Advertisement

KEA; ವೈದ್ಯಕೀಯ, ದಂತ ವೈದ್ಯಕೀಯ: ಖಾಲಿ ಸೀಟುಗಳ ಹಂಚಿಕೆಗೆ ವಿಶೇಷ ಸುತ್ತು

08:17 PM Nov 03, 2023 | Team Udayavani |

ಬೆಂಗಳೂರು: ಇದುವರೆಗಿನ ಹಂಚಿಕೆಯ ನಂತರವೂ ಉಳಿದಿರುವ 133 ವೈದ್ಯಕೀಯ ಸೀಟುಗಳು ಮತ್ತು ದಂತ ವೈದ್ಯಕೀಯ ಸೀಟುಗಳನ್ನು `ಸ್ಟ್ರೇ ವೇಕೆನ್ಸಿ ರೌಂಡ್’ ಮೂಲಕ ಆನ್ಲೈನ್ ವಿಧಾನದಲ್ಲಿ ಹಂಚಲಾಗುವುದು. ಇದುವರೆಗಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಸೀಟುಗಳನ್ನು ಪಡೆದುಕೊಳ್ಳದೆ ಇರುವ ಆಸಕ್ತರು ಮಾತ್ರ ಇದರಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Advertisement

ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಈಗಾಗಲೇ ನಡೆದಿರುವ ಸೀಟು ಹಂಚಿಕೆಯಲ್ಲಿ ದಂತ ವೈದ್ಯಕೀಯ, ಆಯುಷ್ ಮತ್ತು ಇಂಜಿನಿಯರಿಂಗ್ ಸೀಟು ಪಡೆದುಕೊಂಡಿರುವವರು ಕೂಡ ಭಾಗವಹಿಸಬಹುದು. ಈ ವಿಶೇಷ ಸುತ್ತಿನಲ್ಲಿ ಒಂದು ವೇಳೆ ಸೀಟು ಲಭ್ಯವಾದರೆ, ಅಂಥವರಿಗೆ ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾಗಿರುವ ಸೀಟುಗಳು ರದ್ದಾಗುತ್ತವೆ. ಜತೆಗೆ ಅವುಗಳಿಗೆ ಪಾವತಿಸಿರುವ ಶುಲ್ಕವನ್ನು ಕೂಡ ಹಿಂದಿರುಗಿಸಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಸಕ್ತ ಅಭ್ಯರ್ಥಿಗಳು ನ.7ರ ಬೆಳಿಗ್ಗೆ 10 ಗಂಟೆಯಿಂದ ನ.8ರ ಮಧ್ಯಾಹ್ನ 2 ಗಂಟೆಯ ಒಳಗೆ ನಿಗದಿತ ಮೊತ್ತದ ಡಿ.ಡಿ., ವೆರಿಫಿಕೇಶನ್ ಸ್ಲಿಪ್ ಮತ್ತು ಎಲ್ಲ ಮೂಲ ದಾಖಲಾತಿಗಳೊಂದಿಗೆ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು. ಬಳಿಕ, ಅಭ್ಯರ್ಥಿಗಳಿಗೆ `ಆಪ್ಶನ್ಸ್’ ದಾಖಲಿಸಲು ಪೋರ್ಟಲ್ ತೆರೆದು, ನ.9ರ ಬೆಳಿಗ್ಗೆ 9 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗುವುದು. ಇದೇ ರೀತಿಯಲ್ಲಿ ದಂತ ವೈದ್ಯಕೀಯ ಸೀಟುಗಳಿಗಾಗಿ ನ.10ರಂದು ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ವೈದ್ಯಕೀಯ/ದಂತ ವೈದ್ಯಕೀಯ ಸೀಟುಗಳು ಖಾಲಿ ಇರುವ ಕಾಲೇಜುಗಳಲ್ಲಿ ನಿಗದಿಪಡಿಸಿರುವ ಶುಲ್ಕ, ಸೀಟು ಹಂಚಿಕೆ ಫಲಿತಾಂಶ, ಪ್ರವೇಶ ಪ್ರಕ್ರಿಯೆ ಮುಗಿಸಲು ಇರುವ ಗಡುವು ಇತ್ಯಾದಿಗಳಿಗಾಗಿ ಪ್ರಾಧಿಕಾರದ ಜಾಲತಾಣ //kea.kar.nic.in ನೋಡಬಹುದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next