ಕೋಲಾರ : ಜಿಲ್ಲೆಯ ಬಹುನಿರೀಕ್ಷಿತ ಕೆ.ಸಿ.ವ್ಯಾಲಿ ಯೋಜನೆಗೆ ಸುಪ್ರಿಂಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ವಿವಿಧ ಸಂಘಟನೆಗಳ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು 1001 ತೆಂಗಿನ ಕಾಯಿಗಳ ಈಡುಗಾಯಿ ಒಡೆದು, ಪಟಾಕಿ ಸಿಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಸ್ಪೀಕರ್ ರಮೇಶ್‌ಕುಮಾರ್, ದಿವಂಗತ ಡಿ.ಕೆ.ರವಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಸೇರಿ ಅನೇಕರ ಪಾತ್ರವಿದೆ. ಆದರೆ, ಸಂಸದ ಕೆ.ಎಚ್.ಮುನಿಯಪ್ಪ ಪಾತ್ರ ಒಂದು ಪೈಸೆಯಷ್ಟೂ ಇಲ್ಲ. ಚುನಾವಣೆ ಬಂದಿದೆ ಎಂದು ಸುಳ್ಳುಗಳನ್ನು ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೆ.ಸಿ.ವ್ಯಾಲಿ ಯೋಜನೆಯನ್ನು ನಿಲ್ಲಿಸಬೇಕು ಎಂದು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಅಂತಹವರಿಗೆ ದೇವರು ಬುದ್ಧಿ ನೀಡಲಿ, ಯೋಜನೆಯ ಪರ ಏನೂ ಮಾಡಿಲ್ಲದಿದ್ದರೂ, ಈಗ ಏನೋ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದು, ಇವರ ನಾಟಕವೆಲ್ಲ ಜನರಿಗೆ ಗೊತ್ತಿದೆ ಎಂದರು.
ಹೋರಾಟ ಬಾಕಿ ಇದೆ “ಯೋಜನೆಗೆ ಇದ್ದ ತಡೆಯಾಜ್ಞೆ ತೆರವಾಗಿದೆ, ಇನ್ನು ಕಾನೂನು ಹೋರಾಟ ಮಾಡಲಾಗುವುದು’ ಎಂದು ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜನೇಯರೆಡ್ಡಿ ಹೇಳಿದರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, “ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಗೆ ಕೆಸಿ ಮತ್ತು
ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್‌ಎನ್ ವ್ಯಾಲಿ ನೀರು ಹರಿಸುವ ಯೋಜನೆಗೆ ಸುಪ್ರಿಂ ಕೋರ್ಟ್‌ನಲ್ಲಿದ್ದ ತಡೆಯಾಜ್ಞೆ ಶುಕ್ರವಾರ ತೆರವಾಗಿದೆ. ಆದರೆ, ಮುಖ್ಯ ದಾವೆಗಳ
ವಿಚಾರಣೆ ಸುಪ್ರಿಂ ಮತ್ತು ಹೈಕೋರ್ಟ್‌ನಲ್ಲಿ ಇನ್ನೂ ಬಾಕಿ ಉಳಿದಿದೆ’ ಎಂದು ವಿವರಿಸಿದರು. ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ, ಜನ ಮತ್ತು ದನಕರುಗಳಿಗೆ ನೀರಿಗೂ
ಪರದಾಡುವಂತಾಗಿದೆ ಎಂಬ ವಾದವನ್ನು ಮುಂದಿಟ್ಟು ಮಾನವೀಯತೆ ಆಧಾರದ ಮೇಲೆ ಸುಪ್ರಿಂ ಕೋರ್ಟ್‌ನಲ್ಲಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿ ಬೆಂಗಳೂರು ನೀರು ಮತ್ತು ಒಳಚರಂಡಿ ಸಂಸ್ಥೆಯು ಯಶಸ್ವಿಯಾಗಿದೆ. ಎಂದರು.