Advertisement
ಇಂದು ಉಡುಪಿಯ ರಾಜಮಾರ್ಗವೆನಿಸಿರುವ ಕವಿ ಮುದ್ದಣ ಮಾರ್ಗ ಅಂದೂ ನಗರದ ಬೆನ್ನೆಲುಬಾಗಿದ್ದ ರಸ್ತೆಯೇ. ವಿಶಾಲವಾದ ರಸ್ತೆ, ಎರಡೂ ಬದಿಯ ರಾರಾಜಿಸುವ ವಾಣಿಜ್ಯ ಕಟ್ಟಡಗಳು, ಮಳಿಗೆಗಳು, ಸದಾ ಜನಸಂದಣಿ-ಒಟ್ಟಿನಲ್ಲಿ ಯಾವಾಗಲೂ ಚಟುವಟಿಕೆಯಿಂದ ಕೂಡಿರುವ ಪ್ರಮುಖ ರಸ್ತೆ. ಇಂಗ್ಲಿಷಿನ ಎ ಟು ಜೆಡ್ ಎನ್ನುವಂತೆ ಮಿಠಾಯಿ ಅಂಗಡಿಯಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗಿನ ವಾಣಿಜ್ಯ ಮಳಿಗೆಗಳು ಇಲ್ಲಿವೆ. ಆದರೂ ಈ ಮಾರ್ಗಕ್ಕೆ ಒಂದು ಗಂಭೀರತೆಯಿದೆ, ಶಾಂತತೆಯಿದೆ. ಅದರದ್ದೇ ಆದ ವಿಶಿಷ್ಟ ಸೌಂದರ್ಯವಿದೆ.
Related Articles
ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಕಚೇರಿ ಆರಂಭವಾದದ್ದು ಇದೇ ರಸ್ತೆಯ ಮುಕುಂದ ನಿವಾಸದಲ್ಲಿ. ಡಾ| ಮಾಧವ ಪೈಯವರು ಚೇರ್‌ಮನ್ ಆಗಿದ್ದರು. ಪ್ರಸ್ತುತ ಮುಕುಂದ ನಿವಾಸವಿದ್ದ ಕಟ್ಟಡ ತೆಗೆಯಲ್ಪಟ್ಟು ಹೊಸ ಕಟ್ಟಡ ನಿರ್ಮಾಣವಾಗಿದೆ.
Advertisement
ಮುದ್ದಣರ ಹೆಸರನ್ನೇ ಬಳಸೋಣ ಕೆ.ಎಂ. ಮಾರ್ಗ ಬಿಟ್ಟು ಬಿಡೋಣನಂದಳಿಕೆಯ ಕವಿ ಮುದ್ದಣರು ಉಡುಪಿಯ ಬೋರ್ಡ್ ಹೈಸ್ಕೂಲ್ ಮತ್ತು ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಪತ್ನಿ ಮನೋರಮೆಯೊಂದಿಗೆ ವಾಸಿಸುತ್ತಿದ್ದುದು ಇದೇ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ (ಈಗಿನ ಉಡುಪಿ ಸ್ವೀಟ್ಸ್ ಇರುವ ಸ್ಥಳ). 1962ರಲ್ಲಿ ಡಾ| ವಿ.ಎಸ್. ಆಚಾರ್ಯರು ಪ್ರಥಮ ಬಾರಿಗೆ ನಗರಸಭೆ ಅಧ್ಯಕ್ಷರಾಗಿದ್ದಾಗ ಊರಿನ ಎಲ್ಲ ರಸ್ತೆಗಳಿಗೂ ಹೆಸರಿಡಲು ಮುಂದಾದರು. ಆಗ ಬಹು ಜನರ ಬೇಡಿಕೆಯಂತೆ ಕವಿ ಮುದ್ದಣರು ವಾಸಿಸುತ್ತಿದ್ದ ರಸ್ತೆಗೆ ಅವರ ಹೆಸರನ್ನೇ ಇಡಲಾಯಿತು. ಕ್ರಮೇಣ ಅದು “ಕೆ.ಎಂ. ಮಾರ್ಗ’ ಎಂದಾಯಿತು. ಮುದ್ದಣರು ಬದಿಗೆ ಸರಿದರು ! ನಮ್ಮ ಕವಿ ಮುದ್ದಣನ ಹೆಸರನ್ನು ಮತ್ತೆ ಬಳಸೋಣ. ಕೆಎಂ ಮಾರ್ಗ ಎನ್ನುವ ಬದಲು ಕವಿ ಮುದ್ದಣ ಮಾರ್ಗ ಎಂದು ಬಾಯ್ತುಂಬ ಕರೆಯೋಣ. ಅದು ನಮ್ಮ ಹೆಮ್ಮೆ. ಹಿಂದೆ ಈ ರಸ್ತೆ “ಚರ್ಚ್ ರಸ್ತೆ’ಯೆಂದಿತ್ತು. ಹಿರಿಯರ ಪ್ರಕಾರ ಮುದ್ದಣ “ರಾಮಾಶ್ವಮೇಧ’ ಕೃತಿ ರಚಿಸಿದ್ದು ಇಲ್ಲಿಯೇ ಅಂತೆ. 1995ರ ವರೆಗೆ ಅಸ್ತಿತ್ವದಲ್ಲಿದ್ದ ಮನೆಯ ಕಂಪೌಂಡ್ ವಾಲ್‌ಗೆ “ಕವಿ ಮುದ್ದಣರ ಮನೆ’ ಎಂದೇ ನಗರಸಭೆಯಿಂದ ಬರೆಸಲಾಗಿತ್ತು. ಸಾಹಿತಿ ನಾ. ಮೊಗಸಾಲೆಯವರು ಕವಿ ಮುದ್ದಣರ ಪುತ್ಥಳಿಯನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದರು, ಅದರಂತೆ ನಗರಸಭೆ ಎದುರಿನಲ್ಲಿ ಕವಿ ಮುದ್ದಣರ ಪುತ್ಥಳಿ ಇಂದಿಗೂ ಇದೆ. ಐದಕ್ಷರಗಳು ಬೆಳಗಿದವು ಎರಡಕ್ಷರ ಹಾಗೇ ಉಳಿದವು
ಉದ್ಯಾವರದಲ್ಲಿ ತಮ್ಮ ಹಿರಿಯರಿಂದ ನಡೆಸಿಕೊಂಡು ಬಂದ ಅಗ್ರಿಕಲ್ಚರಲ್ ಇಂಡಸ್ಟ್ರೀಸ್ ಸಂಸ್ಥೆಯನ್ನು ಮುಂದುವರಿಸಿದ್ದª ಶೇಷಗಿರಿ ಶೆಣೈ ಅವರು “ಕಸ್ತೂರಿ’ ಹೆಸರಿನ ಬ್ರ್ಯಾಂಡ್‌ನಿಂದ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದ್ದರಂತೆ. ಅದರ ಆನುಭವದಲ್ಲೇ ಹೊಟೇಲ್ ಉದ್ಯಮಕ್ಕೆ ಕಾಲಿಟ್ಟರಂತೆ. 1964ರಿಂದ 1975ರ ಅವಧಿಯಲ್ಲಿ “ಕಸ್ತೂರಿ ಗ್ರೂಪ್ ಆಫ್ ಹೊಟೇಲ್ಸ್’ನಡಿ ಹಲವು ಹೊಟೇಲ್ ತೆರೆದರು. ಕಲ್ಪನಾ ಥಿಯೇಟರ್ ಬಳಿ ಕಲ್ಪನಾ ಹೊಟೇಲ್, ಬಡಗುಪೇಟೆಯಲ್ಲಿ ಅಪ್ಸರಾ ಹೊಟೇಲ್ (ಈಗಿರುವ ಸಮ್ಮರ್ ಪಾರ್ಕ್), ಹನುಮಾನ್ ಸರ್ಕಲ್ ಬಳಿಯಲ್ಲಿ ಸತ್ಕಾರ್ ಮತ್ತು ತ್ರಿವೇಣಿ ಹೊಟೇಲ್‌ಗಳು, ಉಲ್ಲಾಸ್ ಮಂದಿರ್ ಹೊಟೇಲ್ (ಈಗಿನ ಭೀಮಾ ಜುವೆಲರ್ ಪಕ್ಕದ ಕಟ್ಟಡದಲ್ಲಿ)ಅನ್ನು ತೆರೆದಿದ್ದರು. ಆ ಬಳಿಕ ಸಹೋದರ ರೊಂದಿಗೆ ಬೆಂಗಳೂರಿನಲ್ಲಿ ಉದ್ಯಮ ಸ್ಥಾಪಿಸಲು ಕಾರ್ಯೋನ್ಮುಖರಾದರು. ಹಾಗಾಗಿ ಆರ್ ಮತ್ತು ಐ ಹೆಸರಿನ ಹೊಟೇಲ್‌ಗಳು ಸ್ಥಾಪನೆಯಾಗಲಿಲ್ಲ. ಪ್ರಸ್ತುತ ಕಲ್ಪನಾ, ಅಪ್ಸರಾ, ತ್ರಿವೇಣಿ ಬದಲಾದ ಮಾಲಕತ್ವದಲ್ಲಿ ಇಂದಿಗೂ ಕಾರ್ಯಾಚರಿಸುತ್ತಿವೆ. ಸತ್ಕಾರ್ ಮತ್ತು ಉಲ್ಲಾಸ್ ಮಂದಿರ್ ಹೊಟೇಲ್‌ಗಳು ಮುಚ್ಚಲ್ಪಟ್ಟಿವೆ. ಬೆರಳೆಣಿಕೆಯಷ್ಟು ಹೊಟೇಲ್‌ಗಳಿದ್ದ ಆ ಕಾಲದಲ್ಲಿ ಗ್ರೂಪ್ ಆಫ್ ಹೊಟೇಲ್‌ಗಳ ಪರಿಕಲ್ಪನೆಯನ್ನು (ಈಗಿನ ಬ್ರ್ಯಾಂಡ್ ಸರಪಳಿ ಪರಿಕಲ್ಪನೆ) ಪ್ರಯೋಗಕ್ಕಿಳಿಸಿದವರು ಶೇಷಗಿರಿ ಶೆಣೈ ಎನ್ನುತ್ತಾರೆ ಹಿರಿಯ ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ಎನ್. ನಾಯಕ್ ಆವರು. ಜಟಕಾ ಸ್ಟಾಂಡ್
ಹಿಂದೆ ಮೋಟಾರು ವಾಹನಗಳಿಲ್ಲದ ಕಾಲಘಟ್ಟದಲ್ಲಿ ಈಗಿನ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನದ ಬಳಿಯಲ್ಲಿ ಜಟಕಾ ಸ್ಟಾಂಡ್ ಕಾರ್ಯಾಚರಿಸುತ್ತಿತ್ತು. ಸುಮಾರು 15ರಿಂದ 20 ಜಟಕಾ ಗಾಡಿಗಳಿರುತ್ತಿದ್ದವು. ಆಗ ಬಸ್‌ನಿಲ್ದಾಣದಿಂದ ತೆಂಕುಪೇಟೆಗೆ 5 ರೂ. ಪ್ರಯಾಣ ದರವಿತ್ತು. ಹಿಂದಿನ ಚಿತ್ರಣ
1970ರ ಸುಮಾರಿಗೆ ಇಲ್ಲಿನ ರಸ್ತೆ ಅತ್ಯಂತ ಕಿರಿದಾಗಿತ್ತು. ಕೃಷ್ಣಮಠಕ್ಕೆ ಹೋಗುವವರು ಪಾಪ್ಯುಲರ್ ಸ್ಟೋರ್ ಎದುರಿನ ರಸ್ತೆ ಮೂಲಕವೇ ಹೋಗುತ್ತಿದ್ದರು. ಹಿಂದೆ ಇಲ್ಲಿನ ಹನುಮಾನ್ ಸರ್ಕಲ್‌ನಲ್ಲಿ ಬೃಹದಾಕಾರದ ಅರಳೀಮರವಿತ್ತು. ಆರ್ಥಿಕವಾಗಿ ಅನುಕೂಲಸ್ಥರ (ಸಣ್ಣ ವ್ಯಾಪಾರಿಗಳು/ಸರಕಾರಿ/ಬ್ಯಾಂಕ್ ನೌಕರರು) ಸುಮಾರು 25 ಮನೆಗಳಿದ್ದವು. ಉಡುಪಿಯಲ್ಲಿ ವಾಸವಿದ್ದ ಕ್ರಿಶ್ಚಿಯನ್ನರು ಪ್ರಾರ್ಥನೆಗೆ ಕಲ್ಯಾಣಪುರ ಅಥವಾ ಉದ್ಯಾವರ ಚರ್ಚ್‌ಗೆ ಹೋಗಬೇಕಿತ್ತು. ಆಗ ಅವರೆಲ್ಲ ಕೃಷ್ಣಾಪುರ ಮಠಕ್ಕೆ ಸಂಬಂಧಪಟ್ಟ ಸ್ಥಳವನ್ನು ಗುತ್ತಿಗೆಗೆ ಪಡೆದು ಚರ್ಚ್ ಕಟ್ಟಿದ್ದರು. ಚರ್ಚ್ ಎದುರಿನಿಂದ ಈಗಿನ ನಗರಸಭೆವರೆಗೆ ಧೂಪದ ಮರಗಳಿದ್ದವಂತೆ. ಸಂತೆಕಟ್ಟೆ
ಸಾವಿರಾಳ ಧೂಮಾವತಿ ದೈವಸ್ಥಾನ (ಜುಮಾದಿ ಕಟ್ಟೆ)ಯ ಸುತ್ತಮುತ್ತ 1985ರ ವರೆಗೂ ಇಲ್ಲಿ ಪ್ರತೀ ಬುಧವಾರ ವಾರದ ಸಂತೆ ನಡೆಯುತ್ತಿತ್ತು. ಅದೇ ಕ್ರಮೇಣ “ಸಂತೆಕಟ್ಟೆ’ ಆಯಿತಂತೆ. ಅನಂತರ ರಸ್ತೆ ಅಗಲಗೊಳ್ಳುವಾಗ ನಗರಸಭೆ ಅಧ್ಯಕ್ಷರಾಗಿದ್ದ ಸೋಮಶೇಖರ ಭಟ್ಟರ ಕಾಲದಲ್ಲಿ ಈ ಸಂತೆ ಆದಿಉಡುಪಿಗೆ ಹೊರಟಿತು. ವಿಶಿಷ್ಟ ಸರ್ಕಲ್‌ಗಳು
ಈ ಮಾರ್ಗದ ಮತ್ತೊಂದು ವಿಶೇಷವೆಂದರೆ ಸ್ಥಳೀಯ ಉದ್ಯಮ, ಕೈಗಾರಿಕೆಗಳ ಹೆಸರೇ ಇದ್ದವು. ಡಾ| ವಿಎಸ್. ಆಚಾರ್ಯರ ಕಾಲದಲ್ಲಿ ನಗರಸಭೆ ಸರ್ಕಲ್ ಗಳನ್ನು ನಿರ್ಮಿಸಿತು. ಅವುಗಳನ್ನು ನಿರ್ವಹಿಸುತ್ತಿದ್ದ ಸಂಸ್ಥೆಯ ಹೆಸರೇ ಅವುಗಳಿಗೂ ಸಹ, ಹನುಮಾನ್ ಕಂಪೆನಿಯ ಗ್ಯಾರೇಜ್ ಇದ್ದರಿಂದ ಹನುಮಾನ್ ಸರ್ಕಲ್, ಡಯಾನ ಹೊಟೇಲ್ ಬಳಿಯಲ್ಲಿ ಡಯಾನ ಸರ್ಕಲ್, ಮೋಡರ್ನ್ ಗ್ಯಾರೇಜ್ ಇದ್ದ ನೆಲೆಯಲ್ಲಿ ಮೋಡರ್ನ್ ಸರ್ಕಲ್ ಎಂದಾಗಿತ್ತು. ತೂಗು ದೀಪದ ಬೆಳಕು
1970ರ ಹಿಂದೆ ಆಣೆ ಲೆಕ್ಕಾಚಾರ. ಆಗ ಯಾವುದಾದರೂ ವಸ್ತು ಖರೀದಿಗೆ ಹೋಗಿ ವಸ್ತುವನ್ನು ತೋರಿಸಿ “ಚಕ್ರಕ್ಕೆ ಎಷ್ಟು?’ ಎಂದು ಕೇಳಲಾಗುತ್ತಿತ್ತು. ಸೇರು, ಪಾವು ಅಳತೆಯೇ ಮಾನದಂಡ. ಆಗ 1 ಪವನ್ ಚಿನ್ನದ ಬೆಲೆಯೂ, 1 ಮುಡಿ ಅಕ್ಕಿ (42 ಸೇರು)ಯ ಬೆಲೆಯೂ 100 ರೂ. ಆಗಿತ್ತು. ಕೈಗಡಿಯಾರದ ಬೆಲೆ 25ರಿಂದ 30 ರೂ. ಆಗಿತ್ತು. ಆಗ ಟೈಟಸ್, ಫೇವರ್‌ಲೂಬಾ, ಆ್ಯಂಡ್ರಿಸ್ ಸ್ಯಾಂಡೋಸ್ ಆ್ಯಂಡ್ ಫಿಲ್ಸ್, ಟಿಟೋನಿ, ಸೀಕೋ ಕಂಪೆನಿಯ ವಾಚುಗಳಿದ್ದವಂತೆ. ಆಗ ಬೀದಿ ದೀಪಗಳೆಂದರೆ ನಗರಸಭೆಯ ಸಾಲು ಮರಗಳಿಗೆ ತೂಗು ಹಾಕಿದ ದೀಪಗಳೇ (ಲಾಟೀನು). ಸಂಜೆ 7ರ ಹೊತ್ತಿಗೆ ಉರಿಸಲಾಗುತ್ತಿತ್ತು ಎನ್ನುತ್ತಾರೆ ಹಿರಿಯರಾದ ಪಿ. ರಾಘವೇಂದ್ರ ಕುಡ್ವ ಅವರು. ಜನಸೇವೆಯಿಂದ ಸಂತೃಪ್ತಿ
1975ರ ಸುಮಾರಿಗೆ ಮನೆ ಮನೆಗೆ ತೆರಳಿ ಔಷಧ ನೀಡುತ್ತಿದ್ದೆವು. ವಿ.ಎಸ್. ಆಚಾರ್ಯರು ಸ್ಕೂಟರ್‌ನಲ್ಲಿ ತೆರಳಿದರೆ, ನಾನು ಫಿಲಿಪ್ಸ್ ಸೈಕಲ್‌ನಲ್ಲಿ ಹೋಗುತ್ತಿದ್ದೆ. ಆಗ ಮಕ್ಕಳಿಗೆ 75 ಪೈಸೆ, ಹಿರಿಯರು, ವಯಸ್ಕರಿಗೆ 1.25 ಪೈಸೆ ಶುಲ್ಕ. ಬಡವರಿಗೆ ಉಚಿತ. ಚಿಕಿತ್ಸೆ ನಿರಾಕರಿಸಿದ್ದೇ ಇಲ್ಲ. ಅದರಿಂದಲೇ ನಾವು ಬದುಕಿನ ಸಂತೃಪ್ತಿಯನ್ನು ಪಡೆಯುತ್ತಿದ್ದೆವು ಎನ್ನುತ್ತಾರೆ 67 ವರ್ಷದ ಡಾ| ಎಂ.ಆರ್. ಪೈ ಅವರು.