Advertisement

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?

09:36 PM May 28, 2024 | Team Udayavani |

ಹೈದರಾಬಾದ್‌: ತೆಲಂಗಾಣದ ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಅಚ್ಚರಿಯ ವಿಷಯಗಳು ಬೆಳಕಿಗೆ ಬರುತ್ತಿವೆ.

Advertisement

ಬಿಜೆಪಿಯ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಬಂಧಿಸಲು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಯೋಜನೆ ರೂಪಿಸಿದ್ದರು. ಇದನ್ನು ಬಳಸಿಕೊಂಡು ಪುತ್ರಿ ಕೆ. ಕವಿತಾರನ್ನು ರಕ್ಷಿಸಿಕೊಳ್ಳಲು ಯೋಜಿಸಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟಿರುವ ಮಾಜಿ ಡಿಸಿಪಿ ಪಿ. ರಾಧಾಕಿಶನ್‌ ರಾವ್‌ ನೀಡಿರುವ ಹೇಳಿಕೆಗಳಲ್ಲಿ ಈ ಅಂಶಗಳಿವೆ. ಬಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣದಲ್ಲಿ ಬಿ.ಎಲ್‌. ಸಂತೋಷ್‌ ಅವರನ್ನು ಬಂಧಿಸಲು ದೊಡ್ಡಣ್ಣ (ಕೆಸಿಆರ್‌) ಸೂಚಿಸಿದ್ದರು. ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿದ್ದಲ್ಲದೆ ಪ್ರಕರಣವನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಸಂತೋಷ್‌ ಬಂಧನಕ್ಕೆ ಸೂಚಿಸಿದ್ದರು ಎಂದು ರಾಧಾಕಿಶನ್‌ ರಾವ್‌ ಹೇಳಿಕೆ ನೀಡಿದ್ದಾರೆ.

ಬಿ.ಎಲ್‌. ಸಂತೋಷ್‌ ಅವರನ್ನು ಬಂಧಿಸಿದರೆ ಬಿಜೆಪಿಯನ್ನು ಬಗ್ಗಿಸುವುದು ಸುಲಭವಾಗಲಿದೆ. ಈ ಮೂಲಕ ಕೆಸಿಆರ್‌ ಅವರ ಪುತ್ರಿ ಕೆ. ಕವಿತಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿರುವ ಪ್ರಕರಣದಲ್ಲಿ ಅವರನ್ನು ರಕ್ಷಿಸಬಹುದು ಎನ್ನುವುದು ಕೆಸಿಆರ್‌ ಲೆಕ್ಕಾಚಾರವಾಗಿತ್ತು. ಆದರೆ ಅವರು ಇಚ್ಛಿಸಿದಂತೆ ನಾವು ಕೆಲಸ ಮಾಡದ ಕಾರಣ ನಮ್ಮ ವಿರುದ್ಧ ಕೆಸಿಆರ್‌ ಸಿಟ್ಟಾಗಿದ್ದರು ಎಂದಿದ್ದಾರೆ.

ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಡಿಸಿಪಿ ರಾವ್‌ ಅವರನ್ನು ಕಳೆದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಫೋನ್‌ ಕದ್ದಾಲಿಕೆ ಜತೆಗೆ ಪ್ರಮುಖ ದಾಖಲೆಗಳನ್ನು ನಾಶ ಮಾಡಿದ್ದರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕವಿತಾ ಅವರನ್ನು ಇ.ಡಿ. ಬಂಧಿಸಿದೆ. ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಬಿಆರ್‌ಎಸ್‌ನ ಹಲವು ನಾಯಕರು ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಿದೆ.

Advertisement

ಏನಿದು ಪ್ರಕರಣ?
2019ರ ಲೋಕಸಭೆ ಚುನಾವಣೆಯ ಸಮಯದಲ್ಲಿ ವಿಪಕ್ಷಗಳ ಮೇಲೆ ನಿಗಾ ಇರಿಸಲು ಆಗ ಆಡಳಿತದಲ್ಲಿದ್ದ ಕೆ. ಚಂದ್ರಶೇಖರ ರಾವ್‌ ನೇತೃತ್ವದ ಸರಕಾರ ಪೊಲೀಸ್‌ ಇಲಾಖೆಯನ್ನು ಬಳಸಿಕೊಂಡಿತ್ತು. ವಿಪಕ್ಷಗಳ ನಾಯಕರ ಫೋನ್‌ ಕದ್ದಾಲಿಕೆ ಮಾಡಿಸಲಾಗಿತ್ತು. ತೆಲಂಗಾಣದಲ್ಲಿ ರೇವಂತ್‌ ರೆಡ್ಡಿ ನೇತೃತ್ವದ ಹೊಸ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಫೋನ್‌ ಟ್ಯಾಪಿಂಗ್‌ ಮತ್ತು ಕೆಲವು ಕಂಪ್ಯೂಟರ್‌ ಸಿಸ್ಟಂಗಳನ್ನು ನಾಶ ಮಾಡಿದ ಪ್ರಕರಣ ಸಂಬಂಧ ನಿವೃತ್ತ ಡಿಸಿಪಿ ರಾಧಾಕಿಶನ್‌ ರಾವ್‌ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ತೆಲಂಗಾಣ ಟಾಸ್ಕ್ ಫೋರ್ಸ್‌ನಲ್ಲಿ ಅಧಿಕಾರಿಯಾಗಿದ್ದ ಪಿ. ರಾಧಾಕಿಶನ್‌ ರಾವ್‌ ಈಗ ಈ ವಿಷಯವನ್ನು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next