Advertisement

ಕೇದಾರನಾಥ ಶುಗರ್ ; ಕಬ್ಬಿನ ಬಾಕಿ ಕೊಡಲು ಒತ್ತಾಯ

04:03 PM Oct 10, 2020 | sudhir |

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಕಳೆದ 2011ರಲ್ಲಿ ಸ್ಥಗಿತಗೊಂಡಿದ್ದು, ಈವರೆಗೆ ಕಬ್ಬು ಪೂರೈಸಿದ ರೈತರ ಬಾಕಿ ನೀಡಿಲ್ಲ. ಕೂಡಲೇ ರೈತರ ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ಜಿಲ್ಲೆಯ ರೈತರು
ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿ.ಪಂ. ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ
ಕೋಮಾರ ಮಾತನಾಡಿ, ಕೇದಾರನಾಥ ಶುಗರ್ಸ್ ಮತ್ತು ಅಗ್ರೋ ಪ್ರೊಡಕ್ಟ್ ಲಿ. ಕಾರ್ಖಾನೆಗೆ ಕಳೆದ 2010-11ನೇ ಸಾಲಿನಲ್ಲಿ ರೈತರು ಕಬ್ಬು ಪೂರೈಸಿದ್ದರು. ಸುಮಾರು 2 ಸಾವಿರ ರೈತರಿಗೆ 14 ಕೋಟಿ ಬಾಕಿ ಕೊಡಬೇಕಿದೆ. ಅಲ್ಲದೇ 2 ಕೋಟಿ ರೂ. ಸ್ವಯಂ ಕಬ್ಬು ಕಡಿದು ಕಳುಹಿಸಿದ ರೈತರಿಗೆ ಕೊಡಬೇಕಿದೆ. ಕಬ್ಬು ಸಾಗಾಣಿಕೆ ಬಿಲ್‌ಗ‌ಳನ್ನು ಟ್ರ್ಯಾಕ್ಟರ್‌ ಮಾಲಿಕರೂ ನೀಡಬೇಕಿದೆ. ಆದರೆ, ಕಾರ್ಖಾನೆ 2011ರಲ್ಲಿ ಸ್ಥಗಿತಗೊಂಡಿದ್ದು, ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ರೈತರು ತೀವ್ರ ಸಮಸ್ಯೆ ಅನುಭವಿಸಿದ್ದಾರೆ.

ಇದನ್ನೂ ಓದಿ:‘ಬ್ರೇಕ್ ದಿ ಬಿಯರ್ಡ್’ ಚಾಲೆಂಜ್ ಸ್ವೀಕರಿಸಿದ ಕೃನಾಲ್ ಪಾಂಡ್ಯ, ಡು ಪ್ಲೆಸಿಸ್

ಈ ಕುರಿತು 2011ರಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2011ರಲ್ಲಿ ಕಾರ್ಖಾನೆ ರೈತರಿಗೆ ಬಾಕಿ ಕೊಡಬೇಕಿದ್ದ ಹಿನ್ನೆಲೆಯಲ್ಲಿ ಅಂದಿನ ಬಾದಾಮಿ ತಹಶಿಲ್ದಾರರು, ಸಕ್ಕರೆ ದಾಸ್ತಾನ ಹರಾಜು ಹಾಕಿ ರೈತರ ಬಾಕಿ ಕೊಡಲು ಮುಂದಾಗಿದ್ದರು. ಆದರೆ, ಬ್ಯಾಂಕಿನವರು ಇದಕ್ಕೆ ತಡೆಯಾಜ್ಞೆ ತಂದಿದ್ದರಿಂದ
ರೈತರಿಗೆ ಬಾಕಿ ಕೊಡಲು ಆಗಲಿಲ್ಲ. ಕಳೆದ ವಾರ ಈಗಿನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರೆ ಇಷ್ಟುದಿನ
ಮಲಗಿದ್ದಾರಾ ಎಂದು ಕೇಳಿದ್ದಾರೆ ಎಂದು ಆರೋಪಿಸಿದರು.

ಕೇದಾರನಾಥ ಶುಗರ್ಸ್ ನಿಂದ ಕಬ್ಬು ಪೂರೈಕೆದಾರರು, ಟ್ರ್ಯಾಕ್ಟರ್‌ ಮಾಲಿಕರು ಹೀಗೆ ಹಲವರಿಗೆ ಬಾಕಿ ಕೊಡಬೇಕಿದೆ.
ಆದರೆ, ಇದೀಗ ಮುರುಗೇಶ ನಿರಾಣಿ ಅವರು ಈ ಕಾರ್ಖಾನೆ ಪುನಾರಂಭಿಸಿದ್ದಾರೆ. ಈ ವೇಳೆ ರೈತರನ್ನು ಪರಿಗಣಿಸಿಲ್ಲ. ಬಾಕಿಯೂ ಕೊಟ್ಟಿಲ್ಲ. ರೈತರ ಬಾಕಿ ತಕ್ಷಣ ಕೊಡಿಸಬೇಕು. ಇಲ್ಲದಿದ್ದರೆ ಅ. 12ರಿಂದ ಕಾರ್ಖಾನೆಯ ಎದುರು ಅನಿರ್ದಿಷ್ಟ ಉಪವಾಸ
ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ಈರಪ್ಪ ಹಂಚಿನಾಳ, ಹುಸೇನ ಯಕ್ಕುಂಡಿ, ತುಕಾರಾಮ ಮ್ಯಾಗಿನಮನಿ, ರಾಮಚಂದ್ರ ಶೇರಖಾನೆ ಮುಂತಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next