Advertisement

ಕಾವ್ರಾಡಿ: ನದಿ ಕೊರೆತ ತಡೆಗೆ ಕೈಗೂಡದ ಯೋಜನೆ

05:32 PM Dec 18, 2021 | Team Udayavani |

ಕುಂದಾಪುರ: ಮಳೆಗಾಲದಲ್ಲಿ ನದಿ ಕೊರೆತದ ಭೀತಿ. ದಿನಗಳೆದಂತೆ ಕೃಷಿಭೂಮಿ ನದಿ ಪಾಲಾಗುವ ಆತಂಕ. ಅಕ್ರಮ ಮರಳು ಅಡ್ಡೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆಯೇ ನದಿಯಲ್ಲಿ ನೀರಿನ ಹರಿವು ದಿಕ್ಕು ತಪ್ಪಿ ಎಲ್ಲೆಲ್ಲೋ ಹರಿದು ನದಿಪಾತ್ರವನ್ನು ಕೊರೆಯುತ್ತಾ ಕೃಷಿಭೂಮಿಯನ್ನು ನುಂಗುತ್ತಾ ಸಾಗುವ ಈ ಭಾಗದಲ್ಲಿ ಹೆಚ್ಚಾಗಿದೆ.

Advertisement

ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಕಂಡ್ಲೂರು ಸೇತುವೆಯ ಮೇಲ್ಭಾಗದ ಕಾವ್ರಾಡಿ ಗ್ರಾಮದಲ್ಲಿ ವಾರಾಹಿ ನದಿಯ ಬಲದಂಡೆಯು ತಗ್ಗಾಗಿದೆ. ಮಳೆಗಾಲದಲ್ಲಿ ನದಿಯು ಉಕ್ಕಿ ಹರಿದು ನದಿದಂಡೆ ಕುಸಿತಕ್ಕೊಳಗಾಗಿ ನದಿಯ ನೀರು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿಗಳಿಗೆ ನುಗ್ಗಿ ಹಾನಿಯಾಗುತ್ತಿದೆ. ಈ ಪ್ರದೇಶದಲ್ಲಿ ಸುಮಾರು 75ಕ್ಕೂ ಹೆಚ್ಚು ಕುಟುಂಬಗಳ 450ರಿಂದ 500 ಜನರು ವಾಸ ಮಾಡುತ್ತಿದ್ದಾರೆ. ಇವರು ಸುಮಾರು 40ಕ್ಕಿಂತ ಹೆಚ್ಚು ಎಕರೆ ಪ್ರದೇಶದಲ್ಲಿ ತೆಂಗು, ಅಡಕೆ ತೋಟದೊಂದಿಗೆ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ನದಿಯ ನೀರು ಈ ಪ್ರದೇಶದಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ.

ಬೇಡಿಕೆ
ಸಣ್ಣ ನೀರಾವರಿ ಇಲಾಖೆಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಕಾಮಗಾರಿಯನ್ನು ಕೈಗೊಳ್ಳುವುದು ಅತೀ ಅವಶ್ಯವಾಗಿದ್ದು ಸುಮಾರು 4 ಕೋ.ರೂ. ಅನುದಾನ ಒದಗಿಸಿಕೊಡಲು ಇಲಾಖೆಯಿಂದ ಕೋರಲಾಗಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಸ್ಥಳ ಪರಿಶೀಲಿಸಿದ್ದಾರೆ. ಕಾಮಗಾರಿ ಅವಶ್ಯಕವಾಗಿರುವುದರಿಂದ 4 ಕೋ.ರೂ. ಅನುದಾನ ದೊಂದಿಗೆ ಅನುಮೋದನೆ ದೊರಕಿಸಿಕೊಡಲು ಮನವಿ ಮಾಡಲಾಗಿತ್ತು. ಆದರೆ ಇನ್ನೂ ಮಂಜೂರಾಗಿಲ್ಲ.

ಇದನ್ನೂ ಓದಿ:ಯುಪಿ ಸಿಎಂ ಯೋಗಿಗೆ ಹೊಸ ಬಿರುದು ಕೊಟ್ಟ ಪ್ರಧಾನಿ ಮೋದಿ!

ಅನವಶ್ಯ ತೊಂದರೆ
ಮರಳು ಅಡ್ಡೆಯಿಂದಾಗಿ ನದಿಕೊರೆತ ಹೆಚ್ಚಾಗುತ್ತಿದ್ದು ಈ ಭಾಗದ ಕೃಷಿಕರಿಗೆ ತೊಂದರೆ ಆಗುತ್ತಿದೆ.ಆದರೆ ಇಲಾಖೆ ಅನುದಾನ ಮಂಜೂರಾತಿಗೆ ಮೀನಮೇಷ ಎಣಿಸುತ್ತಿದೆ. ಅನುದಾನ ಮಂಜೂರಾಗಿ ಕಾಮಗಾರಿ ಈಗಲೇ ಆರಂಭ ವಾಗದೇ ಇದ್ದರೆ ಜೂನ್‌ ವೇಳೆಗೆ ಮತ್ತೆ ಈ ಭಾಗದ ಜನರಿಗೆ ತೊಂದರೆ ಇದೆ.. ನದಿ ದಂಡೆ ದಿನದಿಂದ ದಿನಕ್ಕೆ
ವಿಸ್ತಾರ ಆಗುತ್ತಿದೆ. ಕೃಷಿ ಭೂಮಿ ನದಿ ಪಾಲಾಗುತ್ತಿದೆ.

Advertisement

ಅದಕ್ಕಿಂತ ಹೆಚ್ಚಾಗಿ ಕೃಷಿಗೆ ನೀರು ನುಗ್ಗುತ್ತದೆ. ಮೊದಲೇ ಅತಿವೃಷ್ಟಿ, ಅಕಾಲದಲ್ಲಿ ವೃಷ್ಟಿಯಿಂದಾಗಿ ತೊಂದರೆ. ಈಗ ಅದಕ್ಕೆ ಹೊಸ ಸೇರ್ಪಡೆ. ಅಷ್ಟಲ್ಲದೇ ವಿಧಾನಪರಿಷತ್‌ ಅರ್ಜಿ ಸಮಿತಿಯಲ್ಲಿ ಇತ್ಯರ್ಥವಾದರೂ ಅನುದಾನ ನೀಡಿಕೆಗೆ ವಿಳಂಬ ಮಾಡುತ್ತಿರುವುದು ಸಮಿತಿಯ ತೀರ್ಮಾನಕ್ಕೆ ಮಾಡುವ ಅವಮಾನವೂ ಆಗಿದೆ. ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕಾಮಗಾರಿಗೆ ಬೇಡಿಕೆ
ಸುಮಾರು 1.50 ಕಿ.ಮೀ. ಉದ್ದಕ್ಕೆ ನದಿದಂಡೆ ಸಂರಕ್ಷಣಾ ಕಾಮಗಾರಿಯ ಅಗತ್ಯವಿದೆ. ಅದಕ್ಕಾಗಿ ಸಾರ್ವಜನಿಕರು ಸಾಕಷ್ಟು ಬೇಡಿಕೆ ಮಾಡಿದ್ದರು. ಆದರೆ ಎಲ್ಲೂ ಪ್ರಯೋಜನ ಕಾಣದೆ ಇದ್ದಾಗ ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕುಮಾರ್‌ ಕೊಂಡಜ್ಜಿ ಅವರು ವಿಧಾನಪರಿಷತ್‌ ಅರ್ಜಿ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಸಮಿತಿಯಲ್ಲಿ ವಿಚಾರಣೆ ನಡೆದು, ಕಾವ್ರಾಡಿ ಗ್ರಾಮದ ವಾರಾಹಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಸಮೀಪ ಸುಮಾರು 700 ಮೀ. ನಿರ್ಮಿಸುವ ಮೂಲಕ ನದಿಯ ಕೊರೆತದಿಂದ ಭೂ ಕುಸಿತವಾಗಿ ಮಳೆಗಾಲದಲ್ಲಿ ನೀರು ಮನೆ ಮತ್ತು ತೆಂಗು ಹಾಗೂ ಅಡಿಕೆ ತೋಟಗಳಿಗೆ ನುಗ್ಗಿ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಕುರಿತು ನೀಡಿರುವ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ.

ತೊಂದರೆ ನಿವಾರಿಸಿ
ನದಿ ದಂಡೆ ವಿಸ್ತಾರ ಹೆಚ್ಚಾಗುತ್ತಿದ್ದು ಇಲಾಖೆ ಮುತುವರ್ಜಿ ವಹಿಸಿ ತಡೆಗೋಡೆ ರಚನೆಗೆ ಕ್ರಮ ಕೈಗೊಳ್ಳಬೇಕಿದೆ. ಸವಕಳಿ ತಡೆಯಲು ಇಲ್ಲಿ ರಿವಿಟ್‌ಮೆಂಟ್‌ ಕಟ್ಟುವುದೇ ಪರಿಹಾರವಾಗಿದೆ. ಇದರಿಂದ ತೋಟಗಳಿಗೆ ನೀರು ಬರುವುದನ್ನೂ ತಡೆಯಬಹುದು. ಇದನ್ನು ಇಲಾಖೆ ಗಮನಿಸಬೇಕಿದೆ.
-ಕೆ. ವಿಕಾಸ ಹೆಗ್ಡೆ,
ಬಸ್ರೂರು ಪಂಚಾಯತ್‌ ಮಾಜಿ ಸದಸ್ಯ

ಮಂಜೂರಾಗಿಲ್ಲ
ವಿಧಾನಪರಿಷತ್‌ ಅರ್ಜಿ ಸಮಿತಿಯಲ್ಲಿ ಆದ ತೀರ್ಮಾನದಂತೆ 4 ಕೋ.ರೂ. ಅನುದಾನ ನೀಡುವಂತೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಕಳುಹಿಸಲಾಗಿದೆ. ಮಂಜೂರಾತಿಗೆ ಕಾಯಲಾಗುತ್ತಿದೆ. ಅನುದಾನ ಮಂಜೂರಾದ ಕೂಡಲೇ ಮುಂದಿನ ಪ್ರಕ್ರಿಯೆ ನಡೆಸಲಾಗುವುದು.
-ನಾಗಲಿಂಗ,
ಕಿರಿಯ ಎಂಜಿನಿಯರ್‌,
ಸಣ್ಣ ನೀರಾವರಿ ಇಲಾಖೆ ಉಡುಪಿ ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next