Advertisement

ನಿಗದಿಗಿಂತ ಹೆಚ್ಚು ಹರಿದ ಕಾವೇರಿ

01:56 PM Nov 04, 2020 | Suhan S |

ಬೆಂಗಳೂರು: ಕಾವೇರಿ ಜಲಾನಯನ ಕೊಳ್ಳದಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ತಮಿಳುನಾಡಿಗೆ ಅಕ್ಟೋಬರ್‌ ಅಂತ್ಯದವರೆಗೂ ಬಿಡುಗಡೆಯಾಗುವ ನೀರಿಗಿಂತಲೂ ಹೆಚ್ಚು ನೀರು ಹರಿದು ಹೋಗಿದ್ದು, ಈ ವರ್ಷ ಕಾವೇರಿ ಕೊಳ್ಳದ ರೈತರು ಹಾಗೂ ರಾಜ್ಯ ಸರ್ಕಾರಕ್ಕೆ ಕಾವೇರಿ ತಲೆನೋವಿಲ್ಲ.

Advertisement

ಪ್ರತಿ ವರ್ಷ ಮಳೆಗಾಲ ಮುಕ್ತಾಯವಾಗುತ್ತಿರುವಂತೆ ಕಾವೇರಿ ಕೊಳ್ಳದ ಅಣೆಕಟ್ಟೆಗಳಲ್ಲಿನ ನೀರಿನ ಪ್ರಮಾಣದ ಆಧಾರದಲ್ಲಿ (ಸುಪ್ರೀಂಕೋರ್ಟ್‌ ಆದೇಶದನ್ವಯ) ಮುಂದಿನ ಎಂಟು ತಿಂಗಳು ತಮಿಳುನಾಡಿಗೆ ನೀರು ಹರಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ವರ್ಷ ಮುಂಗಾರಿನಲ್ಲಿ ಕಾವೇರಿ ಕೊಳ್ಳದ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆಆರ್‌ಎಸ್‌, ಕಬಿನಿ, ಹೇಮಾವತಿ ನದಿಗಳು ಭರ್ತಿಯಾಗಿದ್ದು, ನದಿ ಪಾತ್ರದ ಪ್ರದೇಶದಲ್ಲಿ ಮಳೆ ಯಾಗುತ್ತಿರುವುದರಿಂದಲೇ ತಮಿಳುನಾಡಿಗೆ ಪ್ರತಿ ತಿಂಗಳು ಬಿಡಬೇಕಾದ ನೀರಿಗಿಂತಲೂ ಹೆಚ್ಚು ನೀರು ಈಗಾಗಲೇ ಬಿಳಿಗುಂಡ್ಲುವಿನಲ್ಲಿ ದಾಖಲಾಗಿದೆ.

ತಮಿಳುನಾಡಿಗೆ ಎಷ್ಟು?: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ 2018ರಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶ ದಂತೆ ತಮಿಳುನಾಡಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ 177 ಟಿಎಂಸಿ ಅಡಿ ನೀರು ಹರಿಸಬೇಕು. ಜೂನ್‌ನಿಂದ ಮೇ ವರೆಗೂ ಮಾನ್ಸೂನ್‌ ವರ್ಷದಲ್ಲಿ ಪ್ರತಿ ತಿಂಗಳು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಗದಿ ಪಡಿಸಲಾಗಿದ್ದು, ಈ ವರ್ಷದ ಮಾನ್ಸೂನ್‌ ವರ್ಷದಲ್ಲಿ ಜೂನ್‌ನಿಂದ ಅಕ್ಟೋಬರ್‌ವರೆಗೆ 143. 82 ಟಿಎಂಸಿ ನೀರು ಹರಿಸಬೇಕಾಗಿದೆ.

ಆದರೆ, ಈಗಾಗಲೇ ನ.1ರವರೆಗೆ ಕೆಆರ್‌ಎಸ್‌ನಿಂದ 160.603 ಟಿಎಂಸಿ ನೀರು ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ನೀರು ಸಂಗ್ರಹವಾಗಿರುವುದು ದಾಖಲಾಗಿದೆ. ಅಕ್ಟೋಬರ್‌ ವರೆಗೆ ಸುಪ್ರೀಂ ಕೋರ್ಟ್‌ ನಿಗದಿಪಡಿಸಿರುವುದಕ್ಕಿಂತಲೂ 17 ಟಿಎಂಸಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗಿದ್ದು, ನವೆಂಬರ್‌ ತಿಂಗಳಲ್ಲಿ ಬಿಡಬೇಕಿರುವ 13.76 ಟಿಎಂಸಿ ನೀರು ಕೂಡ ಈಗಾಗಲೇ ಹರಿದು ಹೋಗಿದ್ದು ರಾಜ್ಯ ಸರ್ಕಾರ ನಿರಾಳವಾಗುವಂತೆ ಮಾಡಿದೆ. ಅಲ್ಲದೇ ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗುತ್ತಿರುವುದರಿಂದ ಪ್ರತಿ ದಿನ ಸುಮಾರು 6000 ದಿಂದ 8000 ಕ್ಯೂಸೆಕ್‌ ನೀರು ನದಿಯಿಂದಲೇ ಹರಿದು ಹೋಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಅಣೆಕಟ್ಟೆಯಿಂದ ನೀರು ಹರಿಸುವ ಗೋಜಿಗೆ ಹೋಗಿಲ್ಲ.

8 ತಿಂಗಳಲ್ಲಿ 17 ಟಿಎಂಸಿ ಮಾತ್ರ : ನವೆಂಬರ್‌ನಿಂದ ಮುಂದಿನ ಜೂನ್‌ ವರೆಗೂ ರಾಜ್ಯದಿಂದ ತಮಿಳುನಾಡಿಗೆ ಕೇವಲ 17 ಟಿಎಂಸಿ ನೀರು ಮಾತ್ರ ಬಿಡಬೇಕಿದೆ. ನವೆಂಬರ್‌ನಲ್ಲಿ 13.78 ಟಿಎಂಸಿ, ಡಿಸೆಂಬರ್‌ನಲ್ಲಿ 7.35 ಟಿಎಂಸಿ,2021 ರ ಜನವರಿಯಲ್ಲಿ 2.76 ಟಿಎಂಸಿ, ಫೆಬ್ರವರಿಯಲ್ಲಿ 2.50 ಟಿಎಂಸಿ, ಮಾರ್ಚ್‌ ನಲ್ಲಿ 2.50, ಏಪ್ರಿಲ್‌ನಲ್ಲಿ 2.50 ಹಾಗೂ ಮೇ ತಿಂಗಳಲ್ಲಿ 2.50 ಟಿಎಂಸಿ ನೀರು ಹರಿಸಬೇಕಿದೆ. ಇನ್ನೂ ಕಾವೇರಿ ಜಲಾನ ಯನ ಪ್ರದೇಶದಲ್ಲಿ ಮಳೆಯಾಗುತ್ತಿರುವು  ದರಿಂದ ಹಾಗೂ ರಾಜ್ಯದ ರೈತರ ಬೆಳೆಗಳಿಗೆ ನೀರು ಹರಿಸಿದಾಗ ಹೆಚ್ಚುವರಿ ನೀರು ನದಿಗೆ ಹರಿದು ತಮಿಳುನಾಡಿಗೆ ಹೋಗುವುದರಿಂದ ಉಳಿದ 17 ಟಿಎಂಸಿ ನೀರು ಜಲಾಶಯದಿಂದ ಬಿಡದಿದ್ದರೂ ಹರಿದು ಹೋಗುವ ಸಾಧ್ಯತೆ ಇದೆ. ಹೀಗಾಗಿ ಈ ಮಾನ್ಸೂನ್‌ ವರ್ಷದಲ್ಲಿ ಕಾವೇರಿ ನೀರು ಬಿಡುವ ಕುರಿತು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

Advertisement

ನಿರ್ವಹಣಾ ಮಂಡಳಿ ವ್ಯಾಪ್ತಿ: ಪ್ರತಿ ತಿಂಗಳು ಆಯಾ ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಆದೇಶದಂತೆ ಹಂಚಿಕೆಯಾಗಿರುವ ನೀರನ್ನು ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಅಧಿಕಾರಿಗಳನ್ನೊಳಗೊಂಡ ಕಾವೇರಿ ನೀರು ನಿರ್ವಹಣಾ ಮಂಡಳಿ ನಿರ್ದೇಶನದಂತೆ ತಮಿಳು ನಾಡಿಗೆ ನೀರು ಬಿಡಲಾಗುತ್ತಿದ್ದು, ಯಾವುದೇ ರೀತಿಯ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೈತರಿಗೆ ಅನುಕೂಲ: ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತಮಿಳು ನಾಡಿಗೆ ನೀರು ಬಿಡಲು ಯಾವುದೇ ತೊಂದರೆಯಾಗದಿರುವುದರಿಂದ ಬೇಸಿಗೆಯಲ್ಲಿ ಕಾವೇರಿ ಕೊಳ್ಳದ ರೈತರಿಗೆ ನೀರಿನ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಕಾವೇರಿ ಜಲಾನಯನ ಪ್ರದೇಶದ ರೈತರು ಈ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ  ಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಾವೇರಿ ಕಣಿವೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನ್ಯಾಯಾಧಿಕರಣದ ನಿರ್ದೇಶನದಂತೆ ಅಕ್ಟೋಬರ್‌ ವರೆಗೆ ತಮಿಳುನಾಡಿಗೆ 143.46 ಟಿಎಂಸಿಯಷ್ಟು ನೀರನ್ನು ಬಿಡಬೇಕು. ಅದೃಷ್ಟವಶಾತ್‌ ಕಾವೇರಿ ಕಣಿವೆಯಲ್ಲಿ ಮಳೆಯ ಪ್ರಮಾಣ ಜಾಸ್ತಿ ಆದ ಕಾರಣ 159.36 ಟಿಎಂಸಿಯಷ್ಟು ನೀರನ್ನು ನಾವು ಈಗಾಗಲೇ ಬಿಡುಗಡೆ ಮಾಡಿದ್ದೇವೆ. ರಮೇಶ್‌ ಜಾರಕಿಹೊಳಿ, ಜಲ ಸಂಪನ್ಮೂಲ ಸಚಿವ.

 

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next