Advertisement

ಕೆಸಿಎ ನಲ್ಲಸೋಪರ ಸಂಸ್ಥೆ: ವಾರ್ಷಿಕ ಶೈಕ್ಷಣಿಕ ಪರಿಕರಗಳ ವಿತರಣೆ

12:28 PM Jun 04, 2019 | Team Udayavani |

ಮುಂಬಯಿ: ಆಧುನಿಕ ಶಿಕ್ಷಣವು ಮಕ್ಕಳ ಜೀವನಕ್ಕೆ ಉತ್ತೇಜನಕರ ಆಗಬೇಕೇ ಹೊರತು ಜೀವಕ್ಕೆ ಹಾನಿಕಾರಕವಾಗಬಾರದು. ಬರೀ ಅಂಕ ಗಳಿಕಾ ಪ್ರಯತ್ನಕ್ಕೆ ಶಿಕ್ಷಣ ನೀಡಿ ಮಕ್ಕಳನ್ನು ಶಿಕ್ಷೆಗೆ ಗುರಿಯಾಗಿಸದೆ ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಣ ಪೂರಕವಾಗಲಿ. ಶಿಕ್ಷಣ ಬರೇ ಬದುಕು ರೂಪಿಸುವ ಶಸ್ತ್ರ‌ವಾಗದೆ ಸಂಸ್ಕಾರಯುತ ಜೀವನ ರೂಪಿಸುವ ಶಾಸ್ತ್ರವನ್ನಾಗಿಸಿ ಮಕ್ಕಳನ್ನು ಬೆಳೆಸಬೇಕು. ಅಂತಹ ಮಕ್ಕಳಿಂದ ತಾವು ಧನ್ಯರೆನಿಸುತ್ತೇವೆ ಎಂದ‌ು ಕೊಂಕಣಿ ಕ್ಯಾಥೋಲಿಕ್‌ ಅಸೋಸಿಯೇಶನ್‌ ನಲಸೋಪರ (ಕೆಸಿಎ) ಸಂಸ್ಥೆಯ ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೋ ತಿಳಿಸಿದರು.

Advertisement

ಕೆಸಿಎ ಸಂಸ್ಥೆಯು ಆರ್ಥಿಕ ಅಸಹಾಯಕ ಮಕ್ಕಳಿಗೆ ವಾರ್ಷಿಕ ವಾಗಿ ಕೊಡಮಾಡುವ ಶಾಲಾ ಪಠ್ಯ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಜೂ. 2ರಂದು ಪೂರ್ವಾಹ್ನ ನಲಸೋಪರ ಪೂರ್ವದ ಸೈಂಟ್‌ ಫ್ರಾನ್ಸಿಸ್‌ ದೆಸಾಲೆಸ್‌ ಚರ್ಚ್‌ ಸಮೀಪದ ಕೆಸಿಎ ಕಚೇರಿಯಲ್ಲಿ ನಡೆದಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹ್ಯಾರಿ ಕುಟಿನ್ಹೋ ಉಪಸ್ಥಿತ ನೂರಾರು ಮಕ್ಕಳಿಗೆ ಪಠ್ಯಚಟುವಟಿಕೆಗಳ ಸಾಮಗ್ರಿಗಳನ್ನು ವಿತರಿಸಿ ಜಾಗತಿಕವಾಗಿ ಮಾರ್ಪಾಡು ಹೊಂದುವ ಈ ಯುಗದ ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿಸಿದಾಗ ಮಕ್ಕಳ ವಿಕಾಸ ಸಾಧ್ಯವಾಗುವುದು. ಆದ್ದರಿಂದ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಪಠ್ಯೇತರ ವಿಷಯಕ್ಕೂ ಮಹತ್ವವನ್ನಿತ್ತು ವಿದ್ಯಾರ್ಥಿ ಜೀವನವನ್ನು ಆನಂದಿಸಬೇಕು ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಸರ್ವ ಸಮುದಾಯಗಳ ಸ್ಥಾನೀಯ ವಿವಿಧ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಸಿಎ ಕಳೆದ ಅನೇಕ ವರ್ಷಗಳಿಂದ ಆಯೋಜಿಸುತ್ತಿದು, ಈ ಬಾರಿ ಸುಮಾರು 200ಕ್ಕೂ
ಅಧಿಕ ಮಕ್ಕಳಿಗೆ ಶಾಲಾ ಸಮವಸ್ತ್ರ, ನೋಟ್‌ ಪುಸ್ತಕಗಳು, ಶಾಲಾ
ಶುಲ್ಕ, ಇತರ ಶಾಲಾ ಪಠ್ಯ ಚಟುವಟಿಕೆಗಳ ಸಾಮಗ್ರಿಗಳನ್ನು ವಿತರಿಸಿ ಉಪಸ್ಥಿತ ಮಕ್ಕಳಿಗೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗ್ರೇಸಿ ಪಿಂಟೋ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರೋನಾಲ್ಡ್‌ ಪಾಯ್ಸ, ಲಿಲ್ಲಿ ಕ್ವಾಡ್ರಸ್‌ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಆಲ್ವಿನ್‌ ಫ್ರಾನ್ಸಿಸ್‌ ಡಿಸೋಜಾ ಮುದರಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಿಚಾರ್ಡ್‌ ಪಿಂಟೋ ವಂದಿಸಿದರು. ನೂರಾರು ಮಕ್ಕಳು, ಪಾಲಕರು, ಪೋಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next