Advertisement

ಕವಿರಾಜಮಾರ್ಗ ಗ್ರಂಥದಿಂದ ಕನ್ನಡ ಭಾಷೆಗೆ ಹಿರಿಮೆ

10:38 AM Sep 12, 2017 | Team Udayavani |

ಶಹಾಬಾದ: ಕನ್ನಡ ಭಾಷೆಗೆ ಹಿರಿಮೆ, ಗರಿಮೆ ತಂದು ಕೊಟ್ಟ ಗ್ರಂಥವೇ ಕವಿರಾಜಮಾರ್ಗ ಎಂದು ಚಿತ್ತಾಪುರ ಸರಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ|ಶರಣಬಸಪ್ಪ ದಿಗ್ಗಾವಿ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಕಲಬುರಗಿ ಗ್ರಾಮೀಣ ಹಾಗೂ ಭಂಕೂರ ಸರಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಭಂಕೂರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕನ್ನಡದ ಇತಿಹಾಸದಲ್ಲಿ ಕವಿರಾಜ ಮಾರ್ಗಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಕನ್ನಡದ ಪ್ರಾಚೀನತೆ ಸಾಕ್ಷಿಯಾದ ಶಾಸನಗಳ ಪೈಕಿ ಹಲ್ಮಿಡಿ ಶಾಸನ ಮೊದಲನೆಯದ್ದು ಎನಿಸಿದರೆ, ಕನ್ನಡದಲ್ಲಿ ಲಭ್ಯವಿರುವ ಗ್ರಂಥಗಳಲ್ಲಿ ಕವಿರಾಜ ಮಾರ್ಗವು ಅತ್ಯಂತ ಹಳೆಯದು. ಈಗಿನ ಮಟ್ಟಿಗೆ ಇದೇ ಮೊದಲನೆಯದು ಎಂದರೂ ತಪ್ಪಲ್ಲ. ಕವಿಶ್ರೇಷ್ಠರಿಗೆ ದಾರಿದೀಪವಾಗಲಿ ಎಂದು ಕವಿರಾಜ ಮಾರ್ಗ ಕಾವ್ಯ ರಚಿಸಿದ್ದಾನೆ ಎಂದು ಭಾವಿಸಬಹುದಾಗಿದೆ. ಪೂರ್ವದ ಹಳೆಗನ್ನಡ ಸಾಹಿತ್ಯದ ಮೇಲೆ ಬೆಳಕನ್ನು ಚೆಲ್ಲಿ ಆಯುಗದ ಪ್ರಾಚೀನ ಕನ್ನಡ ಸಾಹಿತ್ಯದ ರೂಪಗಳನ್ನು ಪರಿಚಯ ಮಾಡಿ ವ್ಯಾಕರಣ, ಅಲಂಕಾರ, ಛಂದಸ್ಸು ಹಾಗೂ ಕಾವ್ಯ ಮೀಮಾಂಸೆ ತತ್ವಗಳನ್ನು ಕವಿರಾಜ ಮಾರ್ಗ ಮೊಟ್ಟ ಮೊದಲ ತಿಳಿಸುವ ಲಾಕ್ಷಣಿಕ ಗ್ರಂಥವಾಗಿದೆ. ಅಲ್ಲದೇ ಪ್ರಾಚೀನ ಕನ್ನಡ ಸಾಹಿತ್ಯ ಚಿರಿತ್ರೆ ಆಧಾರ ಗ್ರಂಥವಾಗಿದೆ. ಕವಿರಾಜ ಮಾರ್ಗ ಕೃತಿ ಹೆಸರೇ ಬಹು ವಿಶಿಷ್ಟ. ಕವಿಗಳಿಗೆ, ರಾಜರಿಗೆ ಒಂದೇ ಗುರಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ಕೃತಿ ಬರೆದ ಶ್ರೀ ವಿಜಯ ಕನ್ನಡ ನಾಡಿನ ವಿಸ್ತೀರ್ಣ ಕಾವೇರಿ ನದಿಯಿಂದ ಗೋದಾವರಿ ನದಿ ವರೆಗೆ ವಿಸ್ತಾರಗೊಂಡ ಬಗ್ಗೆ ದಾಖಲಿಸಿದ್ದಾನೆ. ಕನ್ನಡ ನಾಡು,ಕನ್ನಡಿಗರ ಗುಣ, ಅಭಿಮಾನ, ಸಜ್ಜನಿಕೆ, ಗಾಂಭೀರ್ಯ, ಉಗ್ರತೆ, ಧೀರತ್ವ, ವಿವೇಕ ಹಾಗೂ ಕವಿತ್ವ ಮೊದಲಾದ ವಿಷಯಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಆದ್ದರಿಂದ ಇದು ಕನ್ನಡಿಗರಾದ ನಮ್ಮ ಹೆಮ್ಮೆಯ ಗ್ರಂಥವೇ ಕವಿರಾಜ ಮಾರ್ಗ ಎಂದು ಹೇಳಿದರು.

ಭಂಕೂರ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ವಗ್ಗನ್‌ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್‌, ಕಸಾಪ ಭಂಕೂರ ಘಟಕದ ಅಧ್ಯಕ್ಷ ಪಿ.ಎಸ್‌. ಕೊಕಟನೂರ್‌, ಭಂಕೂರ ಗ್ರಾಪಂ ಅಧ್ಯಕ್ಷ ಕಿರಣ ಜಡಗಿಕರ್‌, ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್‌ ಧನ್ನಾ ಇದ್ದರು. ಭಂಕೂರ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಮಿತ್ರಾ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next