ಕಾಪು: ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಶೇಖರ ಆಚಾರ್ಯ (74) ಅವರು ಜೂ.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಸಹೋದರರು, ಸಹೋದರಿಯನ್ನು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಮನೆಗೆ ವಾಪಸ್ಸಾಗಿದ್ದ ಅವರು ವಿಶ್ರಾಂತಿಯಲ್ಲಿದ್ದರು. ಶುಕ್ರವಾರ ಬೆಳಗ್ಗಿನ ಜಾವ ತೀವ್ರ ಅಸ್ವಸ್ಥತಗೊಂಡು ನಿಧನ ಹೊಂದಿದ್ದಾರೆ.
ಸಾಮಾಜಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮುಂದಾಳುತ್ವ ವಹಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಅವರು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದರು. ಕಾಪು ಸಿಎ ಬ್ಯಾಂಕ್ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದು ಬಳಿಕ ವಿಕಾಸ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿ, ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ವಿಶ್ವಕರ್ಮ ಸಮಾಜದ ಮುಂಚೂಣಿಯ ನಾಯಕರಾಗಿದ್ದ ಅವರು ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ಧಾರ ಸಮಿತಿಯಲ್ಲಿ ವಿಶ್ವಕರ್ಮ ಸಮಾಜವನ್ನು ಪ್ರತಿನಿಧಿಸುತ್ತಿದ್ದರು. ಕಾಪು ಪರಿಸರದ ದೇವಸ್ಥಾನ, ದೈವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲೂ ಪೂರ್ಣ ಸಹಕಾರ ನೀಡುತ್ತಾ ಬಂದಿದ್ದರು.
ಸಂತಾಪ : ಕಾಪು ಶೇಖರ ಆಚಾರ್ಯ ಅವರ ನಿಧನಕ್ಕೆ ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು, ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಗಣ್ಯರಾದ ಕೆ.ಪಿ. ಆಚಾರ್ಯ, ಕೆ. ವಾಸುದೇವ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಧರ ಆಚಾರ್ಯ ವಡೇರಹೋಬಳಿ, ಮಾಧವ ಆರ್. ಪಾಲನ್, ವಿಕ್ರಂ ಕಾಪು, ಶೇಖರ್ ಸಾಲ್ಯಾನ್, ರಮೇಶ್ ಹೆಗ್ಡೆ, ಮೋಹನ್ ಬಂಗೇರ, ಪ್ರಸಾದ್ ಶೆಣೈ ಹಾಗೂ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ, ಕಾಪು, ಕಟಪಾಡಿ ಸೇರಿದಂತೆ ವಿವಿಧ ಕಾಳಿಕಾಂಬಾ ದೇವಸ್ಥಾನಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.