Advertisement

ನಿಗದಿಗಿಂತ ಮೊದಲೇ ಕಾವೇರಿ ತೀರ್ಥೋದ್ಭವ

11:33 PM Oct 18, 2019 | Lakshmi GovindaRaju |

ಮಡಿಕೇರಿ: ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಮುಂಚಿತವಾಗಿ (ಗುರುವಾರ ಮಧ್ಯರಾತ್ರಿ 12.57ಕ್ಕೆ) ದಕ್ಷಿಣ ಗಂಗೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಳು. ಭಕ್ತರು ಚಳಿಯ ನಡುವೆಯೂ ಸ್ನಾನಕೊಳಕ್ಕೆ ಧುಮುಕಿ ತೀರ್ಥವನ್ನು ಬಿಂದಿಗೆಗಳಲ್ಲಿ ಸಂಗ್ರಹಿಸಿದರು. ಭಾರೀ ಮಳೆ ಮತ್ತು ತೀರ್ಥೋದ್ಭವ ತಡರಾತ್ರಿ ಆಗಿರುವುದರಿಂದ ಭಕ್ತರ ಸಂಖ್ಯೆ ಕಡಿಮೆಯಿತ್ತು.

Advertisement

ಭಕ್ತರ ಮುಗಿಲು ಮುಟ್ಟಿದ ಜಯಘೋಷ, ಅರ್ಚಕ ಗಣದ ವೇದಘೋಷ, ಮಂತ್ರಪಠಣ, ಕುಂಕುಮಾರ್ಚನೆ ನಡುವೆ 12.57ಕ್ಕೆ ಸಲ್ಲುವ ರೋಹಿಣಿ ನಕ್ಷತ್ರದ ಕರ್ಕಾಟಕ ಲಗ್ನದಲ್ಲಿ ದಕ್ಷಿಣ ಗಂಗೆ ಕಾವೇರಿಯು ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ಈ ಬಾರಿ ಮುಂಜಾನೆ 12.59ರ ವೇಳೆಗೆ ತೀರ್ಥೋದ್ಭವವಾಗಲಿದೆ ಎಂದು ಪಂಡಿತರು ಸಮಯ ನಿಗದಿ ಮಾಡಿದ್ದರು.

ಸ್ನಾನಕೊಳದ ಬಳಿ ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್‌ ಕೊಡ, ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ತೀರ್ಥ ಕೊಂಡೊಯ್ಯಲು ಅವಕಾಶ ನೀಡಿರಲಿಲ್ಲ. ಮತ್ತೂಂದೆಡೆ ಭಾಗಮಂಡಲ ದೇವಾಲಯದ ತಕ್ಕಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಮತ್ತಿತರರು ಕಾವೇರಿ ತೀರ್ಥವನ್ನು ಸ್ವೀಕರಿಸಿ ಸಂಪ್ರದಾಯದಂತೆ ಭಾಗಮಂಡಲದ ಶ್ರೀಭಗಂಡೇಶ್ವರನಿಗೆ ಅಭಿಷೇಕ ಮಾಡಿಸಿದರು.

ಬ್ರಹ್ಮಕುಂಡಿಕೆಯ ಬಳಿ ನಡೆಯುವ ಪೂಜಾ ಕಾರ್ಯಕ್ರಮಗಳನ್ನು ಎಲ್‌ಇಡಿ ಪರದೆ ಮೂಲಕ ನೇರ ಪ್ರಸಾರ ಮಾಡಲಾಯಿತು. ಭಕ್ತರು ಕುಳಿತ ಸ್ಥಳದಲ್ಲೇ ಧಾರ್ಮಿಕ ವಿಧಿವಿಧಾನ ವೀಕ್ಷಿಸಿದರು. ಚಿನ್ನಾಭರಣ ಹಾಗೂ ಪುಷ್ಪಾಲಂಕಾರದೊಂದಿಗೆ ಕಾವೇರಿ ಮಾತೆ ಕಂಗೊಳಿಸುತ್ತಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next