Advertisement

ಕೆಸಿಡಿಸಿ ಪರ-ವಿರುದ್ಧ ಪ್ರತಿಭಟನೆ

12:52 PM Mar 21, 2017 | |

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಕೆಸಿಡಿಸಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಗಿತಗೊಳಿಸುವ ವಿಚಾರದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೆಸಿಡಿಸಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಗಿತಗೊಳಿಸುವಂತೆ ಸಂಸ್ಕರಣೆ ಘಟಕ ವಿರೋಧಿ ಸಂಘಟನೆಗಳ ಒಕ್ಕೂಟ ಭಾನುವಾರ ಅಹೋರಾತ್ರಿ ಧರಣಿ ನಡೆಸಿದರೆ ಮತ್ತೂಂದು ಗುಂಪು ಘಟಕ ಸ್ಥಳಾಂತರ ಬೇಡ ಎಂದು ಸೋಮವಾರ ಧರಣಿ ನಡೆಸಿತು.  

Advertisement

ಈ ಹಿನ್ನೆಲೆಯಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸಫ್ರಾಜ್‌ಖಾನ್‌  ಸ್ಥಳಕ್ಕೆ ಭೇಟಿ ನೀಡಿ ಎರಡೂ ಗುಂಪುಗಳ ಜತೆ ಮಾತುಕತೆ ನಡೆಸಿದರು. ಘಟಕವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಘಟಕ ಸ್ಥಗಿತಗೊಳಿಸದೆ ಸಮಸ್ಯೆ ಪರಿಹರಿಸಲು ಪರ್ಯಾಯ ಕ್ರಮಗಳಿಗೆ ಮುಂದಾಗಲು ಬಿಬಿಎಂಪಿ ಆಯುಕ್ತರು ಮತ್ತು ಸಚಿವರೊಂದಿಗೆ ಸಭೆ ನಡೆಸುವ ಭರವಸೆ ನೀಡಿದರು.

ಜಂಟಿ ಆಯುಕ್ತರ ಭರವಸೆ ಹಿನ್ನೆಲೆಯಲ್ಲಿ ಅಸೋಸಿಯೇಷನ್‌ ಸದಸ್ಯರು ಸೋಮವಾರ ಸಂಜೆ 5 ಗಂಟೆಗೆ ಅಹೋರಾತ್ರಿ ಪ್ರತಿಭಟನೆ ಹಿಂಪಡೆದರು. ಈ ವೇಳೆ ಮಾತನಾಡಿದ ಸಂಸ್ಕರಣೆ ಘಟಕ ವಿರೋಧಿ ಸಂಘಟನೆಗಳ ಒಕ್ಕೂಟದ ಸದಸ್ಯೆ ಕವಿತಾ ರೆಡ್ಡಿ, ಕೆಸಿಡಿಸಿ ಘಟಕವನ್ನು ಕೂಡಲೇ ಸ್ಥಗಿತಗೊಳಿಸಲು ಸಾಧ್ಯವಿಲ್ಲವೆಂದು ಹೇಳಿದ್ದು, ಘಟಕಕ್ಕೆ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯವನ್ನು ನಿಲ್ಲಿಸುವುಂತೆ ತಿಳಿಸಲಾಗಿದೆ.

ಜತೆಗೆ ಸೋಮಸಂದ್ರ ಕೆರೆಯನ್ನು ಸರ್ವೇ ಮಾಡಿಸಿ ಅಭಿವೃದ್ಧಿ ಮಾಡಿಕೊಡುವಂತೆ ತಿಳಿಸಿದ್ದು, ಕೆರೆ ಅಭಿವೃದ್ಧಿಗೆ ಒಪ್ಪಿಕೊಂಡಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಸಚಿವರೊಂದಿಗೆ ಸಭೆ ನಡೆಸುವುದಾಗಿ ಜಂಟಿ ಆಯುಕ್ತರು ಭರವಸೆ ನೀಡಿದ್ದು, ಸಭೆಯಲ್ಲಿ ಧನಾತ್ಮಕ ನಿರ್ಧಾರ ಬರದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.  ಘಟಕ ಸ್ಥಳಾಂತರ ಬೇಡ ಎಂದು ಒತ್ತಾಯಿಸಿದ ನಾಗರಾಜ್‌, ಕೆಸಿಡಿಸಿ ಘಟಕಕ್ಕೆ ನಿತ್ಯ 500 ಟನ್‌ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದೆ.

ಆದರೆ, ಘಟಕದಲ್ಲಿ ಸದ್ಯ 100 ಟನ್‌ ತ್ಯಾಜ್ಯ ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದಿಯಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿಯೂ ಈ ಪ್ರದೇಶದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಮೇಯರ್‌ ಭವಸೆ ನೀಡಿದ್ದಾರೆ. ಹೀಗಾಗಿ ಘಟಕ ಸ್ಥಗಿತಗೊಳಿಸಬಾರದು ಎಂದು ತಿಳಿಸಿದರು.

Advertisement

ಗುರುವಾರ ಸಭೆ: ಕೆಸಿಡಿಸಿ ಘಟಕದಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ ನಾಗರಿಕರ ಜತೆ ಬಿಬಿಎಂಪಿ ಆಯುಕ್ತರು ಹಾಗೂ ಸಚಿವರೊಂದಿಗೆ ಗುರುವಾರ (ಮಾ.23) ಸಭೆ ಏರ್ಪಡಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಯಾ ವಲಯದಲ್ಲಿ ವಿಲೇವಾರಿ ಮಾಡಲು ಘಟಕಗಳ ಸ್ಥಾಪನೆಗೆ ಪಾಲಿಕೆ ಮುಂದಾಗಬೇಕು. ಕೆಸಿಡಿಸಿ ಘಟಕ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದೆ. ಬೊಮ್ಮನಹಳ್ಳಿ ವಲಯದ ತ್ಯಾಜ್ಯವನ್ನು ಕೆಸಿಡಿಸಿಯಲ್ಲಿ ಸಂಸ್ಕರಣೆ ಮಾಡಲಿ, ಉಳಿದಂತೆ ನಗರದ ತ್ಯಾಜ್ಯವನ್ನು ಘಟಕಕ್ಕೆ ಹಾಕುವುದು ಬೇಡ. 
-ಮುನಿರೆಡ್ಡಿ, ಸ್ಥಳೀಯ ನಿವಾಸಿ

ಘಟಕದ ಸುತ್ತಲ ಪ್ರದೇಶವನ್ನು ಪರಿಶೀಲಿಸಿದ್ದು, ಎಲ್ಲೂ ದುರ್ವಾಸನೆಯಿಲ್ಲ. ಯಾವುದೇ ಕಾರಣಕ್ಕೂ ಘಟಕ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಘಟಕಕ್ಕೆ ಹಾಕಲಾಗುತ್ತಿದ್ದ ತ್ಯಾಜ್ಯವನ್ನು ಈಗಾಗಲೇ ಕಡಿಮೆ ಮಾಡಲಾಗಿದೆ. ಪ್ರಸ್ತುತ 100ರಿಂದ -120 ಟನ್‌ ಮಾತ್ರ ಸಂಸ್ಕರಣೆ ಮಾಡಲಾಗುತ್ತಿದೆ. ನಾಗರಿಕರ ತೊಂದರೆಗೆ ಕಾರಣವೇನು ಎಂದು ಪರಿಶೀಲಿಸುತ್ತೇವೆ.
-ಸಫ್ರಾಜ್‌ಖಾನ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next