Advertisement

ಸಂಪೂರ್ಣ ಕೊಚ್ಚಿ ಹೋದ ಕಯ್ಯಾರು ಪರಂಬಳ –ಜೋಡುಕಲ್ಲು ರಸ್ತೆ

06:00 AM Jun 03, 2018 | Team Udayavani |

ಕಾಸರಗೋಡು: ಕಯ್ಯಾರು ಪರಂಬಳ – ಜೋಡುಕಲ್ಲು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು,  ಪ್ರಮುಖ ರಸ್ತೆಯ ದುರಸ್ತಿ ಬಗ್ಗೆ ಕಿಂಚಿತ್ತೂ  ಗಮನ ಹರಿಸಿಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಜನ – ವಾಹನ ಸಂಚಾರಕ್ಕೆ ಹರಸಾಹಸ ಮಾಡಬೇಕಾದ ಸ್ಥಿತಿ ತಲೆದೋರಿದೆ.

Advertisement

2013 ರಲ್ಲಿ ಮಂಜೇಶ್ವರ ಶಾಸಕರ ವಿಶೇಷ ಅನುದಾನದಿಂದ ಸುಮಾರು 1.65 ಕೋಟಿ ರೂ. ವೆಚ್ಚದಲ್ಲಿ  ಕಾಮಗಾರಿ ನಡೆಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಒಂದೇ ವರ್ಷದಲ್ಲಿ ರಸ್ತೆ ಕೊಚ್ಚಿ ಹೋಗಿದ್ದು, ಈಗ ರಸ್ತೆ ತೋಡಾಗಿ ಪರಿಣಮಿಸಿದೆ.

ಕಯ್ಯಾರು  ಡೋನ್‌ ಬೋಸ್ಕೊ  ಶಾಲೆ,  ಕ್ರಿಸ್ತರಾಜ ದೇವಾಲಯ, ಮಸೀದಿ, ಕಜೆ ಶ್ರೀ ಜನಾರ್ದನ ದೇವಸ್ಥಾನ, ಶ್ರೀ ಮಹಮ್ಮಾಯಿ ದೇವಸ್ಥಾನ, ಅಂಗನವಾಡಿ  ಹಾಗೂ ಸಾವಿರಾರು ಮನೆಗಳು ಈ ಪ್ರದೇಶದಲ್ಲಿದ್ದು, ಜೊತೆಗೆ ಬಾಯಾರು – ಉಪ್ಪಳ, ಬಂದ್ಯೋಡು -ಪೆರ್ಮುದೆ ಸಂಪರ್ಕ ರಸ್ತೆ ಕೂಡಾ ಆಗಿದೆ. 

ಇದಲ್ಲದೆ  ಶಾಲೆಗಳಿದ್ದು ದಿನಂಪ್ರತಿ  ಸಾವಿರಾರು ಮಕ್ಕಳ ಆಶ್ರಯವಾಗಿದೆ ಈ ರಸ್ತೆ. ಮಳೆ ಬರುತ್ತಿದಂತೆ ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು, ಯಾವುದು ರಸ್ತೆ, ಯಾವುದು ಹೊಂಡ ಎಂಬುದು ತಿಳಿಯದ ಸ್ಥಿತಿ ಕೂಡಾ ಉಂಟಾಗಿದೆ. ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ  ತಲಪಬೇಕಾದ  ಸ್ಥಿತಿ ಉಂಟಾಗಿದೆ.

ಸಾಮಾನ್ಯವಾಗಿ ರಸ್ತೆಗಳು ಹದೆಗೆಟ್ಟಲ್ಲಿ ತೇಪೆ ಹಚ್ಚಿ ದುರಸ್ತಿಗೊಳಿಸಿ  ಸಾಮಾನ್ಯವಾಗಿ ಸಂಚಾರ ಯೋಗ್ಯ ಗೊಳಿಸಲಾಗುತ್ತಿದೆ. ಆದರೆ  ಕಳೆದ ಆರು  ವರ್ಷದಲ್ಲಿ ಈ ರಸ್ತೆ ಬಗ್ಗೆ ಆಡಳಿತ ಸಮಿತಿ, ಅ ಧಿಕಾರಿಗಳು ಕಣ್ಣೆತ್ತಿ ನೋಡಿಲ್ಲ. ವರ್ಷ  ಕಳೆದಂತೆ  ಹೊಂಡಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಅದನ್ನು ಮುಚ್ಚುವ, ದುರಸ್ತಿಗೊಳಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ .ವಾಹನಗಳು ಮಾತ್ರವಲ್ಲ ನಡೆದಾಡಲು ಈ ರಸ್ತೆ ಅಯೋಗ್ಯವಾಗಿದೆ. ವಾಹನಗಳ ಬಿಡಿ ಭಾಗಗಳು ಕಳಚುತ್ತಿದ್ದು, ಸಂಚಾರವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೈವಳಿಕೆ ಗ್ರಾಮ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಅಧೀನತೆಯಲ್ಲಿ ಈ ರಸ್ತೆ ಇದ್ದು ಈ ಬಾರಿಯ ಮುಂಗಡಪತ್ರದಲ್ಲಿ ಪಂಚಾಯತ್‌ ನಾಲ್ಕು ಲಕ್ಷ ರೂ., ಜಿಲ್ಲಾ ಪಂಚಾಯತ್‌ ಹತ್ತು ಲಕ್ಷ ರೂ. ತೆಗೆದಿರಿಸಿದ್ದರೂ  ಲಾಭ – ನಷ್ಟದ ಲೆಕ್ಕ ಹಾಕಿ ಕೈಕಟ್ಟಿ ಕುಳಿತುಕೊಂಡಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳು, ಜನಸಾಮಾನ್ಯರು ನರಕಯಾತನೆ ನಡುವೆ ಈ ರಸ್ತೆಯಲ್ಲಿ  ತೆರಳಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ.

Advertisement

ರಸ್ತೆ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ನಾಗರಿಕರು ಪ್ರತಿಭಟನೆ ನಡೆಸುವ ನಿಟ್ಟಿನಲ್ಲೂ  ಮುಂದಾಗಿದ್ದಾರೆ.ರಸ್ತೆಯ ಅವ್ಯವಸ್ಥೆ ಬಗ್ಗೆ  ಜನಪ್ರತಿನಿಧಿಗಳು,ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದುರಸ್ತಿಗೊಳಿಸುವ ಬಗ್ಗೆ  ಗಮನ ಹರಿಸಿಲ್ಲ. ಇದರಿಂದ ಹೋರಾಟಕ್ಕೆ ಮುಂದಾಗುತ್ತಿದ್ದಾರೆ.

ಜಿ.ಪಂ.ಗಮನಕ್ಕೆ ತರಲಾಗಿದೆ
ಗ್ರಾಮ ಪಂಚಾಯತ್‌  ಮತ್ತು ಜಿಲ್ಲಾ ಪಂಚಾಯತ್‌ನಿಂದ ಒಟ್ಟು 14 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ  ಭಾರೀ ಮೊತ್ತದ ಅಗತ್ಯ ಇದ್ದು, ಇದರಿಂದ ಗುತ್ತಿಗೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಅವ್ಯವಸ್ಥೆ  ಬಗ್ಗೆ  ಈಗಾಗಲೇ ಜಿಲ್ಲಾ ಪಂಚಾಯತ್‌ ಆಡಳಿತ ಸಮಿತಿ  ಗಮನಕ್ಕೆ  ತರಲಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ನಡೆಸಲು  ಗಮನ ಹರಿಸಬೇಕಿದೆ.
– ಪ್ರಸಾದ್‌ ರೈ,ಗ್ರಾ.ಪಂ.ಸದಸ್ಯೆ

ದುರಸ್ತಿಗೆ  ಕ್ರಮ ಕೈಗೊಂಡಿಲ್ಲ
ವರ್ಷಗಳಿಂದ ರಸ್ತೆ ಹದೆಗೆಟ್ಟಿದ್ದರೂ ದುರಸ್ತಿಗೆ  ಕ್ರಮ ಕೈಗೊಂಡಿಲ್ಲ. ದಿನಂಪ್ರತಿ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಸಂಚಾರ ದೊಡ್ಡ ಸಮಸ್ಯೆಯಾಗಿದೆ. ದೇವಸ್ಥಾ ನ, ಮಸೀದಿ, ಇಗರ್ಜಿ, ಶಾಲೆ, ಅಂಗನವಾಡಿ ಹಾಗೂ ಇನ್ನಿತರ ಕೇಂದ್ರಗಳಿದ್ದು, ಸಾವಿರಾರು ಮಂದಿ ಈ ರಸ್ತೆ ಮೂಲಕ ತೆರಳುತ್ತಿದ್ದಾರೆ.  ರಸ್ತೆಯ ಅವ್ಯವಸ್ಥೆ ವಿರುದ್ಧ ಹೋರಾಟ ಅನಿವಾರ್ಯ.
– ಜೋರ್ಜ್‌ ಡಿ’ಅಲ್ಮೇಡಾ,ನಾಗರಿಕರು

Advertisement

Udayavani is now on Telegram. Click here to join our channel and stay updated with the latest news.

Next