ಮೈಸೂರು: ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿಷ್ಟಿತ ಹಾಗೂ ದೈತ್ಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ವಿಪ್ರೋ ಕೊಡಮಾಡುವ ವಿಪ್ರೊ ಅರ್ಥಿಯನ್ ಕಾರ್ಯಕ್ರಮದಡಿ ಮೈಸೂರಿನ ಕೌಟಿಲ್ಯ ವಿದ್ಯಾಲಯದ ಮಕ್ಕಳು ತಮ್ಮ ಕೌಶಲ್ಯ ಪ್ರದರ್ಶಿಸುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಈಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಶಾಲೆಯ ಆಯ್ದ 24 ಮಕ್ಕಳ ತಂಡ ಮೂರು ವಿಷಯಗಳನ್ನಾಧರಿಸಿ ತಮ್ಮ ಕೌಶಲ್ಯ ಪ್ರದರ್ಶನ ನಡೆಸಿದ್ದರು. ಆ ಪೈಕಿ “ನೀರಿನ ಸದ್ಬಳಕೆ’, “ಘನತ್ಯಾಜ್ಯ ವಿಲೇವಾರಿ ಹಾಗೂ “ನಿರ್ವಹಣೆ ಹಾಗೂಜೈವಿಕ ತಂತ್ರಜ್ಞಾನ ನಿರ್ವಹಣೆ’ಕುರಿತಂತೆ ಸಂಶೋಧನೆ ನಡೆಸಿದ್ದ ವಿದ್ಯಾರ್ಥಿಗಳು ಈ ಕುರಿತು ಪ್ರಬಂಧವನ್ನು ವಿಪ್ರೋ ಸಂಸ್ಥೆಗೆ ಸಲ್ಲಿಸಿದ್ದರು.
ಮೂರು ಸಂಶೋಧನಾ ಪ್ರಬಂಧಗಳ ಪೈಕಿ ತ್ಯಾಜ್ಯ ವಿಲೇವಾರಿ ಕುರಿತ ಪ್ರಬಂಧಕ್ಕೆ ಮೊದಲ ಸ್ಥಾನ ಬಂದಿತಲ್ಲದೇ ಈ ಪ್ರಬಂಧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಅದರ ಭಾಗವಾಗಿ ವಿಪ್ರೋ ಸಂಸ್ಥೆ ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ.ಗಳ ನಗದು ಬಹುಮಾನ ನೀಡಿತ್ತು.
ಸಂಸ್ಥೆ ನೀಡಿದ ಲಕ್ಷ ರೂ. ಬಹುಮಾನವನ್ನು ಕೌಟಿಲ್ಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತ್ಯಾಜ್ಯ ವಿಲೇವಾರಿ ಕುರಿತಂತೆ ಸಂಶೋಧನೆಯಲ್ಲಿ ತೊಡಗಿಸಿಕೊಂಡ ವಿವಿಧ ತರಗತಿಗಳ ಎಂಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಡಾ.ಪ್ರಕಾಶ್, ಬಾಬು, ಸಂಸ್ಥೆಯ ಪ್ರಾಂಶುಪಾಲೆ ಡಾ.ಎಲ್. ಸವಿತಾ ಮತ್ತಿತರರು ಉಪಸ್ಥಿತರಿದ್ದರು.