Advertisement

Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

04:27 PM Oct 21, 2024 | Team Udayavani |

ಕಾವೂರು: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ ನಂಬ್ರ 18ರಲ್ಲಿ 4ನೇ ಮೈಲು ಮುಲ್ಲಕಾಡು ಅಂಬೇಡ್ಕರ್‌ ಕಾಲನಿಯಲ್ಲಿ ಒಳ ಚರಂಡಿಯಿಂದ ನಿತ್ಯ ಮಲೀನ ನೀರು ಸೋರಿಕೆಯಾಗಿ ಸ್ಥಳೀಯ ನಿವಾಸಿಗಳು ರೋಗ ಭೀತಿ ಎದುರಾಗಿದೆ.

Advertisement

ಇದಕ್ಕೆ ಮುಖ್ಯ ಕಾರಣ ಇಲ್ಲಿನ ಚರಂಡಿಯ ಒಂದೆರಡು ಚೇಂಬರ್‌ಗಳು ಖಾಸಗಿ ಜಮೀನಿನ ಭಾಗದಲ್ಲಿ ಹಾದುಹೋಗಿದ್ದು, ಮಾಲಕರ ಅನುಮತಿ ಇಲ್ಲದ ಕಾರಣ ಇದೀಗ ದುರಸ್ತಿಯೂ ಸಾಧ್ಯವಾಗುತ್ತಿಲ್ಲ. ಸಂಬಂಧ ಪಟ್ಟವರಿಗೆ ದುರಸ್ತಿಗೆ ಸಹಕಾರ ಕೋರಿ ಪಾಲಿಕೆಯಿಂದ ನೋಟಿಸ್‌ ನೀಡಲಾಗಿದೆ.

ಸುಮಾರು ಹತ್ತೆನ್ನೆರಡು ವರ್ಷಗಳ ಹಿಂದೆ ಪರಿಶಿಷ್ಟರ ಸೌಲಭ್ಯಕ್ಕಾಗಿ ಜನರು ಸಂಚಾರ ನಡೆಸುತ್ತಿದ್ದ ಸಂಪರ್ಕ ರಸ್ತೆಯ ನಡುವೆ ಒಳಚರಂಡಿ ಪೈಪ್‌ ಹಾಕಲಾಗಿತ್ತು. ಭೂ ಮಾಲಕರು ತಕರಾರು ಎತ್ತಿ ನ್ಯಾಯಾಲಯದ ಕಟಕಟೆ ಹತ್ತಿದ್ದರು. ಸಮಸ್ಯೆ ಪರಿಹಾರಕ್ಕಾಗಿ ಟಿಡಿಆರ್‌ ಮೂಲಕ ಜಾಗ ಸ್ವಾಧೀನಕ್ಕೆ ಪಾಲಿಕೆ ಮುಂದಾಯಿತಾದರೂ ಕಾನೂನು ಪ್ರಕ್ರಿಯೆ ಗಳಿಂದ ದುರಸ್ತಿ ಸಾಧ್ಯವಾಗದೆ ಸೋರಿಕೆ ನಿರಂತರವಾಗಿ ನಡೆಯುತ್ತಿದೆ.

ಇದೀಗ ಒಳಚರಂಡಿ ದುರಸ್ತಿ ಅಸಾಧ್ಯವಾಗಿರುವುದರಿಂದ ತ್ಯಾಜ್ಯನೀರು ಸೋರಿಕೆಯಾಗಿ ಕಾಲನಿಯ ಸುತ್ತಮುತ್ತ ಮಾಲಿನ್ಯ, ದುರ್ವಾಸನೆ ಹರಡಿಕೊಂಡಿದೆ.

ಹಲವು ವರ್ಷಗಳಿಂದ ಪಾಲಿಕೆಯ ಸದಸ್ಯರ ಮುತುವರ್ಜಿಯಿಂದ ಟ್ಯಾಂಕರ್‌ ಮೂಲಕ ತ್ಯಾಜ್ಯ ಸ್ವತ್ಛಗೊಳಿ ಸಲಾಗುತ್ತಿದೆಯಾದರೂ ಇದು ಸಾಕಾಗುತ್ತಿಲ್ಲ. ಇಲ್ಲಿನ ಒಳಚರಂಡಿ ಪೈಪ್‌ಲೈನ್‌ಗೆ ಸುತ್ತಮುತ್ತಲಿನ ವಾಣಿಜ್ಯ ಸಮುಚ್ಚಯ ಹಾಗೂ ನೂರಾರು ಮನೆಗಳ ಸಂಪರ್ಕ ನೀಡಲಾಗಿದೆ. ಹೀಗಾಗಿ ಒಂದೆರಡು ಗಂಟೆಗಳಲ್ಲೇ ಮತ್ತೆ ತುಂಬಿಕೊಂಡು ಓವರ್‌ಫ್ಲೋ ಆಗುವ ಮೂಲಕ ಚರಂಡಿ ಸೇರುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿ ಈ ಪ್ರದೇಶ ಬದಲಾಗಿದ್ದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಜ್ವರದಿಂದ ಬಳಲುತ್ತಿದ್ದಾರೆ.

Advertisement

ತಾತ್ಕಾಲಿಕ ಪರಿಹಾರ ಕೈಗೊಳ್ಳಲಾಗಿದೆ
ಬ್ಲಾಕ್‌ ಆಗಿರುವ ಚೇಂಬರ್‌ ದುರಸ್ತಿಗೆ ಖಾಸಗಿ ಜಮೀನು ಒಳಭಾಗದಲ್ಲಿರುವುದರಿಂದ ಮಾಲಕರ ಅನುಮತಿ ಇಲ್ಲದೆ ಸಾಧ್ಯವಾಗುತ್ತಿಲ್ಲ. ಪಾಲಿಕೆ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಟ್ಯಾಂಕರ್‌ ಮೂಲಕ ತ್ಯಾಜ್ಯ ತೆಗೆದು ಸೋರಿಕೆ ತಡೆಗಟ್ಟಲು ತಾತ್ಕಾಲಿಕ ಪರಿಹಾರ ಕೈಗೊಂಡಿದ್ದೇನೆ. ಜಮೀನು ಮಾಲಕರಿಗೆ ಮನವಿ ಮಾಡಿ ಟಿಡಿಆರ್‌ ನೀಡಿ ಪೈಪ್‌ಲೈನ್‌ ಹಾದು ಹೋದ ಜಮೀನು ಪಡೆದು ಸಮಸ್ಯೆ ಬಗೆ ಹರಿಸಲು ಶಾಸಕರು ಆಸಕ್ತಿ ವಹಿಸಿದ್ದಾರೆ ಎಂದು ಮಹಾನಗರ ಪಾಲಿಕೆ 18ನೇ ವಾರ್ಡ್‌ ಸದಸ್ಯೆ ಗಾಯತ್ರಿ ರಾವ್‌ ತಿಳಿಸಿದ್ದಾರೆ.

ಪಾಲಿಕೆ ಅಧಿಕಾರಿಗಳ ಮನಕ್ಕೆ ತಂದಿದ್ದೇವೆ
ಪಾಲಿಕೆ ಅಧಿಕಾರಿಗಳನ್ನು ಕರೆಸಿ ಸಮಸ್ಯೆಯನ್ನು ತಿಳಿಸಿದ್ದೇವೆ. ಇರುವ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಿ ಇಲ್ಲವೇ ಹೊಸ ಪೈಪ್‌ಲೈನ್‌ ಅಳವಡಿಸಿ ಡ್ರೈನೇಜ್‌ ಸಂಪರ್ಕ ಕಲ್ಪಿಸಿ ಎಂದು ಮನವಿ ಮಾಡಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಗಾಯತ್ರಿ ರಾವ್‌ ಅವರು ಟ್ಯಾಂಕರ್‌ ಮೂಲಕ ಚರಂಡಿ ಸ್ವತ್ಛತೆಗೆ ಒತ್ತು ನೀಡಿದ್ದಾರೆ ಮಾತ್ರವಲ್ಲ, ದುರಸ್ತಿಗೆ ಕ್ರಮ ವಹಿಸಿದ್ದಾರೆ.
-ಆನಂದ ಪಾಂಗಳ, ಅಧ್ಯಕ್ಷ, ಪ.ಜಾ., ಪ.ಪಂ. ಹಿತರಕ್ಷಣಾ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next