ನವದೆಹಲಿ: ಕಾವೇರಿ ಜಲ ವಿವಾದದ ಸುಪ್ರೀಂಕೋರ್ಟ್ ವಿಚಾರಣೆ ಮಹತ್ವದ ತಿರುವು ಪಡೆದಿದೆ. ಕಾವೇರಿ ನ್ಯಾಯಾಧಿಕರಣ ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ವಾದ ಮಂಡಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಹೇಳಿದೆ. ಆದರೂ, ಒಂದೊಮ್ಮೆ ನ್ಯಾಯಾಲಯ ತೀರ್ಪು ನೀಡಿದರೆ ಅದನ್ನು ಪಾಲಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದೆ. ವಿಚಾರಣೆ ವೇಳೆ, ವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ವಕೀಲ ರಂಜಿತ್‌ಕುಮಾರ್ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವುದು ಕೇವಲ ಸಂಸತ್‌ನ ಅಧಿಕಾರ. ಜತೆಗೆ, ಇದಕ್ಕೆ ತಿದ್ದುಪಡಿ ಮಾಡುವುದು ಸಂಸತ್‌ಗೆ ಬಿಟ್ಟ ಅಧಿಕಾರ. ಈಗಾಗಲೇ ಕರಡು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ರಂಜಿತ್‌ಕುಮಾರ್ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕೇಂದ್ರ ಸರ್ಕಾರ ಕೋರ್ಟ್‌ನ ಆದೇಶ ಪಾಲಿಸಲೇ ಬೇಕು ಎಂದರು. ಇದಕ್ಕೆ ಉತ್ತರಿಸಿದ ರಂಜಿತ್‌ಕುಮಾರ್ ಆದೇಶ ಪಾಲಿ ಸಲು ಸರ್ಕಾರ ಸಿದ್ಧವಿದೆ. ಆದರೆ ಅಂತಿಮ ತೀರ್ಮಾನ ಮಾತ್ರ ಸಂಸತ್‌ಗೆ ಸೇರಿದ್ದು ಎಂದು ಹೇಳಿದರು. ಜತೆಗೆ, ಕೋರ್ಟ್ ನೀಡುವ ತೀರ್ಪನ್ನು ಎಲ್ಲ ರಾಜ್ಯಗಳು ಪಾಲಿಸುತ್ತವೆ ಎಂಬ ವಿಶ್ವಾಸವೂ ಇದೆ ಎಂದಿದ್ದಾರೆ.
ಶತಮಾನದ ಹಳೇ ಕಾನೂನು: ಶತಮಾನಗಳಷ್ಟು ಹಳೆಯ ಒಪ್ಪಂದವನ್ನು ಮುಂದಿಟ್ಟುಕೊಂಡು ಕಾವೇರಿ ನೀರಿನ ಹಂಚಿಕೆ ಮಾಡಿದ್ದು ಸರಿಯಲ್ಲ ಎಂದು ಕರ್ನಾಟಕ ಸರ್ಕಾರ ಮಂಗಳವಾರ ಸುಪ್ರೀಂಗೆ ಹೇಳಿದೆ. 2007ರ ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ, “ನದಿ ನೀರಿನ ಅನ್ಯಾಯದ ಹಂಚಿಕೆ’ ಬಗ್ಗೆ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಅವರು ವಿಸ್ತೃತವಾಗಿ ವಿವರಿಸಿದ್ದಾರೆ. 1890 ಮತ್ತು 1924ರ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಆಗಿರುವ ಒಪ್ಪಂದವನ್ನು ಮುಂದಿಟ್ಟುಕೊಂಡು ಹಂಚಿಕೆ ಮಾಡಲಾಗುತ್ತಿದೆ. ಆದರೆ, ಆಗ ಬ್ರಿಟೀಷರು ತಮ್ಮ ರಾಜಕೀಯ ಲಾಭಕ್ಕಾಗಿ ಈ ಒಪ್ಪಂದ ಮಾಡಿದ್ದರು. ಬ್ರಿಟೀಷರ ಹಿಡಿತದಲ್ಲಿದ್ದ ಮದ್ರಾಸ್ ರಾಜ್ಯ ಮತ್ತು ಮೈಸೂರು ಸಂಸ್ಥಾನದ ನಡುವೆ ಈ ಒಪ್ಪಂದವಾಗಿತ್ತು.
ಈಗಲೂ ಆಗಿನ ಒಪ್ಪಂದಗಳನ್ನು ಮುಂದಿಟ್ಟುಕೊಂಡು ನದಿ ನೀರಿನ ಹಂಚಿಕೆ ಮಾಡುತ್ತಿರುವುದು ಎಷ್ಟು ಸರಿ, ನ್ಯಾಯಾಧಿಕರಣದ ಈ ನಡೆ ತಪ್ಪಲ್ಲವೇ ಎಂದು ಹೇಳಿದ್ದಾರೆ.
ಅಂತರ್ ರಾಜ್ಯ ಕಾವೇರಿ ವಿವಾದ ಹಂಚಿಕೆಗಾಗಿ ರಚಿತವಾಗಿದ್ದ ನ್ಯಾಯಾಧಿಕರಣವು, ರಾಜ್ಯಗಳಿಗೆ ಅಗತ್ಯವಿರುವ ನೀರಿನ ಲೆಕ್ಕಾಚಾರದಲ್ಲಿ ಹಂಚಿಕೆ ಮಾಡದೇ, ಈಗಾಗಲೇ ನಿರ್ಧರಿತವಾಗಿರುವ 1924ರ ಒಪ್ಪಂದವನ್ನು ಮುಂದಿಟ್ಟುಕೊಂಡು ಹಂಚಿಕೆ ಮಾಡಿದೆ. 1924ರ ಒಪ್ಪಂದ ಅಸಂಯಮದ ಸಿದ್ಧಾಂತವಾಗಿದ್ದು, ಇದು ಮಾನ್ಯತೆ ಇಲ್ಲದ್ದಾಗಿದೆ ಎಂದು ನಾರಿಮನ್ ಕೋರ್ಟ್‌ಗೆ ಅರಿಕೆ ಮಾಡಿದರು. 1924ರಲ್ಲಿ ಮೈಸೂರಿನಲ್ಲಿ ಇದ್ದದ್ದು
“ವಿಶ್ವಾಸಾರ್ಹ’ ರಾಜರ ಆಡಳಿತ. ಆಗ ಬ್ರಿಟಿಷರ ಮಾತಿನಂತೆ ನಡೆದುಕೊಳ್ಳುತ್ತಿದ್ದ ರಾಜ್ಯದ ಕಾರ್ಯದರ್ಶಿ ಬಲವಂತವಾಗಿ ಈ ಒಪ್ಪಂದ ಒಪ್ಪಿಕೊಂಡಿದ್ದರು ಎಂದು ಹೇಳಿದರು.