Advertisement

ಕೌಸರ್‌-ರಿಯಾಜ್‌  ಭಟ್ಕಳ ನಂಟು?

06:00 AM Aug 08, 2018 | Team Udayavani |

ಬೆಂಗಳೂರು: ರಾಮನಗರದಲ್ಲಿ ರವಿವಾರ ರಾತ್ರಿ ಬಂಧಿತನಾದ ಜಮಾತ್‌-ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆಯ ಉಗ್ರ ಕೌಸರ್‌ ಅಲಿಯಾಸ್‌ ಮುನೀರ್‌ ಶೇಖ್‌ ಅಲಿಯಾಸ್‌ ಮೊಹಮ್ಮದ್‌ ಜೈದುಲ್‌ ಇಸ್ಲಾಮ್‌(38) ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಅನೇಕ ಮಹತ್ವದ ವಿಷಯಗಳು ಬಹಿರಂಗಗೊಂಡಿವೆ.

Advertisement

ಜೆಎಂಬಿಯ ಪ್ರಮುಖ ನಾಯಕನಾಗಿರುವ ಕೌಸರ್‌ ಬಾಂಗ್ಲಾ ಮತ್ತು ಭಾರತದ ಹಲವು ಕಡೆಗಳಲ್ಲಿ ತನ್ನ ಜಾಲ ವಿಸ್ತರಿಸುತ್ತಿದ್ದ. ಇದರ ಜತೆಗೆ ಆತ ಭಾರತದಲ್ಲಿ ಅಸ್ತಿತ್ವದಲ್ಲಿರುವ ರಿಯಾಜ್‌ ಭಟ್ಕಳ (ಈಗ ಪಾಕಿಸ್ಥಾನದಲ್ಲಿ ಆಶ್ರಯ ಪಡೆದಿರುವ) ನೇತೃತ್ವದ ಇಂಡಿಯನ್‌ ಮುಜಾಹಿದೀನ್‌ (ಐಎಂ) ಸಂಘಟನೆಯ ಸಂಪರ್ಕ ಪಡೆದಿದ್ದ. ಕೌಸರ್‌, ಇಂಡಿಯನ್‌ ಮುಜಾಹಿದೀನ್‌ ಮತ್ತು ಜೆಎಂಬಿ ಸಂಘಟನೆಗಳ ಕೊಂಡಿ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೌಸರ್‌ ಭಾರತದಲ್ಲಿ ಉಗ್ರ ಜಾಲ ವಿಸ್ತರಿಸುವ ಚಟುವಟಿಕೆಯಲ್ಲಿ ನಿರತನಾಗಿದ್ದ ಎಂಬ ವಿಷಯ ವಿಚಾರಣೆಯಲ್ಲಿ ತಿಳಿದು ಬಂದಿದೆ. ಕೌಸರ್‌ ಮತ್ತು ತಂಡ ಬಿಹಾರದ ಬೋಧ್‌ಗಯಾದಲ್ಲಿ ಸ್ಫೋಟ (2018 ಜನವರಿ 19 ) ಪ್ರಕರಣದ ಸೂತ್ರಧಾರ. ಅಂದು ಬೋಧ್‌ಗಯಾಕ್ಕೆ ಬೌದ್ಧ ಧರ್ಮಗುರು ದಲಾೖ ಲಾಮಾ ಅವರು ಭೇಟಿ ನೀಡಿ ಮಹಾಬೋಧಿ ಪ್ರಾರ್ಥನಾ ಮಂದಿರಕ್ಕೆ ತೆರಳಿದ ಕೆಲವೇ ಗಂಟೆಗಳ ಬಳಿಕ ಕಡಿಮೆ ತೀವ್ರತೆಯ ಬಾಂಬ್‌ಗಳು ಸ್ಫೋಟಗೊಂಡಿದ್ದವು. ಇಂಡಿಯನ್‌ ಮುಜಾಹಿದೀನ್‌ ಮತ್ತು ಜೆಎಂಬಿ ಸಂಬಂಧಕ್ಕೆ ಆ ಕಡಿಮೆ ತೀವ್ರತೆಯ ಬಾಂಬ್‌ಗಳು, ಅದರಲ್ಲಿ ಬಳಕೆಯಾದ ಟೈಮರ್‌ಗಳು, ಡಿಟೋನೇಟರ್‌ಗಳು ಸಾಕ್ಷಿ, ಅವುಗಳನ್ನು ಪ್ರಮುಖವಾಗಿ ರಿಯಾಜ್‌ ಭಟ್ಕಳ ನೇತೃತ್ವದ ಇಂಡಿಯನ್‌ ಮುಜಾಹಿದೀನ್‌ ಸಂಘಟನೆ ಕೇರಳದಿಂದ ಬೇರೆಡೆಗೆ ಸರಬರಾಜು ಮಾಡಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ನಡುವೆ ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ದಿಲ್ಲಿ, ಪಶ್ಚಿಮ ಬಂಗಾಲದ ತನಿಖಾ ತಂಡಗಳು ಬೆಂಗಳೂರಿಗೆ ಧಾವಿಸಿ ಮಂಗಳವಾರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದವು. 

ಮತ್ತೋರ್ವನ ಬಂಧನ
ಆರೋಪಿ ಕೌಸರ್‌ ಹೇಳಿಕೆಯನ್ವಯ ಎನ್‌ಐಎ ಅಧಿಕಾರಿಗಳು ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ನ ಆದಿಲ್‌ ಅಲಿಯಾಸ್‌ ಅಸಾದುಲ್ಲಾ(29) ನನ್ನು ಮಂಗಳವಾರ ರಾತ್ರಿ ಬೆಂಗಳೂರಿನ ದಂಡು ರೈಲು ನಿಲ್ದಾಣದ ಆಟೋ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಈತ ಕೌಸರ್‌ನ ಬಲಗೈ ಬಂಟನಾಗಿದ್ದು, ಈತನಿಂದ 3 ಮೊಬೈಲ್‌, ಸ್ಫೋಟಕಗಳ ಮಾಹಿತಿಯ ಪುಸ್ತಕಗಳನ್ನು  ವಶಪಡಿಸಿ ಕೊಳ್ಳಲಾಗಿದೆ. ಈತನೂ 2 ವರ್ಷದಿಂದ ರಾಜ್ಯದಲ್ಲೇ ವಾಸವಿದ್ದ. ಕೌಸರ್‌ನ ಇನ್ನೂ 2 ಸಹಚರರು ನಾಪತ್ತೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next