ಮೈಸೂರು: ಶಾಲೆಗಳಿಗೆ ಕಳಪೆ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿರುವುದರ ಬಗ್ಗೆ ದೂರುಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಇದನ್ನು ತಡೆಗಟ್ಟುವಂತೆ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕಳಪೆ ಅಕ್ಕಿ, ಬೇಳೆ ವಿತರಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಮೊದಲು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ನಂತರ ಶಾಲೆಗಳಿಗೆ ನೀಡಬೇಕು. ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಲೋಪದೋಷವಿದ್ದರೆ ಮುಖ್ಯ ಶಿಕ್ಷಕರುಗಳಿಗೆ ಆಹಾರ ಪದಾರ್ಥಗಳನ್ನು ತಿರಸ್ಕರಿಸುವಂತೆ ಮಾಹಿತಿ ನೀಡಿ ಎಂದು ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಜಿಪಂ ಸಿಇಒ ಡಿ.ಭಾರತಿ ಮಾತನಾಡಿ, ಶಾಲೆಗಳಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನುಪಡೆದುಕೊಂಡು ಮಕ್ಕಳಿಗೆ ವಿತರಣೆ ಮಾಡುವಾಗ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ವಿತರಿಸಿ. ಯಾವುದೇ ಕಾರಣಕ್ಕೂ ಮಕ್ಕಳ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬೇಡಿ ಎಂದು ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಹಾರ ಪದಾರ್ಥಗಳ ವಿತರಣೆಗೆ ಆದೇಶ: ಅಕ್ಷರ ದಾಸೋಹದಲ್ಲಿ ಕೋವಿಡ್ ಹಿನ್ನೆಲೆ ಮೇ ವರಗೆ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಆಹಾರಪದಾರ್ಥಗಳನ್ನು ಎರಡು ಹಂತದಲ್ಲಿ ವಿತರಿಸುವಂತೆ ಸರ್ಕಾರ ಆದೇಶಿಸಿದೆ. ಈಗಾಗಲೇ ನಮ್ಮಲ್ಲಿ ಅಕ್ಕಿ ಸ್ಟಾಕ್ ಇದ್ದು, ಬೇಳೆ ಬಂದ ಕೂಡಲೇ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಆರ್. ಶಿವಣ್ಣ ಸಭೆಗೆ ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ: ಸರ್ಕಾರಿ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ ವ್ಯವಸ್ಥೆ ಇಲ್ಲದ ಕಾರಣ ಮನೆಯಲ್ಲೇ ಪೋಷಕರಿಂದ ಕಲಿಕೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ಬಗ್ಗೆ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಒತ್ತು ನೀಡಿ. ಪ್ರತಿ ತಿಂಗಳು ತಾಲೂಕಿನ ಬಿಇಒಗಳ ಜೊತೆ ಸಭೆ ನಡೆಸಿ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸಿ ಎಂದು ಅಧಿಕಾರಿಗಳಿಗೆ ಶಿಕ್ಷಣ ಮತ್ತು ಆರೋಗ್ಯ ಅಧ್ಯಕ್ಷ ಮಂಜುನಾಥ್ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸ್ಥಾಯಿ ಸಮಿತಿ ಸದಸ್ಯ ಎನ್. ಮಂಜುನಾಥ್, ಎ.ಎಂ.ಗುರುಸ್ವಾಮಿ ಹಾಗೂ ಜಿಪಂ ಯೋಜನಾಧಿಕಾರಿ ಎಸ್.ಧನುಷ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ನ.14ರಿಂದ ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ : ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಆರಂಭವಾಗದಕಾರಣ 6ರಿಂದ14 ವರ್ಷದ ಶಾಲಾ ಮಕ್ಕಳಿಗೆಕಲಿಕೆ ಸಂಬಂಧಿಸಿದ ವಿಷಯಗಳನ್ನು ಮುಟ್ಟಿಸಲು ಇದೇ ನ.14ರಿಂದ ಜ.24ರವರೆಗೆ10 ವಾರಗಳಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನವನ್ನುಕೈಗೊಳ್ಳಲು ಪ್ರಧಾನಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಜತೆಗೆ ಪ್ರೌಢ ಶಾಲೆಯ ಒಂದು ಹೆಣ್ಣು, ಒಂದು ಗಂಡು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರನ್ನೊಳಗೊಂಡಕಾರ್ಯಪಡೆ ರಚಿಸಲು ನಿರ್ದೇಶನ ನೀಡಿದ್ದಾರೆ ಎಂದು ಜಿಪಂ ಉಪಕಾರ್ಯದರ್ಶಿ ಪ್ರೇಮ್‌ಕುಮಾರ್ ತಿಳಿಸಿದರು.