ನ್ಯಾಯಾಲಯಗಳಲ್ಲಿ ನೀರಿನ ಹಕ್ಕು ಕೇಳುವ ನಾವು ಅರಣ್ಯ ಸಂರಕ್ಷಣೆಯ ಕರ್ತವ್ಯದ ಬಗೆಗೂ ಗಮನಹರಿಸಬೇಕಲ್ಲವೇ?
Advertisement
“ಕನ್ನಂಬಾಡಿಯ ಕಟ್ಟದಿದ್ದರೆ….’ ಹಾಡಿನ ಸಾಲು ಕಾವೇರಿ ನದಿಗೆ ನಿರ್ಮಿಸಲಾದ ಅಣೆಕಟ್ಟು ನಾಡಿನ ಜನರ ಬದುಕನ್ನು ಹೀಗೆಲ್ಲ ಬದಲಿಸಿತು ಎಂಬುದರ ಮಹತ್ವವನ್ನು ಸಾರುತ್ತದೆ. ಸುಮಾರು 760 ಕಿಲೋ ಮೀಟರ್ ಉದ್ದದ ಈ ನದಿ ರಾಜ್ಯದಲ್ಲಿ 320 ಕಿಲೋ ಮೀಟರ್ ಹರಿಯುತ್ತದೆ. ನದಿ ಜಲಾಯನದ ವಿಸ್ತೀರ್ಣ 3,613 ಚದರ ಕಿಲೋ ಮೀಟರ್, ಅಂದರೆ ರಾಜ್ಯದ ಜಲಾನಯನದಲ್ಲಿ ಶೇಕಡಾ 18.84ರಷ್ಟು ಪ್ರದೇಶ ಕಾವೇರಿಯದಾಗಿದೆ. ನಾಲ್ಕೈದು ಸಾವಿರ ಮಿಲಿ ಲೀಟರ್ ಅಬ್ಬರದ ಮಳೆ ಸುರಿಯುವ ಬ್ರಹ್ಮಗಿರಿ ಬೆಟ್ಟದಿಂದ ತಮಿಳುನಾಡು ಗಡಿಯ ಹೊಗೇನಕಲ್ ಜಲಪಾತದವರೆಗಿನ ಪ್ರದೇಶದಲ್ಲಿ ಸುರಿವ ಹನಿ ಜಲಸಿರಿಯಾಗಿದೆ. ಹೇಮಾವತಿ, ಲಕ್ಷ್ಮಣತೀರ್ಥ, ಹಾರಂಗಿ, ಕಬಿನಿ, ಸುವರ್ಣಾವತಿ, ಲೋಕಪಾವನಿ, ಶಿಂಷಾ, ಅರ್ಕಾವತಿ ಎಂಬ ಉಪನದಿಗಳೆಲ್ಲ ಕಾವೇರಮ್ಮನ ಜೊತೆ ಒಂದಾಗಿ ಸೀಮೆ ಶ್ರೀಮಂತವಾಗಿದೆ. ಇಡೀ ಕಣಿವೆಯಲ್ಲಿ ಹೆಚ್ಚಿನ ಮಳೆ ಮಡಿಕೇರಿಯಲ್ಲಿ ಸುರಿಯುವುದರಿಂದ ‘ ಮಡಕೇರಿಯಲ್ಲಿ ಮಳೆಯಾದರೆ ಚೋಳನಾಡಿನಲ್ಲಿ ಅನ್ನ ದೊರೆಯುತ್ತದೆ’ ಮಾತು ಶತಮಾನಗಳಿಂದ ರೂಢಿಯಲ್ಲಿದೆ.
Related Articles
Advertisement
ಕಾವೇರಿ ಕಣಿವೆಯಲ್ಲಿ ಮುಖ್ಯ ಆರ್ಥಿಕ ಬೆಳೆಯಾಗಿ ಕಬ್ಬು ಇಂದು ಕಾಣಿಸುತ್ತಿದೆ. ಕಬ್ಬಿನ ಬೇಸಾಯಕ್ಕೆ ಭೂಮಿ ಹದಗೊಳಿಸುವ ತಂತ್ರಗಳು ಕ್ರಿ.ಶ 1801ರ ಬುಕಾನನ್ ದಾಖಲೆಗಳಲ್ಲಿ ಕಾಣಿಸುತ್ತದೆ. ಅಣೆಕಟ್ಟು ನೀರಾವರಿಯ ನಿಶ್ಚಿತ ಹರಿವು ದೊರಕಲು ಆರಂಭಿಸಿದಾಗ ಕಬ್ಬನ್ನು ಮಾತ್ರ ಬೆಳೆಯುವ ನೆಲೆಗಳು ವಿಸ್ತರಣೆಯಾದವು. ಪೂರಕವಾಗಿ ಸಕ್ಕರೆ ಕಾರ್ಖಾನೆಗಳು ಆರಂಭವಾದವು. “ಶಾಹೀ(ರಾಜ ಬೆಳೆ) ಕ್ರಾಪ್’ ಆಗಿ ಕಬ್ಬು ಕೃಷಿಕರ ಕೈ ಹಿಡಿಯಿತು. ಭತ್ತದ ಬೇಸಾಯದಲ್ಲಿ ನಾಟಿ ಕ್ರಮ ಪರಿಚಿತವಾಗಿ ಎಕರೆಗೆ ಹೆಚ್ಚು ಆದಾಯ ಪಡೆಯುವ ಕ್ರಮಗಳು ಜಾರಿಯಾದವು. ವರ್ಷಕ್ಕೆ ಎರಡು ಬೆಳೆ ತೆಗೆಯುವ ಅನುಕೂಲತೆಯಾಯ್ತು. ಹಾಸನ, ಮೈಸೂರು, ಮಂಡ್ಯದ ನದಿ ಕಣಿವೆಯ ಕೃಷಿ ಚಿತ್ರಗಳಲ್ಲಿ ಪರಿವರ್ತನೆಯಾಯಿತು. ಅಡಿಕೆ, ತೆಂಗು, ತರಕಾರಿ, ರೇಷ್ಮೆ ಹೀಗೆ ಹೊಸ ಹೊಸ ಬೆಳೆಯ ಅವಕಾಶಗಳು ವೃದ್ಧಿಸಿದವು.
ಬೆಂಗಳೂರು, ಚೆನೈನ ಬೃಹತ್ ಜನಸಂಖ್ಯೆಗೆ ಕುಡಿಯುವ ನೀರಿನ ಮೂಲ ಕಾವೇರಿ. ಕೃಷ್ಣರಾಜಸಾಗರ, ಮೆಟ್ಟೂರಿನ ಬೃಹತ್ ಅಣೆಕಟ್ಟೆಗಳು ಕೃಷಿ-ಜನಜೀವನ ಬದುಕಿನ ಜೀವಸೆಲೆಯಾಗಿವೆ. ಸಕ್ಕರೆ, ಕಾಫೀ, ತೆಂಗು, ತರಕಾರಿ, ಹೂ, ಹಣ್ಣು, ಹೈನು ಎಲ್ಲದರಲ್ಲಿಯೂ ಕಾವೇರಮ್ಮ ಕಾಣಿಸುತ್ತಾಳೆ. ಮನೆಗೆ ಬಳಸುವ ಪಿಠೊಪಕರಣ, ಕಾಗದ, ಕೈಗಾರಿಕೆ, ಕರಕುಶಲ ಉತ್ಪನ್ನಗಳ ಹಿಂದೆಯೂ ನದಿ ನೀರಿನ ಅಂಶವಿದೆ. ಆರೋಗ್ಯ, ಶಿಕ್ಷಣ, ಸಾರಿಗೆ ಎಲ್ಲದರ ಹಿಂದೆ ಮಹಾತಾಯಿ ಕಾವೇರಿಯ ಆಶೀರ್ವಾದವಿದೆ. ನದಿ ದಂಡೆಯ ಉದ್ದಕ್ಕೂ ಆಳಿದ ಅರಸುಕುಲ, ನಿರ್ಮಿಸಿದ ದೇಗುಲ, ಅರಣ್ಯ ಸಂಪತ್ತಿನ ಹಿಂದೆ ಜಲರಾಶಿಯ ಕೊಡುಗೆ ಇದೆ. ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಏಲಕ್ಕಿ, ಕಾಳುಮೆಣಸು, ಶ್ರೀಗಂಧ, ಜೇನು ವರಿಸಲು ಪದಗಳಿಲ್ಲ. ಕಾವೇರಿ ಮಡಿಲಲ್ಲಿರುವ ಮೀನು-ಜಮೀನಿನ ಬೆಲೆ ಕಟ್ಟಲಾಗದು. ದಿನಕ್ಕೆ 40-50 ಮೈಲು ಗಾಡಿ ಎಳೆದರೂ ಸುಸ್ತಾಗದ ಅಮೃತ್‌ಮಹಲ್ ಎತ್ತುಗಳು ಸೈನ್ಯದ ಶಕ್ತಿಯಾಗಿದ್ದು ಕಾವೇರಿಯ ನೆಲದ ಸತ್ವದಿಂದಲೇ !
ಕಾವೇರಿಯ ನೆನಪಿನ ನೆಂಟರ ಬಳಗಕ್ಕೆ ಮಿತಿ ಇಲ್ಲ, ಅದು ಮೈಸೂರು ರಾಜ್ಯದಲ್ಲಿ ಕ್ರಿ.ಶ 1892ರ ಪೂರ್ವದಲ್ಲಿದ್ದ ಶ್ರೀಗಂಧ ತೇಗದ ಅರಮನೆಯಲ್ಲಿ, ನಂತರ ಎದ್ದು ನಿಂತು ಇಂದಿಗೂ ದಸರಾ ಹಬ್ಬದ ಮೂಲಕ ವಿಶ್ವದ ಗಮನಸೆಳೆಯುವ ಶಕ್ತಿಕೇಂದ್ರವಾದ ಅರಮನೆ ವೈಭವಗಳಲ್ಲಿ ಕಾಣಿಸುತ್ತಿದೆ. ರಾಗಿ ಮುದ್ದೆ ಸೊಪ್ಪಿನ ಸಾರಿನಲ್ಲಿ, ಮೈಸೂರುಪಾಕಿನಲ್ಲಿ, ನದಿ ಮೂಲದ ಊರುಗಳ ಬೆರಕೆ ಸೊಪ್ಪಿನ ಅಡುಗೆಯಲ್ಲಿ, ಬನ್ನೂರು ಕುರಿ ತಳಿಯಲ್ಲಿ ಶ್ರೀಸಾಮಾನ್ಯರ ಜೀವನದ ಭಾಗವಾಗಿದೆ.
ಮಳೆ ಇಲ್ಲದ ಕಾಲಕ್ಕೆ ಬದುಕುವ ದಾರಿ ತೋರಿಸಿದ ಅಕ್ಕಡಿ ಬೇಸಾಯ ತಂತ್ರಗಳಲ್ಲಿ, ದನಕರು ಉಳಿಸಲು ರಾಗಿ ಗರಿ ಮೇಯಿಸುವ ಜಾಣ್ಮೆಯಲ್ಲಿ, ರಾಮನಗರದ ರೇಷ್ಮೆ- ಮೈಸೂರು ಪೇಟಾಗಳಲ್ಲೆಲ್ಲ ಸಿಗುವವಳು ಅಪ್ಪಟ ಕಾವೇರಿ. ಕೃಷಿ, ಕೈಗಾರಿಕೆ, ಕಲೆ, ಕೂಲಿ ಯಾವುದೇ ಕೆಲಸ ಇರಲಿ, ದಿನದ ಬದುಕು ಶುರುವಾಗುವುದು ಕಾವೇರಿಯಿಂದಲೇ ! ಒಂದು ಕಾಲದಲ್ಲಿ ಹೊಯ್ಸಳ ಶಿಲ್ಪದ ಜಕಣಾಚಾರಿಯ ಕೌಶಲದಲ್ಲಿ, ಭರತನಾಟ್ಯಕ್ಕೆ ಗೆಜ್ಜೆ ತಯಾರಿಸುವ ಜಾವಗಲ್ ಮಲದೇ ಹಳ್ಳಿಯ ಶ್ರೀಸಾಮಾನ್ಯರಾದ ಮರಾಠಿಗರ ಮೂಲಕ ಕಾಣಿಸಿಕೊಂಡ ನದಿಶಕ್ತಿಯೇ ಇಂದು ಬೇರೆ ರೂಪಗಳಲ್ಲಿ ಕಾಣಿಸಬಹುದು.
ಕಾವೇರಿ ಕಣಿವೆಯಲ್ಲಿ ನೀರಿನ ಲಭ್ಯತೆ 334 ಟಿಎಮ್‌ಸಿಗಳು ಮಾತ್ರ. ನ್ಯಾಯಾಲಯದ ತೀರ್ಮಾನದಂತೆ ಕರ್ನಾಟಕವು 212 ಟಿಎಮ್‌ಸಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಬಿಡಬೇಕು. ಇದರಲ್ಲಿ 205 ಟಿಎಮ್‌ಸಿ ತಮಿಳುನಾಡಿನದು, ಮೆಟ್ಟೂರಿಗೆ ಸೇರಿದ ನೀರಿನಲ್ಲಿ 6 ಟಿಎಮ್‌ಸಿಯನ್ನು ತಮಿಳುನಾಡು ಪಾಂಡಿಚೇರಿಗೆ ಬಿಡಬೇಕು. ವರ್ಷದಿಂದ ವರ್ಷಕ್ಕೆ ಮಳೆಯ ವ್ಯತ್ಯಾಸವಾಗುತ್ತಿದೆ. ಅರಣ್ಯನಾಶವಾಗುತ್ತಿದೆ. ಮಳೆ ಸುರಿದರೆ ನದಿಯಲ್ಲಿ ನೀರು ಹರಿದು ಅಣೆಕಟ್ಟು ತುಂಬುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶೇ. 61ರಷ್ಟು ನೀರಿನ ಕೊರತೆ ಕಾವೇರಿ ಕಣಿವೆಯಲ್ಲಿ ಕಾಣಿಸುತ್ತಿರುವುದು ಆತಂಕದ ಸಂಗತಿ. ಆದರೆ ನಾವು ನ್ಯಾಯಾಲಯಗಳಲ್ಲಿ ನೀರಿನ ನ್ಯಾಯ ಕೇಳುತ್ತ ನಿಂತಿದ್ದೇವೆ. ಆದರೆ ನಮಗೆ ನೀರು ನೀಡಲು ನೆರವಾಗುವ ಕಾವೇರಮ್ಮನ ಕಾಡು ಏನಾಗಿದೆಯೆಂದು ಯಾವತ್ತಾದರೂ ಯೋಚಿಸಿದ್ದೇವೆಯೇ?
– ಶಿವಾನಂದ ಕಳವೆ