Advertisement

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ

05:16 PM Jan 29, 2022 | Team Udayavani |

ಬಾವುಟಗುಡ್ಡೆ: ದಕ್ಷಿಣ ಕನ್ನಡದಲ್ಲಿ 1837ರಲ್ಲಿ ಸಾಮಾನ್ಯ ರೈತಾಪಿ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದವರ ಪೈಕಿ ಮಹತ್ವದ ಪಾತ್ರ ವಹಿಸಿದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ.

Advertisement

ಕೆದಂಬಾಡಿ ರಾಮಯ್ಯ ಗೌಡ ಅವರ ಹೋರಾಟದ ಅವಿಸ್ಮರಣೀಯ ಸಂಗತಿ ಗಳನ್ನು ಮುಂದಿನ ತಲೆಮಾರಿಗೆ ನೀಡುವ ಆಶಯದಿಂದ ಅವರ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿರ್ಮಿಸಬೇಕು ಎಂದು ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯು ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು.

ಇದರಂತೆ ದ.ಕ. ಜಿಲ್ಲಾಧಿಕಾರಿ ಅವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ಮಂಜೂರಾತಿಗೆ ಶಿಫಾರಸು ಮಾಡಿದ್ದರು. ಹೀಗಾಗಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆ ಹಾಗೂ ಪ್ರಮುಖರ ಹೆಸರನ್ನು ಶಿಲೆಯಲ್ಲಿ ಅಚ್ಚು ಮೂಡಿಸಲು 10 ಲಕ್ಷ ರೂ. ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಜೂರಾತಿಗೆ ಪೂರ್ವಾನುಮತಿ ನೀಡಲಾಗಿದೆ. ಪ್ರಸ್ತಾವಿತ ಸ್ಥಳವು ಮಂಗಳೂರು ಮಹಾನಗರ ಪಾಲಿಕೆಯ ಅಧೀನ ಸ್ಥಳವಾಗಿರುವುದರಿಂದ ಇದೀಗ ಈ ವಿಚಾರ ಪಾಲಿಕೆಯ ಅಂಗಳಕ್ಕೆ ಬರಲಿದೆ. ಪ್ರತಿಮೆ ನಿರ್ಮಾಣಕ್ಕೆ ಅಂದಾಜು ಮೊತ್ತ 40 ಲಕ್ಷ ರೂ. ಆವಶ್ಯಕತೆ ಇದೆ. ಈ ಪೈಕಿ ಸರಕಾರದಿಂದ ಪೂರ್ವಾನುಮತಿ ಮಂಜೂರಾತಿಯಲ್ಲಿ ದೊರೆತಿರುವ 10 ಲಕ್ಷ ರೂ.ಗಳನ್ನು ಬಳಸಿ ಪ್ರತಿಮೆ ಪ್ರತಿಷ್ಠಾಪಿಸಲು ಪಾಲಿಕೆಯಿಂದ ನಿರ್ಣಯ ಮಾಡುವಂತೆ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯು ಪಾಲಿಕೆಯನ್ನು ಕೋರಿದೆ. ಇದಕ್ಕೆ ಪೂರಕವಾಗಿ ಮನಪಾ ಸ್ಥಳೀಯ ಸದಸ್ಯ ಎ.ಸಿ. ವಿನಯ್‌ರಾಜ್‌ ಅವರು ಮೇಯರ್‌ಗೆ ಪತ್ರ ಬರೆದು ಸ್ಮಾರಕ ಪ್ರತಿಷ್ಠಾಪಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಸ್ವಾತಂತ್ರ್ಯ ಸಂಭ್ರಮಾಚರಣೆಯ ಅಮೃತ್‌ ಮಹೋತ್ಸವದ ವರ್ಷಾಚರಣೆ ಸಂದರ್ಭ ಸ್ವಾತಂತ್ರÂ ಹೋರಾಟಗಾರರಿಗೆ ಗೌರವ ಸೂಚಿಸಲು ಸಾಧ್ಯವಾಗುವ ನೆಲೆಯಲ್ಲಿ ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ಬಾವುಟಗುಡ್ಡೆಯಲ್ಲಿ ಈ ಹಿಂದೆ ಬಾವುಟ ಹಾರಿಸಿದ ಕುರುಹು ಇರುವ ಕಾರಣ ಅದೇ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ.

ಹುತಾತ್ಮರ ಕಥೆ ಅಜರಾಮರ
1837ರಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಸಾಮಾನ್ಯ ರೈತಾಪಿ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಕಥೆಯು ಮುಂದಿನ ತಲೆಮಾರಿಗೆ ಶಾಶ್ವತವಾಗಿ ದೊರೆಯಬೇಕಾಗಿದೆ. ಅಂದು ಹೋರಾಟದ ಮುಂಚೂಣಿಯಲ್ಲಿ ನಿಂತ ಕೆದಂಬಾಡಿ ರಾಮಯ್ಯ ಗೌಡರ ನೆನಪಿನಲ್ಲಿ ಮಂಗಳೂರಿನಲ್ಲಿ ಕಂಚಿನ ಪ್ರತಿಮೆ ಸ್ಥಾಪನೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಂತೆ ಒಪ್ಪಿಗೆ ದೊರೆತಿದ್ದು, ಪಾಲಿಕೆಯು ಈ ನಿಟ್ಟಿನಲ್ಲಿ ವಿಶೇಷ ನೆರವು ನೀಡುವ ನಿರೀಕ್ಷೆಯಿದೆ.
ಕಿರಣ್‌ ಬುಡ್ಲೆಗುತ್ತು,
ಅಧ್ಯಕ್ಷರು, ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿ

ಪಾಲಿಕೆಯಲ್ಲಿ ಕಾರ್ಯಸೂಚಿ ಮಂಡನೆ
ಸ್ವಾತಂತ್ರÂ ಹೋರಾಟಗಾರರಲ್ಲಿ ಪ್ರಮುಖರಾದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಬಾವುಟಗುಡ್ಡೆ-ಠಾಗೋರ್‌ ಉದ್ಯಾನವನದಲ್ಲಿ ಸ್ಥಾಪಿಸುವ ಬಗ್ಗೆ ಅನುಮೋದನೆ ಕೋರಿ ಪಾಲಿಕೆಗೆ ಪತ್ರಬಂದಿದೆ. ಮುಂದಿನ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಕಾರ್ಯಸೂಚಿ ಮಂಡಿಸಿ ಅನುಮೋದನೆಗೆ ಪ್ರಯತ್ನಿಸಲಾಗುವುದು.
-ಪ್ರೇಮಾನಂದ ಶೆಟ್ಟಿ, ಮೇಯರ್‌, ಮನಪಾ

Advertisement

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next