Advertisement

ಕೃಷ್ಣೆಯ ಹಣ ಕಾವೇರಿಗೆ ಹಸ್ತಾಂತರಿಸಲು ಹುನ್ನಾರ!

03:50 AM Jan 19, 2017 | |

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಪುನರ್ವಸತಿ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಲು ನೀಡಿರುವ 191.5 ಕೋಟಿ ರೂ. ಅನುದಾನವನ್ನು ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರಿಸಲು ಹುನ್ನಾರ ನಡೆದಿದೆ. ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಯುಕೆಪಿ ವ್ಯಾಪ್ತಿಯ ಸಂತ್ರಸ್ತರು, ಸಂಘಟನೆಗಳು ಆಕ್ರೋಶಗೊಂಡಿದ್ದು, ಜನಪ್ರತಿನಿಧಿಗಳು ಮಾತ್ರ ಗಾಢನಿದ್ರೆಗೆ ಜಾರಿದಂತಿದೆ.

Advertisement

ಪುನರ್ವಸತಿಗೆ ಅನುದಾನ:
ಯುಕೆಪಿ 1 ಮತ್ತು 2ನೇ ಹಂತದಲ್ಲಿ ಒಟ್ಟು 198 ಗ್ರಾಮಗಳು ಮುಳುಗಡೆಯಾಗಿದ್ದು, ಅವುಗಳಿಗಾಗಿ 136 ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಅದರಲ್ಲಿ 31 ಕೇಂದ್ರಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ 105 ಯುಕೆಪಿ ಪುನರ್ವಸತಿ ಕೇಂದ್ರಗಳು ಹಾಗೂ 1 ಕಲಬುರಗಿಯ ಸನ್ನತಿ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣದಿಂದ ಮುಳುಗಡೆಗೊಂಡ ಜನವಸತಿಗೆ ಕಲ್ಪಿಸಿದ ಪುನರ್ವಸತಿ ಸೇರಿ ಒಟ್ಟು 106 ಪುನರ್ವಸತಿ ಕೇಂದ್ರಗಳು 69 ಗ್ರಾಪಂಗಳಿಗೆ ಹಸ್ತಾಂತರಿಸಬೇಕಿದೆ. ಇವುಗಳಿಗೆ ಮೂಲ ಸೌಲಭ್ಯ ಕಲ್ಪಿಸಲು 2016ರ ಅಕ್ಟೋಬರ್‌ನಲ್ಲಿ 191.05 ಕೋಟಿ ರೂ.ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.

ನಿರ್ಧಾರಕ್ಕೆ ಕಾರಣವೇನು?:
ಪುನರ್ವಸತಿ ಕೇಂದ್ರಗಳ ಮೂಲಸೌಲಭ್ಯಕ್ಕೆ ನೀಡಿರುವ ಅನುದಾನ ಬಳಕೆಗೆ ಮಾರ್ಚ್‌ 31 ಕೊನೇ ದಿನ. ಅಷ್ಟರೊಳಗೆ  ಅನುದಾನ ಬಳಕೆ ಮಾಡುತ್ತೀರಾ? ಕ್ರಿಯಾ ಯೋಜನೆ ಸಿದ್ಧಗೊಂಡಿವೆಯೇ? ಅನುಮೋದನೆ ಸಿಕ್ಕಿದೆಯೇ?  5 ತಿಂಗಳು ಕಳೆದರೂ ಬಳಕೆ ಕುರಿತು ಯಾವುದೇ ಪ್ರಕ್ರಿಯೆ ಬಂದಿಲ್ಲ. ಹೀಗಾಗಿ ಅನುದಾನ ಬಳಕೆ ಸಾಧ್ಯವಿಲ್ಲದಿದ್ದರೆ  ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರಿಸಿ ಎಂದು ಹಣಕಾಸು ಇಲಾಖೆಯಿಂದ ಯುಕೆಪಿ ಆಯುಕ್ತರಿಗೆ  ಪತ್ರ ಬಂದಿದೆ.

ವಿಳಂಬ ಏಕೆ?:
ಅನುದಾನ ಬಳಕೆ ವಿಳಂಬಕ್ಕೆ ಮುಖ್ಯ ಕಾರಣ ಈ ಭಾಗದ ಜನಪ್ರತಿನಿಧಿಗಳು ಎಂಬ ಆರೋಪವಿದೆ. 106 ಪುನರ್ವಸತಿ ಕೇಂದ್ರಗಳನ್ನು ಆಯಾ ಗ್ರಾಪಂಗೆ ಹಸ್ತಾಂತರಿಸಿ, ಜಿಪಂನಿಂದ ಮೂಲಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ 450 ಪ್ರತ್ಯೇಕ ಕಾಮಗಾರಿಗಳಿಗೆ ಜಿಪಂನಿಂದಲೇ ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಬೇಕು. ಆಮೇಲೆ ಗ್ರಾಪಂಗೆ ಪುನರ್ವಸತಿ ಕೇಂದ್ರ ಹಸ್ತಾಂತರಿಸಿದರೆ ಜನಸಂಖ್ಯೆವಾರು ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ಎಲ್ಲ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂಬುದು ಕೆಬಿಜೆಎನ್‌ಎಲ್‌ ಮತ್ತು ಯುಕೆಪಿ ನಿಲುವು.

ಆದರೆ, ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸಿದ ಬಳಿಕವೇ ಗ್ರಾಪಂಗೆ ಹಸ್ತಾಂತರಿಸಿ ಎಂಬುದು ಜನಪ್ರತಿನಿಧಿಗಳ ಒತ್ತಾಯ. ಹಸ್ತಾಂತರಿಸಿದ ಬಳಿಕ ಅಭಿವೃದ್ಧಿ ಮಾಡುತ್ತೇವೆ ಎಂಬುದು ಕೆಬಿಜೆಎನ್‌ಎಲ್‌-ಯುಕೆಪಿ ನಿಲುವು. ಇದರಿಂದ ಅನುದಾನ ಬಳಕೆ ವಿಳಂಬವಾಗಿದೆ.

Advertisement

ಬಳಕೆಗೆ ತರಾತುರಿ:
191.5 ಕೋಟಿ ರೂ. ಕಾವೇರಿ ನೀರಾವರಿ ನಿಗಮದ ಪಾಲಾಗುವ ಆತಂಕ ಸೃಷ್ಟಿಯಾಗಿದ್ದೇ ತಡ, ಇದೀಗ ಅನುದಾನ ಮಾರ್ಚ್‌ ವೇಳೆಗೆ ಬಳಕೆಗೆ ತರಾತುರಿ ತಯಾರಿ ನಡೆದಿದೆ. 106 ಪುನರ್ವಸತಿ ಕೇಂದ್ರಗಳನ್ನು 3 ಜಿಲ್ಲೆಗಳ 69 ಗ್ರಾಪಂಗೆ ಹಸ್ತಾಂತರಿಸಲು ಪ್ರಕ್ರಿಯೆ ನಡೆದಿದ್ದು, 43 ಕೇಂದ್ರಗಳ ಹಸ್ತಾಂತರ ಪೂರ್ಣಗೊಂಡಿದೆ. ಅಲ್ಲದೆ, 106 ಪುನರ್ವಸತಿ ಕೇಂದ್ರಗಳಲ್ಲಿ ಕಟ್ಟಡ-79, ರಸ್ತೆ-178, ನೀರು-86 ಹಾಗೂ ವಿದ್ಯುತ್‌ ಸರಬರಾಜು ಸಂಬಂಧಿತ-107 ಸೇರಿ ಒಟ್ಟು 450 ಕಾಮಗಾರಿಯ ಕ್ರಿಯಾಯೋಜನೆ ಜಿಪಂನಿಂದ ಸಿದ್ಧಗೊಂಡಿದೆ. ವಾರದಲ್ಲಿ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು,  ಮಾರ್ಚ್‌ 31ರೊಳಗೆ ಅನುದಾನವನ್ನು ಜಿಪಂಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹಣಕಾಸು ಇಲಾಖೆ ವಿವರಣೆ ಕೇಳಿತ್ತು
191.5 ಕೋಟಿ ರೂ. ಬಳಕೆ ಕುರಿತು ವಿವರಣೆ ಕೇಳಲಾಗಿತ್ತು. ಮಾರ್ಚ್‌ ಅಂತ್ಯದೊಳಗೆ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರಿಸಿ ಎಂದು ನಿರ್ದೇಶನ ನೀಡಿತ್ತು. ಆದರೆ, ಟೆಂಡರ್‌ ಕರೆದು ಅನುದಾನ ಬಳಕೆಗೆ ಮುಂದಾಗಿದ್ದೇವೆ.

-ಶಿವಯೋಗಿ ಕಳಸದ, ಯುಕೆಪಿ ಆಯುಕ್ತರು

ಅನುದಾನ ಹಸ್ತಾಂತರ ಸಾಧ್ಯವಿಲ್ಲ
191.5 ಕೋಟಿ ರೂ. ಅನುದಾನವನ್ನು  ಕಾವೇರಿ ನೀರಾವರಿ ನಿಗಮಕ್ಕೆ ಕೊಡಲು ಹೇಗೆ ಸಾಧ್ಯ? ಇಲ್ಲಿನ ಪುನರ್ವಸತಿ ಕೇಂದ್ರಗಳ ಪರಿಸ್ಥಿತಿ ಗಂಭೀರವಾಗಿದೆ. ಮೂಲಸೌಲಭ್ಯ ಕಲ್ಪಿಸಲು ಬಳಕೆ ಮಾಡಲಾಗುತ್ತದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ. ಆದಕ್ಕಾಗಿ ಒತ್ತಡ ಹಾಕುತ್ತೇವೆ.
-ಎಚ್‌.ವೈ. ಮೇಟಿ, ಬಾಗಲಕೋಟೆ ಶಾಸಕ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next