ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯ ಕೊರತೆ ಎದುರಿಸುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಈ ಸಂಬಂಧ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಪ್ರಕರಣದ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ನೀಡಿದೆ. ಹೈಕೋರ್ಟ್‌ನ ಈ ನಡೆ ಬಡಜನರಿಗೆ ಸಮರ್ಪಕ ಆರೋಗ್ಯ ಸೇವೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರ ಸಹಿತ 16 ಸಾವಿರಕ್ಕೂ ಅಧಿಕ ವೈದ್ಯಕೀಯ, ಆರೆ ವೈದ್ಯಕೀಯ ಮತ್ತು ಡಿ ಗ್ರೂಪ್ ಸಿಬಂದಿಯ ಕೊರತೆ ಇರುವುದಾಗಿ ಬೆಟ್ಟು ಮಾಡಲಾಗಿತ್ತು. ಇದನ್ನು ಗಮನಿಸಿ ಹೈಕೋರ್ಟ್, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಂಬಂಧಿತ ಇಲಾಖೆಗಳಿಂದ ಸಮಗ್ರ ವರದಿಯನ್ನು ಕೇಳಿದೆ.
ಬಡಜನರಿಗೆ ಕ್ಲಪ್ತ ಸಮಯದಲ್ಲಿ, ಸೂಕ್ತ ವೈದ್ಯಕೀಯ ಸೇವೆ ದೊರಕುವಂತಾಗಲು ಸರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿದೆ. ಆದರೆ ಈ ಕೇಂದ್ರಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬಂದಿ ಇಲ್ಲದಿರುವ ಬಗೆಗೆ ಕಳೆದ ಹಲವಾರು ವರ್ಷಗಳಿಂದ ದೂರುಗಳು ಕೇಳಿ ಬರುತ್ತಿದ್ದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಒಂದು ವೇಳೆ, ಸರಕಾರ ನೇಮಕ ಮಾಡಿದರೂ ವೈದ್ಯರು ಮತ್ತು ವೈದ್ಯಕೀಯ ಸಿಬಂದಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಈ ಕಾರಣಕ್ಕಾಗಿಯೇ ಸರಕಾರ ನೇಮಕಾತಿ ಸಂದರ್ಭದಲ್ಲಿ ನಿರ್ದಿಷ್ಟ ಅವಧಿವರೆಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯ ಕೊರತೆಯ ಸಮಸ್ಯೆಯಿಂದ ಹೊರಬರಲು ಇನ್ನೂ ಒದ್ದಾಡುತ್ತಲೇ ಇವೆ.
ಯಾವುದಾದರೂ ನಿರ್ದಿಷ್ಟ ಪ್ರಕರಣದಲ್ಲಿ ಪ್ರಾಣಹಾನಿ ಅಥವಾ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸಿಬಂದಿ, ಮೂಲಸೌಕರ್ಯಗಳ ಕೊರತೆಯಂತಹ ದುಃಸ್ಥಿತಿಯ ಬಗೆಗೆ ಒಂದಿಷ್ಟು ಚರ್ಚೆಗಳು ನಡೆಯುತ್ತವೆಯಾದರೂ ಆ ಬಳಿಕ ಅವೆಲ್ಲವೂ ತಣ್ಣಗಾಗುತ್ತವೆ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಸಜ್ಜಿತ ಕಟ್ಟಡ, ಆಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿದ್ದರೂ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯ ಕೊರತೆಯಿಂದಾಗಿ ಬಳಕೆಯಾಗದೆ ವ್ಯರ್ಥವಾಗುವಂತಾಗಿದೆ. ಮತ್ತೆ ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಯಾವೊಂದೂ ಮೂಲಸೌಕರ್ಯ, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಹೊಂದಿರದೆ ಅನಾಥವಾಗಿವೆ.
ಈ ಎಲ್ಲ ಅವ್ಯವಸ್ಥೆಗಳಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಡವರ ಪಾಲಿಗೆ “ಊಟಕ್ಕಿಲ್ಲದ ಉಪ್ಪಿನಕಾಯಿ’ಯಂತಾಗಿವೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಕಲ್ಪ ನೀಡಬೇಕು. ಪ್ರತಿಯೊಬ್ಬನಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರಕಾರದ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಬಡವರ ಪಾಲಿಗೆ ಸಂಜೀವಿನಿಯಂತಿರುವ ಈ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಮತ್ತು ಸಿಬಂದಿಯನ್ನು ನೇಮಿಸುವುದರ ಜತೆಯಲ್ಲಿ ಕನಿಷ್ಠ ಮೂಲಸೌಕರ್ಯ, ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಸರಕಾರ ಆದ್ಯತೆಯ ಮೇಲೆ ಕ್ರಮಕೈಗೊಳ್ಳಬೇಕು.