Advertisement

ಕಾವ್ಯಾ ಹೋಟೆಲ್‌ ಗರ್ಮಾ ಗರಂ ದೋಸೆ

08:27 PM Feb 16, 2020 | Sriram |

ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡ, ಸಾಹಿತಿಗಳ, ಪ್ರತಿಷ್ಠಿತ ಕಾಲೇಜುಗಳ ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಆಗರ. ರಾಜ್ಯದ ಬಹುತೇಕ ಭಾಗಗಳಿಂದ ವಿದ್ಯಾರ್ಥಿಗಳು ಧಾರವಾಡಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಇಲ್ಲಿನ ಹೋಟೆಲ್‌ಗ‌ಳು, ಪಿ.ಜಿ.ಕೇಂದ್ರಗಳು ವಿದ್ಯಾರ್ಥಿಗಳಿಗೆ ಆಶ್ರಯ ಒದಗಿಸುತ್ತವೆ. ವಿದ್ಯಾರ್ಥಿಗಳ ನೆಚ್ಚಿನ ಆಹಾರ ಕೇಂದ್ರಗಳಲ್ಲಿ “ಕಾವ್ಯಾ ಹೋಟೆಲ್‌’ ಕೂಡಾ ಒಂದು. ಕಡಿಮೆ ದರದಲ್ಲಿ ಶುಚಿ ಮತ್ತು ರುಚಿಯಾದ ಆಹಾರವನ್ನು ಅದು ಒದಗಿಸುತ್ತಿದೆ.

Advertisement

ಅಲ್ಪಾವಧಿಯಲ್ಲಿ ಜನಪ್ರಿಯತೆ
ಈ ಹೋಟೆಲ್‌ನ ಮಾಲೀಕರು ಎಂ.ಕೆ.ಮಲ್ಲೇಶ್. ಮೂಲತಃ ಕಂಪ್ಲಿಯವರಾದ ಇವರು ಅಡುಗೆ ಕಲೆಯನ್ನು ತಮ್ಮ ಕುಟುಂಬದ ಹಿರಿಯರಿಂದ ಕಲಿತುಕೊಂಡರು. ಮುಂದೆ ಪಾಕಪ್ರವೀಣರಾಗಿ ವಿವಿಧ ಬಗೆಯ ಖಾದ್ಯಗಳ ತಯಾರಿಯಲ್ಲಿ ಪರಿಣತರಾಗಿದ್ದಾರೆ. ಕಂಪ್ಲಿಯಲ್ಲಿ 6 ವರ್ಷಗಳ ಕಾಲ ಹಾಗೂ ಗಜೇಂದ್ರಗಡದಲ್ಲಿ 4 ವರ್ಷಗಳ ಕಾಲ ಹೋಟೆಲ್‌ ವ್ಯಾಪಾರ ನಡೆಸಿ ಕಳೆದ ಆರೇಳು ತಿಂಗಳುಗಳಿಂದ ಧಾರವಾಡದಲ್ಲಿ ಹೋಟೆಲ್‌ ತೆರೆದು, ಜನರಿಗೆ ಬೇಕಾದಂತೆ ಸ್ವಾದಿಷ್ಟಕರ ತಿಂಡಿ, ಊಟ ಉಣಬಡಿಸುವುದರ ಮೂಲಕ ಅಲ್ಪಾವಧಿಯಲ್ಲಿಯೇ ಜನಪ್ರಿಯತೆ ಗಳಿಸಿದ್ದಾರೆ.

ದೋಸೆಯೇ ಹೈಲೈಟ್‌
ಈ ಹೋಟೆಲ್‌ನಲ್ಲಿ ದೋಸೆ ತುಂಬಾ ಜನಪ್ರಿಯ ಖಾದ್ಯ ಎನ್ನುವುದು ಇಲ್ಲಿನ ಕಾಯಂ ಗಿರಾಕಿಗಳ ಅಭಿಪ್ರಾಯ. ಕಾದ ಕಾವಲಿಯ ಮೇಲೆ ಇವರ ಕೈಗಳಿಂದ ಅರಳುವ ಗರಿ ಗರಿ ದೋಸೆಗಳು ನೋಡ ನೋಡುತ್ತಿದ್ದಂತೆಯೇ ತಿಂಡಿಪ್ರಿಯರ ಜಿಹ್ವಾಚಪಲವನ್ನು ತೀರಿಸುತ್ತಾ ಖಾಲಿಯಾಗಿಬಿಡುತ್ತವೆ. ತಿಂಡಿಪ್ರಿಯರ ದಂಡು ನಿಂತುಕೊಂಡೇ ದೋಸೆಗಳ ಸ್ವಾದವನ್ನು ಸವಿಯುತ್ತದೆ. ಇಲ್ಲಿ ತಯಾರಾಗುವ ಮೃದುವಾದ ಇಡ್ಲಿ, ವಡಾ, ಪೂರಿ ಸಾಗು, ಪಲಾವ್‌ ಕೂಡಾ ಗ್ರಾಹಕರನ್ನು ಕೈಬೀಸಿ ಕರೆಯುತ್ತವೆ. ಹುರಿಗಡಲೆ, ಹಸಿಮೆಣಸಿನಕಾಯಿ ಹಾಗೂ ಕೊಬ್ಬರಿ ಮಿಶ್ರಿತ ಚಟ್ನಿ ಈ ಹೋಟೆಲಿನ ಮತ್ತೂಂದು ಆಕರ್ಷಣೆ.

ಇಲ್ಲಿ ಎಲ್ಲವೂ ಅವರೇ
ತಿಂಡಿ ತಯಾರಿಕೆಯಲ್ಲಿ ಎಂ.ಕೆ.ಮಲ್ಲೇಶ್‌ರಿಗೆ, ಅವರ ಪತ್ನಿ ಎಂ.ಕೆ.ಸಂಜನಾ ಅವರೂ ನೆರವಾಗುತ್ತಾರೆ. ಹೋಟೆಲ್‌ನ ಎಲ್ಲಾ ಜವಾಬ್ದಾರಿಗಳನ್ನೂ ಮಲ್ಲೇಶ್‌ರವರೇ ನಿರ್ವಹಿಸುತ್ತಾರೆ. ಸಪ್ಲಯರ್‌, ಕ್ಯಾಷಿಯರ್‌ ಇಲ್ಲಿ ಎಲ್ಲವೂ ಅವರೇ. ಚಟ್ನಿ, ಪಲ್ಯ, ಬಾಜಿಗಳನ್ನು ಅಳೆದು ತೂಗಿ ಬಡಿಸದೇ ಧಾರಾಳವಾಗಿ ತಿಂಡಿಪ್ರಿಯರಿಗೆ ತೃಪ್ತಿಯಾಗುವಷ್ಟೇ ಬಡಿಸುವುದು ಗ್ರಾಹಕರ ಮೇಲೆ ಅವರಿಗಿರುವ ಪ್ರೀತಿ ವಿಶ್ವಾಸಕ್ಕೆ ಹಿಡಿದ ಕೈಗನ್ನಡಿ.

ಒಂದು ಪ್ಲೇಟ್‌ ದೋಸೆಗೆ 20 ರೂ., ಪ್ಲೇಟ್‌ ಪೂರಿಗೆ 10 ರೂ., 2 ಇಡ್ಲಿಗೆ 10 ರೂ., ಪ್ಲೇಟ್‌ ವಡಾ(2) 10 ರೂ., ಪ್ಲೇಟ್‌ ಪಲಾವ್‌ಗೆ 10 ರೂ., ಅನ್ನ ಸಾಂಬಾರ್‌ಗೆ 20 ರೂ.

Advertisement

ಹೋಟೆಲ್‌ ಸಮಯ:
ಸೋಮ- ಭಾನು, ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ

ಈ ಹೋಟೆಲ್‌ ಕರ್ನಾಟಕ ವಿಶ್ವವಿದ್ಯಾಲಯದ ಹಿಂಬದಿಯ ಕಲ್ಯಾಣ ನಗರದಲ್ಲಿದೆ.

– ಸೋಮಶೇಖರ ಶಿವನಪ್ಪನವರ ಮಾಗಳ

Advertisement

Udayavani is now on Telegram. Click here to join our channel and stay updated with the latest news.

Next