Advertisement
ಇಡೀ ವಿಶ್ವದಲ್ಲಿಯೇ ಮಹಾನಗರವೊಂದರ ತ್ಯಾಜ್ಯ ನೀರನ್ನು ಎರಡು ಬಾರಿ ಸಂಸ್ಕರಿಸಿ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವ ಮೊಟ್ಟ ಮೊದಲ ಯೋಜನೆಯೆಂಬ ಹೆಗ್ಗಳಿಕೆ ಕೆ.ಸಿ.ವ್ಯಾಲಿ ಯೋಜನೆಗಿದೆ. ಆದರೆ, ಕೆ.ಸಿ.ವ್ಯಾಲಿ ಯೋಜನೆಗೆ ಯಾವುದೇ ಮಾದರಿ ಇಲ್ಲದಿರುವುದರಿಂದ ನೀರಾವರಿ ಹೋರಾಟ ಸಮಿತಿ ಮುಖಂಡರು ನೀರಿನ ಗುಣಮಟ್ಟದ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಉತ್ತರಿಸಬೇಕಾಗಿದ್ದ ಸರಕಾರದ ಇಲಾಖೆಗಳು ಮೌನಕ್ಕೆ ಶರಣಾಗುವ ಮೂಲಕ ಗುಣಮಟ್ಟದ ಬಗ್ಗೆ ಅನುಮಾನಕ್ಕೆಡೆ ಮಾಡಿಕೊಟ್ಟಿದ್ದವು.
Related Articles
Advertisement
ಇದರಿಂದ, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಕೆ.ಸಿ.ವ್ಯಾಲಿ ನೀರಿನ ಗುಣಮಟ್ಟದ ಖಾತ್ರಿಗಾಗಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿ, ನೀರಿನ ಹರಿವಿಗೆ ತಡೆ ತಂದಿದ್ದರು. ಮೂರು ತಿಂಗಳ ನಂತರ ತಡೆ ತೆರವಾಗಿದೆ. ಕೆ.ಸಿ.ವ್ಯಾಲಿ ನೀರನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ ಗುಣಮಟ್ಟದ ವರದಿಯನ್ನು ಸಲ್ಲಿಸುವ ಷರತ್ತಿನ ಮೇಲೆ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದ ಕೆ.ಸಿ.ವ್ಯಾಲಿ ನೀರಿನ ಹರಿವು ಪುನರಾರಂಭವಾಗಿದೆ.
ಸಚಿವರಿಂದ ಗುಣಮಟ್ಟದ ಭರವಸೆ: ಕೆ.ಸಿ.ವ್ಯಾಲಿ ನೀರಿನ ಹರಿವು ಪುನರಾರಂಭಿಸುವ ಸಂದರ್ಭದಲ್ಲಿ ಹಾಜರಿದ್ದ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ,ಗುಣಮಟ್ಟದ ನೀರು ಹರಿಸುವ ವಾಗ್ಧಾನವನ್ನು ನ್ಯಾಯಾಲಯದ ಮುಂದೆ ಮಾಡಿರುವುದಾಗಿ ಹೇಳಿರುವುದು ಜಿಲ್ಲೆಯ ಜನರಿಗೆ ಸರಕಾರದ ಪ್ರತಿನಿಧಿಯೊಬ್ಬರು ಮಾಡಿರುವ ಮೊದಲ ಸ್ಪಷ್ಟ ಭರವಸೆಯಾಗಿದೆ. ಏಕೆಂದರೆ ಇದುವರಿಗೂ ನೀರಿನ ಗುಣಮಟ್ಟದ ಪ್ರಶ್ನೆ ಮಾಡಿದವರಿಗೆ ರಾಜಕೀಯ ಉದ್ದೇಶಗಳಿಂದ ಉತ್ತರ ನೀಡಲಾಗಿತ್ತೇ ಹೊರತು, ಗುಣಮಟ್ಟ ಖಾತ್ರಿಪಡಿಸಲು ಯಾರೂ ಮುಂದಾಗಿರಲಿಲ್ಲ. ಕೆ.ಸಿ.ವ್ಯಾಲಿ ನೀರನ್ನು ಪ್ರತಿನಿತ್ಯ ಏಳು ಅಂಶಗಳಲ್ಲಿ ಮತ್ತು ವಾರಕ್ಕೊಮ್ಮೆ 33 ಅಂಶಗಳಲ್ಲಿ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿರುವುದು, ಸರಕಾರ ಕೊಂಚ ತಡವಾಗಿಯಾದರೂ ಕೆ.ಸಿ.ವ್ಯಾಲಿ ನೀರಿನ ಗುಣಮಟ್ಟದ ಕುರಿತು ಎಚ್ಚೆತ್ತುಕೊಂಡಿರುವುದರ ಸಂಕೇತವಾಗಿ ಕಾಣಿಸುತ್ತಿದೆ.
ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕೆ.ಸಿ.ವ್ಯಾಲಿ ಯೋಜನೆ ಅತ್ಯವಶ್ಯಕವಾಗಿದ್ದು, ನೀರಿನ ಗುಣಮಟ್ಟದಲ್ಲಿ ಯಾವುದೇ ನ್ಯೂನತೆ ಬರದಂತೆ ಸರಕಾರ ನೋಡಿಕೊಳ್ಳುತ್ತದೆ.– ಕೃಷ್ಣಬೈರೇಗೌಡ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರಿನ ಅಗತ್ಯವಿದೆಯೆಂದು ಬೆಂಗಳೂರು ಕೈಗಾರಿಕೆಗಳ ವಿಷಪೂರಿತ ರಾಸಾಯನಿಕ ಮಿಶ್ರಿತ ನೀರನ್ನು ಕೆರೆಗಳಿಗೆ ಹರಿಸದರೆ ಕೋಲಾರ ಜಿಲ್ಲೆಯ ಭವಿಷ್ಯ ಅನಾರೋಗ್ಯಪೀಡಿತವಾಗಲಿದೆ. ಮೂರು ಬಾರಿ ಶುದ್ಧೀಕರಣಗೊಳ್ಳುವುದು ಅತ್ಯವಶ್ಯಕ ಹಾಗೂ ಅನಿವಾರ್ಯ.
– ಆಂಜನೇಯರೆಡ್ಡಿ, ಸಂಚಾಲಕರು, ನೀರಾವರಿ ಹೋರಾಟ ಸಮಿತಿ – ಕೆ.ಎಸ್.ಗಣೇಶ್