Advertisement

ಪಾಂಗಾಳದ ಯುವಕನ ಕೊಲೆ; ಭೂ ವ್ಯವಹಾರದ ವಿಚಾರವೇ ಕೊಲೆಗೆ ಕಾರಣವಾಯಿತೇ?

09:57 PM Feb 06, 2023 | Team Udayavani |

ಕಾಪು: ರವಿವಾರ ಸಂಜೆ ಊರಿನ ನೇಮದಲ್ಲಿ ಪಾಲ್ಗೊಂಡಿದ್ದ ಶರತ್‌ ಶೆಟ್ಟಿ ಅವರನ್ನು ಮಾತುಕತೆಗೆಂದು ಕರೆದು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು ತನಿಖೆ ಚುರುಕುಗೊಳಿಸಿದ್ದಾರೆ.

Advertisement

ಭೂವ್ಯವಹಾರ, ಗುತ್ತಿಗೆದಾರಿಕೆ ಸಹಿತ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದ ಶರತ್‌ ವಿ. ಶೆಟ್ಟಿ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಪರಿಚಿತರು ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿ ಕಾಂಪ್ಲೆಕ್ಸ್‌ವೊಂದರ ಬಳಿಗೆ ಮಾತುಕತೆಗೆಂದು ಆಹ್ವಾನಿಸಿದ್ದು, ಮಾತುಕತೆ ನಡೆಸುತ್ತಿದ್ದಂತೆಯೇ ಹರಿತವಾದ ಆಯುಧದಿಂದ ಇರಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‌ರನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಸ್ಥಳಕ್ಕೆ ಧಾವಿಸಿದ ಉಡುಪಿ ಎಸ್ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಕಾರ್ಕಳ ಡಿವೈಎಸ್ಪಿ ಅರವಿಂದ್‌ ಕಲಗುಜ್ಜಿ, ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಎಸ್ಸೆ$çಗಳಾದ ಸುಮಾ ಬಿ., ಭರತೇಶ್‌ ಕಂಕಣವಾಡಿ ಸಹಿತ ಪೊಲೀಸರು ಸ್ಥಳಕ್ಕೆ ಧಾವಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದರು.

ಕಾರಣವೇನು?
ಕೊಲೆ ಪ್ರಕರಣದ ಬೆನ್ನತ್ತಿರುವ ಪೊಲೀಸರು ಮೃತ ಶರತ್‌ ಶೆಟ್ಟಿ ಅವರ ಪೂರ್ವಾಪರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಎರಡು ತಿಂಗಳ ಹಿಂದೆ ನಡೆದಿರುವ ಭೂ ವ್ಯವಹಾರದ ಬಗೆಗಿನ ಗಲಾಟೆಯ ಹಿಂದೆ ತೀವ್ರ ತನಿಖೆ ಮುಂದುವರಿಸಿದ್ದಾರೆ. ಭೂ ವ್ಯವಹಾರದ ಹಿನ್ನೆಲೆ, ಪ್ರಕರಣಕ್ಕೆ ಕಾರಣವಾಗಿರುವ ಅಂಶಗಳು, ಪ್ರಕರಣದಲ್ಲಿ ಪಾಲ್ಗೊಂಡವರ ಸುತ್ತ ಪೊಲೀಸ್‌ ಕಣ್ಗಾವಲು ಸಹಿತ ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಂಶಯಿತರಾಗಿರುವ ಹಲವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದು ಶೀಘ್ರ ಪ್ರಕರಣವನ್ನು ಭೇದಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ವೈರಲ್‌ ಆಗುತ್ತಿದೆ ಸಿಸಿ ಕೆಮರಾ ದೃಶ್ಯ
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಓಡಾಡಿರುವ ಸಿಸಿ ಕೆಮರಾದ ದೃಶ್ಯಾವಳಿ ಎಲ್ಲೆಡೆ ವೈರಲ್‌ ಆಗಿದೆ. ಪೊಲೀಸರು ಇದನ್ನು ದೃಢಪಡಿಸಿಲ್ಲವಾದರೂ ಸ್ಥಳೀಯರು ಇದನ್ನು ಪಾಂಗಾಳ ಆಲಡೆ ರಸ್ತೆ ಬಳಿಯ ದೃಶಾವಳಿಯೆಂದು ಗುರುತಿಸಿದ್ದಾರೆ.

Advertisement

ನಾಲ್ವರ ಕೃತ್ಯ
ಕೊಲೆ ನಡೆಸಿದ ಆರೋಪಿಗಳು ಪಾಂಗಾಳ ಆಲಡೆ ರಸ್ತೆಯತ್ತ ತೆರಳಿರುವ ಸಾಧ್ಯತೆಗಳಿದ್ದು ಘಟನೆ ನಡೆದ ಸಮಯದಲ್ಲೇ ಆ ಕಡೆಗೆ ಬೈಕ್‌ನಲ್ಲಿ ಮೂವರು ಕತ್ತಿ ಹಿಡಿದುಕೊಂಡು ಮತ್ತು ಓರ್ವ ನಡೆದುಕೊಂಡು ಓಡಿ ಹೋಗಿರುವುದು ಸಿಸಿ ಕೆಮರಾ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಶ್ವಾನದಳದ ನಾಯಿ ಕೂಡ ಆಲಡೆ ರಸ್ತೆಯವರೆಗೆ ಓಡಿ ಬಳಿಕ ಹಿಂದೆ ಬಂದಿದ್ದು ಕೃತ್ಯದಲ್ಲಿ ನಾಲ್ಕು ಮಂದಿ ಪಾಲ್ಗೊಂಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಶವ ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಸಂಜೆ ಮೃತದೇಹವನ್ನು ಮನೆಗೆ ತರಲಾಗಿದ್ದು ನೂರಾರು ಮಂದಿಯ ಸಮ್ಮುಖದಲ್ಲಿ ಮನೆಯ ಬಳಿಯಲ್ಲೇ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಬಿಜೆಪಿ ಮುಖಂಡ ಸುರೇಶ್‌ ಪಿ. ಶೆಟ್ಟಿ ಗುರ್ಮೆ, ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ನವೀನ್‌ಚಂದ್ರ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ರಮೇಶ್‌ ಹೆಗ್ಡೆ, ಲೀಲಾಧರ ಶೆಟ್ಟಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಬೆಚ್ಚಿ ಬಿದ್ದ ಪಾಂಗಾಳದ ಜನತೆ
ರಾ. ಹೆ. 66ರ ಇಕ್ಕೆಲದಲ್ಲಿರುವ ಪಾಂಗಾಳ ಅಪಘಾತದ ಬ್ಲಾಕ್‌ ಸ್ಪಾಟ್‌ ಆಗಿದ್ದು ಸಣ್ಣ ಪುಟ್ಟ ಹಲ್ಲೆ, ಮತ್ತಿತರ ಘಟನೆಗಳಿಂದಾಗಿ ಕುಖ್ಯಾತಿಗೆ ಕಾರಣವಾಗಿತ್ತು. ಪಾಂಗಾಳದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗುತ್ತಿರುವ ಶರತ್‌ ಶೆಟ್ಟಿ ಹತ್ಯೆ ಪ್ರಕರಣವು ಇಲ್ಲಿನವನ್ನು ಬೆಚ್ಚಿ ಬೀಳಿಸಿದೆ. ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಎಂದು ಅಮರನಾಥ ಶೆಟ್ಟಿ ಪಾಂಗಾಳ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  ಇಂಧನ ಹೂಡಿಕೆದಾರರಿಗೆ ಅವಕಾಶಗಳ ಹೆಬ್ಬಾಗಿಲು: ಪ್ರಧಾನಿ ಮೋದಿ ಮುಕ್ತ ಆಹ್ವಾನ

Advertisement

Udayavani is now on Telegram. Click here to join our channel and stay updated with the latest news.

Next