Advertisement

ಕೋಳಿವಾಡ ಮನೆಯಲ್ಲಿ ವಿಧಾನಸಭೆ ಪೀಠೊಪಕರಣ!

06:00 AM Jul 25, 2018 | Team Udayavani |

ಬೆಂಗಳೂರು: ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಖಾಸಗಿ ನಿವಾಸದಲ್ಲಿ ವಿಧಾನಸಭೆ ಸಚಿವಾಲಯಕ್ಕೆ ಸೇರಿರುವ ಸೋಫಾ ಸೆಟ್‌ ಸೇರಿ ಪೀಠೊಪಕರಣಗಳು ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಕೋಳಿವಾಡ ಅವರು ವಿಧಾನ ಸಭಾಧ್ಯಕ್ಷರಾಗಿದ್ದಾಗ 2016ರಲ್ಲಿ ಅವರು ವಾಸವಾಗಿದ್ದ ಸರ್ಕಾರಿ ಬಂಗಲೆಗೆ ಪೀಠೊಪಕರಣಗಳನ್ನು ವಿಧಾನಸಭೆ ಸಚಿವಾಲಯದಿಂದ ಖರೀದಿಸಿದ್ದರು. ಅವರ ಅಧಿಕಾರ ಅವಧಿ ಮುಕ್ತಾಯವಾದ ನಂತರ ನಿಯಮಗಳ ಪ್ರಕಾರ ವಿಧಾನಸಭೆಗೆ ವಾಪಸ್‌ ನೀಡಬೇಕು. ಆದರೆ, ಕೋಳಿವಾಡ ಕೆಲವು ಪೀಠೊಪಕರಣಗಳನ್ನು ವಾಪಸ್‌ ಮಾಡದೆ ತಮ್ಮ ಖಾಸಗಿ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ.

Advertisement

ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿಗೆ ಪತ್ರ ಬರೆದಿರುವ ಕೋಳಿವಾಡ, ಮಸಾಜ್‌ ಸೆಟ್‌ ಮತ್ತು ಪೀಜನ್‌ ಬಾಕ್ಸ್‌ ವಾಪಸ್‌ ನೀಡಿದ್ದೇನೆ. ಎರಡು ಮಂಚ, ಒಂದು ಕಿಂಗ್‌ ಸೈಜ್‌ ಮಂಚ, ಸೋಫಾ ಸೆಟ್‌ ಹಾಗೂ ಎಲ್ಲ ರೀತಿಯ ಸೌಲಭ್ಯ ಹೊಂದಿರುವ ಕಿಂಗ್‌ ಸೈಜ್‌ ಸ್ಟೋರೇಜ್‌ ಬೋರ್ಡ್‌ ಹಿಂದಿರುಗಿಸಲಾಗಿಲ್ಲ. ಹೀಗಾಗಿ ಅವುಗಳಿಗೆ ವೆಚ್ಚದ ಮಾಹಿತಿ ನೀಡಿದರೆ ಹಣ ಪಾವತಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಬೆಲೆ ನಿಗದಿ ಮಾಡಲಾಗುವುದು 
ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ, ಕೋಳಿವಾಡ ಅವರು 6 ಪೀಠೊಪಕರಣಗಳನ್ನು ಪಡೆದುಕೊಂಡಿದ್ದರು. ಅದರಲ್ಲಿ ಎರಡು ವಾಪಸ್‌ ನೀಡಿದ್ದರು. ನಾಲ್ಕು ಪೀಠೊಪಕರಣಗಳನ್ನು ಹಿಂದಿರುಗಿಸುತ್ತೇನೆ, ಇಲ್ಲದಿದ್ದರೆ ಅದರ ದರ ನಿಗದಿ ಮಾಡಿದರೆ ಹಣ ಪಾವತಿಸುವುದಾಗಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ದರ ನಿಗದಿ ಮಾಡಬೇಕಾಗುತ್ತದೆ. ಪೀಠೊಪಕರಣಗಳನ್ನು ದಾಸ್ತಾನು ಮಾಡಲು ನಮ್ಮ ಬಳಿ ಸ್ಥಳದ ಕೊರತೆ ಇದೆ. ಹೀಗಾಗಿ, ಬೆಲೆ ನಿಗದಿ ಮಾಡಿ ಹಣ ಪಾವತಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪೀಠೊಪಕರಣಗಳನ್ನು ನನಗೆ ಬೇಕಾದ ರೀತಿಯಲ್ಲಿ ಮಾಡಿಸಿಕೊಂಡಿದ್ದೇನೆ. ಅದರ ಹಣ ಪಾವತಿಸುವುದಾಗಿ ಪತ್ರ ಬರೆದಿದ್ದೇನೆ. ಅದರ ಒಟ್ಟು ಬೆಲೆ 3 ಲಕ್ಷ ರೂ.ಆಗಬಹುದು. ವಿಧಾನಸಭಾ ಕಾರ್ಯದರ್ಶಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ಹಿಂದೆಯೂ ಹಲವರು ಈ ರೀತಿ ಮಾಡಿದ್ದಾರೆ.
ಹೀಗಾಗಿ ನಾನೂ ತಂದಿದ್ದೇನೆ.

● ಕೆ.ಬಿ. ಕೋಳಿವಾಡ, ವಿಧಾನಸಭಾ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next