Advertisement
ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ತಮ್ಮ ಐದನೇ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಹಾಗೆ ನೋಡಿದರೆ, 2018 ವಿಧಾನಸಭಾ ಚುನಾವಣಾ ವರ್ಷ ಆಗಿರುವುದರಿಂದ ಇದು ಚುನಾವಣಾ ಬಜೆಟ್ ಎಂದೇ ಬಿಂಬಿತವಾಗುತ್ತಿದೆ. ಹೀಗಾಗಿ ತವರು ಜಿಲ್ಲೆಯ ಮೈಸೂರು ನಗರದ ಜನತೆ ಈ ಬಜೆಟ್‌ನಲ್ಲಿ ಭರಪೂರ ಯೋಜನೆ ಹಾಗೂ ಅನುದಾನದ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ಸಾಡೇರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗಾಗಿ 50 ಕೋಟಿ, ದಳವಾಯಿ ಕಣಿವೆಯಲ್ಲಿ ಮಳೆ ನೀರು ದೊಡ್ಡ ಚರಂಡಿ ನಿರ್ಮಾಣಕ್ಕೆ 15 ಕೋಟಿ, ಕುಕ್ಕರಹಳ್ಳಿ, ದಳವಾಯಿ, ಕಾರಂಜಿ ಸೇರಿದಂತೆ ನಗರದ ಕೆರೆಗಳ ಅಭಿವೃದ್ಧಿಗಾಗಿ 25 ಕೋಟಿ, ಸಂಸ್ಕರಿಸಿದ ತ್ಯಾಜ್ಯ ನೀರಿನ ಮರು ಬಳಕೆಗಾಗಿ 50 ಕೋಟಿ ಹಾಗೂ ಗೊರೂರು, ರಮಾಬಾಯಿ ನಗರಗಳಲ್ಲಿ ಆಶ್ರಯ ಬಡಾವಣೆಗಳ ಅಭಿವೃದ್ಧಿಗಾಗಿ 5 ಕೋಟಿ ರೂ. ಸೇರಿದಂತೆ ಒಟ್ಟಾರೆ ಮೈಸೂರು ನಗರದ ಅಭಿವೃದ್ಧಿ ಸಲುವಾಗಿ ಮಹಾ ನಗರಪಾಲಿಕೆಗೆ 810 ಕೋಟಿ ರೂ. ಅನುದಾನ ಒದಗಿಸುವಂತೆ ಇತ್ತೀಚೆಗೆ ಮೇಯರ್ ಎಂ.ಜೆ.ರವಿಕುಮಾರ್ ನೇತೃತ್ವದ ಮೈಸೂರು ಮಹಾ ನಗರಪಾಲಿಕೆ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಕೈಗಾರಿಕಾ ಸಂಘದ ಬೇಡಿಕೆ: ಮೈಸೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಬನ್ನಿಮಂಟಪ ಎ ಮತ್ತು ಬಿ ಬಡಾವಣೆ ಹಾಗೂ ವಿಶ್ವೇಶ್ವರನಗರ ಮೈಸೂರು ದಕ್ಷಿಣ ಕೈಗಾರಿಕಾ ಪ್ರದೇಶದ ಮೂಲಭೂತ ಅಗತ್ಯತೆಯ ಪೂರೈಕೆಗಾಗಿ ಕನಿಷ್ಟ 10 ಕೋಟಿ ರೂ., ಎಂಟು ಸಾವಿರ ಎಕರೆ ವಿಶಾಲವಾದ ಮೈಸೂರು ಕೈಗಾರಿಕಾ ಪ್ರದೇಶದಲ್ಲಿ 100 ಹೆಚ್ಚು ಮಧ್ಯಮ ಮತ್ತು ಭಾರೀ ಕೈಗಾರಿಕೆಗಳು, ರಫ್ತು ಉದ್ಯಮಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಈ ಪ್ರದೇಶಕ್ಕೆ ಒಂದು ಹೆಲಿಪ್ಯಾಡ್ ನಿರ್ಮಾಣ.
ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂದಾಯ ಇಲಾಖೆಯಿಂದ ಕೆಐಎಡಿಬಿಗೆ ಹಸ್ತಾಂತರವಾಗಿರುವ ಪ್ರದೇಶಕ್ಕೆ ಸಮಾನಾಂತರವಾಗಿ ಕನಿಷ್ಠ 50 ಎಕರೆ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ವರ್ಗದ ಕೈಗಾರಿಕಾ ಕ್ಲಸ್ಟರ್ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕೈಗಾರಿಕಾ ಪಾರ್ಕ್ ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಪ್ರಕಟಿಸಬೇಕು. ಮೈಸೂರು ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕವಾಗಿ 30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರಂತರ ವಿದ್ಯುತ್ ಸರಬರಾಜಿಗಾಗಿ ಗ್ಯಾಸ್ ಆಪರೇಟೆಡ್ ಸಬ್‌ಸ್ಟೇಷನ್ ಸ್ಥಾಪನೆ ಪ್ರಕಟಿಸಬೇಕು.
ಹೆಬ್ಟಾಳು, ಮೇಟಗಳ್ಳಿ, ಹೂಟಗಳ್ಳಿ, ಬೆಳವಾಡಿ ಕೈಗಾರಿಕಾ ಪ್ರದೇಶಗಳ 6500 ಎಕರೆ ಪ್ರದೇಶದಲ್ಲಿನ 45 ಕಿಮೀ ರಸ್ತೆ ಅಗಲೀಕರಣ, ಅಭಿವೃದ್ಧಿ, ಡಕ್ಟ್ಪೈಪ್ ಅಳವಡಿಕೆ, ಸಾಲು ಮರ ನೆಡುವಿಕೆ, ಇತ್ಯಾದಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೆಐಎಡಿಬಿ ಗೆ 35 ಕೋಟಿ ರೂ. ಕಾಯ್ದಿರಿಸಬೇಕು. ಮೈಸೂರು ಕೈಗಾರಿಕಾ ಪ್ರದೇಶಕ್ಕೆ ಒಟ್ಟಾರೆ 2 ಎಂಜಿಡಿ ನೀರು ಸರಬರಾಜು ಬೇಡಿಕೆ ಪೂರೈಸಲು ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಮತ್ತು ಮೈಸೂರು ನಗರಕ್ಕೆ ಹಳೆ ಉಂಡುವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಸಮಗ್ರ ನೀರು ಸರಬರಾಜು ಯೋಜನೆಗೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿ,
ಬೀಚನಕುಪ್ಪೆ ಗ್ರಾಮದ 88.5 ಎಕರೆ ಜಮೀನನ್ನು ಮೈಸೂರು ಮಹಾ ನಗರಪಾಲಿಕೆಯ ಹಳೆ ಉಂಡವಾಡಿ ನೀರು ಸರಬರಾಜು ಯೋಜನೆಗೆ ಹಸ್ತಾಂತರಿಸಿ ಅಗತ್ಯ ಆರ್ಥಿಕ ಬೆಂಬಲ ನೀಡಬೇಕೆಂದು ಮೈಸೂರು ಕೈಗಾರಿಕೆಗಳ ಸಂಘ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ. ಇದಲ್ಲದೆ ಮುಂಬರುವ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ವಿಧಾನಸಬಾ ಕ್ಷೇತ್ರಗಳಿಗೂ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ವಿಶೇಷ ಪ್ರೀತಿ ತೋರಲೇ ಬೇಕಿದೆ.
* ಗಿರೀಶ್ ಹುಣಸೂರು