ಹೊಸದಿಲ್ಲಿ: ಅಪ್ರಾಪ್ತರು ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿದರೆ, ಅದನ್ನು ಗಂಭೀರ ಸಂಚಾರಿ ಅಪರಾಧವಾಗಿ ಪರಿಗಣಿಸಲು ಕೇಂದ್ರ ಸರಕಾರ ಮುಂದಾಗಿದೆ. ಸಂಸತ್ತಿನಲ್ಲಿ ಮೋಟಾರ್ ವಾಹನ ಕಾಯ್ದೆ- 2017ರ ತಿದ್ದುಪಡಿಗೆ ಚರ್ಚೆ ನಡೆಯುತ್ತಿದ್ದು, ಇಂಥ ಪ್ರಕರಣಗಳಿಗೆ ಹೆತ್ತವರನ್ನೇ ಹೊಣೆ ಆಗಿಸಲು ಪ್ರಸ್ತಾವಿಸ ಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವಾಹನ ನೀಡುವುದನ್ನು ತಪ್ಪಿಸಲು ಈ ಮಹತ್ವದ ತಿದ್ದುಪಡಿ ತರು ವಂತೆ ಕೇಂದ್ರ ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಕುಡಿದು ವಾಹನ ಓಡಿಸಿದ್ರೂ ಜೋಕೆ!: ಇನ್ನು ಮುಂದೆ ಕುಡಿದು ವಾಹನ ಚಲಾಯಿಸುವಾಗ ಸಂಭವಿಸುವ ಅಪಘಾತಕ್ಕೂ ಕಠಿನ ಶಿಕ್ಷೆ ನಿಶ್ಚಿತ. ಪ್ರಸ್ತುತ ಪಾನಮತ್ತರಾಗಿ ವಾಹನ ಚಲಾಯಿಸುವಾಗ ಎದುರಿನ ವ್ಯಕ್ತಿ ಸಾವಿಗೀಡಾದರೆ ಐಪಿಸಿ 304ಎ ಸೆಕ್ಷನ್ ಅಡಿಯಲ್ಲಿ ಕೇಸು ದಾಖ ಲಿಸಿ, ಅಪರಾಧಿಗೆ 2 ವರ್ಷ ಜೈಲು ಮತ್ತು ದಂಡವನ್ನು ವಿಧಿಸಲಾಗುತ್ತಿತ್ತು. ಆದರೆ, ಮೋಟಾರ್ ವಾಹನ ಕಾಯ್ದೆಯ ತಿದ್ದುಪಡಿಯಂತೆ ಇನ್ನು ಮುಂದೆ ಇಂಥ ಪ್ರಕರಣಗಳಿಗೆ ಜಾಮೀನೂ ಇರುವುದಿಲ್ಲ. ಅಲ್ಲದೆ, 10 ವರ್ಷ ಜೈಲು ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ.
ಪ್ರಸ್ತಾವದಲ್ಲಿ ಇನ್ನೇನಿದೆ?: ಮೋಟಾರ್ ವಾಹನ ಕಾಯ್ದೆಯ ತಿದ್ದುಪಡಿಯಲ್ಲಿ ಇನ್ನೂ ಮಹತ್ವದ ವಿಚಾರಗಳನ್ನು ಸೇರಿಸಿಕೊಳ್ಳಲಾಗಿದೆ. ವಾಹನ ಅಪರಾಧ ದಂಡ ನೀತಿಯನ್ನು 30 ವರ್ಷಗಳ ನಂತರ ತಿದ್ದುಪಡಿ ಮಾಡಲಾಗಿದ್ದು, ದಂಡವನ್ನು ವಾರ್ಷಿಕ ಶೇ. 10ರಂತೆ ಹೆಚ್ಚಿಸ ಲಾಗುವುದು. ಡ್ರೈವಿಂಗ್ ಲೈಸೆನ್ಸ್ ನೀಡುವಾಗ ಕಡ್ಡಾಯವಾಗಿ ಸಾಮರ್ಥಯ ಪರೀಕ್ಷೆ, ರಾಜ್ಯದ ಎಲ್ಲೆಡೆ ಪರವಾನಗಿಗೆ ಅವಕಾಶ, ರಾಜ್ಯಗಳಿಗೆ ಸ್ವತಂತ್ರ ಟ್ಯಾಕ್ಸಿ ಪಾಲಿಸಿ ನೀಡುವುದು, ಖರೀದಿಸಿದ ವಾಹನದಲ್ಲಿ ದೋಷವಿದ್ದರೆ ಅದನ್ನು ಹಿಂತಿರುಗಿಸುವ ಅವಕಾಶವನ್ನೂ ಇಲ್ಲಿ ಸೇರಿಸಿಕೊಳ್ಳಲಾಗಿದೆ. ಅಲ್ಲದೆ, 4 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಹೆಲ್ಮೆಟ್ ಕಡ್ಡಾಯ, ಅಪಘಾತಕ್ಕೊಳಪಟ್ಟ ವ್ಯಕ್ತಿಯನ್ನು ಶುಶ್ರೂಷೆ ಮಾಡಿದ ವೈದ್ಯರು, ನರ್ಸ್ ಹಾಗೂ ವ್ಯಕ್ತಿಗಳನ್ನು ಉತ್ತಮ ಭಾವನೆಯಿಂದ ಕಾಣುವುದು, ಪ್ರತಿ 30 ಕಿ.ಮೀ.ವರೆಗೆ ಆ್ಯಂಬುಲೆನ್ಸ್ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು, ಚಾಲಕರು- ಕ್ಲೀನರುಗಳಿಗೆ ಜೀವವಿಮೆ ಕಡ್ಡಾಯ, ಅಧಿಕ ಲೋಡ್ ಇರುವ ವಾಹನ ಸಂಚಾರ ತಡೆಯಲು ಕ್ರಮ ಕೈಗೊಳ್ಳಲು ಮೋಟಾರ್ ವಾಹನ ಕಾಯ್ದೆ ಮುಂದಾಗಿದೆ.
ಮುಖ್ಯಾಂಶಗಳು
ವಾರ್ಷಿಕವಾಗಿ ದಂಡ ಶೇ.10 ರಷ್ಟು ಹೆಚ್ಚಳ
ಡ್ರೈವಿಂಗ್ ಲೈಸೆನ್ಸ್1 ನೀಡುವಾಗ ಸಾಮರ್ಥ್ಯ ಪರೀಕ್ಷೆ
ರಾಜ್ಯದೆಲ್ಲೆಡೆ ಪರವಾನಿಗೆಗೆ ಅವಕಾಶ
ರಾಜ್ಯಗಳಿಗೆ ಸ್ವತಂತ್ರ್ಯ ಟ್ಯಾಕ್ಸಿ ಪಾಲಿಸಿ
ಖರೀದಿಸಿದ ವಾಹನದಲ್ಲಿ ದೋಷವಿದ್ದರೆ ವಾಪಸ್
4 ವರ್ಷಕ್ಕಿಂತ ಮೇಲಿನವರಿಗೆ ಕಡ್ಡಾಯ ಹೆಲ್ಮೆಟ್