ಡಿಸಿಪಿಗಳು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು ಪಾಲ್ಗೊಂಡಿದ್ದರು. ನಗರದಲ್ಲಿ ಪ್ರತಿ ನಿತ್ಯ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವೆಲ್ಲವನ್ನು ಸಂಪೂರ್ಣವಾಗಿ ನಿಭಾಯಿಸುವ ಹೊಣೆ ಪೊಲೀಸರ ಮೇಲಿದೆ. ಹೀಗಾಗಿ ಸಾರ್ವಜನಿಕರ ರಕ್ಷಣೆಗಾಗಿ ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವ್ಯವಸ್ಥೆ ಗಟ್ಟಿಯಾಗಬೇಕು: ಪೊಲೀಸ್‌ ಇಲಾಖೆಯಲ್ಲಿ ಜಾರಿಯಲ್ಲಿರುವ ಬೀಟ್‌ ಪೊಲೀಸ್‌ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿ ಮಾಡಬೇಕು. ಪ್ರತಿ ಬೀಟ್‌ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ವಂಚಕ ಕಂಪನಿಗಳು, ಉದ್ಯಮಿಗಳು ಹಾಗೂ ಇತರೆ ಎಲ್ಲ ಮಾಹಿತಿ ತಿಳಿದಿರಬೇಕು. ಯಾವುದೇ ಅನಾಹುತ ಸಂಭವಿಸಿದರೂ ತಕ್ಷಣ ಎಲ್ಲ ರೀತಿಯ ಕಾನೂನು ಕ್ರಮಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿರಬೇಕು.

Advertisement

ಪ್ರಮುಖವಾಗಿ ಪೊಲೀಸರೆಂದರೆ ಸಾರ್ವಜನಿಕರ ವಲಯದಲ್ಲಿ ಭಯದ ವಾತಾವರಣ ಇದೆ. ಅದನ್ನು ದೂರ ಮಾಡಲು ಠಾಣೆಗೆ ಬರುವ ಸಾರ್ವಜನಿಕರ ಜತೆ ಸಿಬ್ಬಂದಿ “ಜನಸ್ನೇಹಿ’ಯಾಗಿ ನಡೆದುಕೊಳ್ಳಬೇಕು. ಅರ್ಜಿಗಳು, ಸಣ್ಣ-ಪುಟ್ಟ ಪ್ರಕರಣಗಳನ್ನು ಠಾಣಾ ಮಟ್ಟದಲ್ಲೇ ಇತ್ಯರ್ಥ ಪಡಿಸಲು ಆದಷ್ಟು ಪ್ರಯತ್ನಿಸಿ, ಸಾಧ್ಯವಾಗದಿದ್ದರೆ ಪ್ರಕರಣ ದಾಖಲಿಸಿಕೊಂಡು ತತ್‌ಕ್ಷಣ ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳಿ.

ಕಮಿಷನರ್‌ ಕಚೇರಿಗೆ ಬಂದು ದೂರು ನೀಡುವವರೆಗೂ ಯಾವುದೇ ಪ್ರಕರಣವನ್ನು ಇಟ್ಟುಕೊಳ್ಳಬೇಡಿ. ಒಂದು ವೇಳೆ ಇಲಾಖೆಯ ಸಿಬ್ಬಂದಿ ಅಥವಾ ಅಧಿಕಾರಿಗಳ ವಿರುದ್ಧ ಯಾರಾದರೂ ನೇರವಾಗಿ ತಮಗೆ ದೂರು ನೀಡಿದರೆ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಐಎಂಎ ರೀತಿಯ ಕಂಪನಿಗಳ ಪತ್ತೆ ಹಚ್ಚಿ: ಅಧಿಕ ಬಡ್ಡಿ, ನಿವೇಶನ ಕೊಡುವುದಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕಂಪನಿಗಳು ನಗರದಲ್ಲಿ ಬೇರುಬಿಟ್ಟಿವೆ. ಅಂತಹ ಕಂಪನಿಗಳ ಮೇಲೆ ನಿಗಾವಹಿಸಬೇಕು ಎಂದು ಅಲೋಕ್‌ಕುಮಾರ್‌ ನಿರ್ದೇಶನ ನೀಡಿದ್ದಾರೆ.

ಪ್ರತಿ ಠಾಣಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿ, ಆಮಿಷಗಳನ್ನೊಡಿ ಜನರಿಂದ ಹಣ ಸಂಗ್ರಹಿಸುತ್ತಿರುವ ಕಂಪನಿ ನೋಂದಣಿ ಆಗಿದೆಯೇ? ಅದರ ಮಾಲೀಕರು ಯಾರು ಎಂಬ ಬಗ್ಗೆ ಪೂರ್ವಾಪರ ಪರಿಶೀಲಿಸಬೇಕು. ನಂತರ ಆ ವಂಚಕ ಕಂಪನಿಗಳ ಮಾಹಿತಿಯನ್ನು ಸಂಬಂಧಿಸಿದ ಕಂದಾಯ ಇಲಾಖೆ ಹಾಗೂ ಪರವಾನಗಿ ನೀಡುವ ಇತರೆ ಇಲಾಖೆಗಳಿಗೆ ಲಿಖೀತ ಅಥವಾ ಮೌಖೀಕ ರೂಪದಲ್ಲಿ ಮಾಹಿತಿ ನೀಡಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಬೇಕು.

ಒಂದು ವೇಳೆ ಇಲಾಖಾ ಮಟ್ಟದಲ್ಲಿ ಕ್ರಮಕೈಗೊಳ್ಳದಿದ್ದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಯಂ ಪ್ರೇರಿತ ದೂರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯಾವಾಗ ಬೇಕಾದರೂ ಠಾಣೆಗೆ ಬರುತ್ತೇನೆ: ಸಾರ್ವಜನಿಕರ ದೂರುಗಳನ್ನು ಆಧರಿಸಿ ಅಥವಾ ಸ್ವಯಂ ಪ್ರೇರಿತವಾಗಿ ಯಾವುದೇ ಸಂದರ್ಭಧಲ್ಲಿ ನಿಮ್ಮ ಠಾಣೆಗಳಿಗೆ ಭೇಟಿ ನೀಡಬಹುದು. ಅಂತಹ ಸಂದರ್ಭದಲ್ಲಿ ಯಾವಾದರೂ ಕರ್ತವ್ಯಲೋಪ ಕಂಡು ಬಂದರೆ, ಅಧಿಕಾರಿಗಳ ತಲೆದಂಡ ಖಚಿತ.

ಅದಕ್ಕೆ ಯಾರು ಅವಕಾಶ ಕೊಡಬೇಡಿ. ನಿಮ್ಮ ಠಾಣೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಜತೆಗೆ ಠಾಣಾ ವ್ಯಾಪ್ತಿಯಲ್ಲಿ ಶಾಂತತೆ ಕಾಪಾಡಿಕೊಳ್ಳಬೇಕು ಎಂದು ಅಲೋಕ್‌ ಕುಮಾರ್‌ ಎಲ್ಲ ಹಂತದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next