Advertisement

27 ತಿಂಗಳಲ್ಲಿ  265 ಅಪಘಾತ; 76 ಸಾವು !

02:21 PM Jun 26, 2018 | |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುತ್ತಿದೆ; ಆದರೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿಲ್ಲ. ಹೆಜಮಾಡಿ ಯಿದ ಉದ್ಯಾವರ ವರೆಗಿನ 25 ಕಿ.ಮೀ. ದೂರದಲ್ಲಿ 27 ತಿಂಗಳ ಅವಧಿಯಲ್ಲಿ ಸಂಭವಿಸಿದ ಅಪಘಾತಗಳು, ಮೃತಪಟ್ಟವರು ಮತ್ತು ಗಾಯಾಳುಗಳ ಅಂಕಿ-ಸಂಖ್ಯೆ ಗಮನಿಸಿದರೆ ಹೌಹಾರಬೇಕಾದೀತು.

Advertisement

2016ರ ಜನವರಿಯಿಂದ 2018ರ ಮಾರ್ಚ್‌ 30ರ ವರೆಗಿನ ದಾಖಲೆ ಪ್ರಕಾರ ಕಾಪು, ಪಡುಬಿದ್ರಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ 265 ಅಪಘಾತ ಸಂಭವಿಸಿವೆ. 76 ಮಂದಿ ಸಾವಿಗೀಡಾಗಿ, 297 ಮಂದಿ ಗಾಯಗೊಂಡಿದ್ದಾರೆ.

ಅಪಘಾತ ವಲಯಗಳು
ಉದ್ಯಾವರ – ಕೊರಂಗ್ರಪಾಡಿ ಜಂಕ್ಷನ್‌, ಹಲೀಮಾ ಸಾಬ್ಜು  ಸಭಾಭವನದ ಮುಂಭಾಗ, ಉದ್ಯಾವರ ಜಂಕ್ಷನ್‌, ಉದ್ಯಾವರ ಸೇತುವೆ, ಕಟಪಾಡಿ ಫಾರೆಸ್ಟ್‌ ಗೇಟ್‌, ತೇಕಲತೋಟ, ಕಟಪಾಡಿ ಜಂಕ್ಷನ್‌, ಕಲ್ಲಾಪು ಸೇತುವೆ, ಕಂಬಳಗದ್ದೆ, ಪಾಂಗಾಳ ಕಟ್ಟಿ ಕೆರೆ, ವಿದ್ಯಾವರ್ಧಕ ಶಾಲೆ, ಪಾಂಗಾಳ ದೇವಸ್ಥಾನ, ಪಾಂಗಾಳ ಸೇತುವೆ, ಉಳಿಯಾರಗೋಳಿ,  ಪೊಲಿಪು ಜಂಕ್ಷನ್‌, ಕಾಪು ವಿದ್ಯಾನಿಕೇತನ ಜಂಕ್ಷನ್‌, ಕೊಪ್ಪಲಂಗಡಿ ಕಮ್ಯುನಿಟಿ ಹಾಲ್‌ ಬಳಿ, ಮೂಳೂರು ಬಿಲ್ಲವ ಸಂಘ, ಅಲ್‌ ಇಹ್ಸಾನ್‌ ಶಾಲೆ ಬಳಿ, ಉಚ್ಚಿಲ-ಮೂಳೂರು ಜಂಕ್ಷನ್‌, ಉಚ್ಚಿಲ ಪೇಟೆ, ಉಚ್ಚಿಲ -ಪಣಿಯೂರು ಜಂಕ್ಷನ್‌, ಉಚ್ಚಿಲ-ಎರ್ಮಾಳು ಜಂಕ್ಷನ್‌, ಎರ್ಮಾಳು ಮಸೀದಿ, ನಾರಳ್ತಾಯ ಗುಡಿ ಬಳಿ, ಪಡುಬಿದ್ರಿ ಪೇಟೆ, ಪಡುಬಿದ್ರಿ ಬೀಡುಬದಿ, ಹೆಜಮಾಡಿ ಜಂಕ್ಷನ್‌.

ಸರ್ವೀಸ್‌ ರಸ್ತೆಗಳ ಕೊರತೆ
ಗ್ರಾಮೀಣ ಒಳ ರಸ್ತೆಗಳಿಂದ ಬರುವ ವಾಹನಗಳು ಹೆದ್ದಾರಿ ಪ್ರದೇಶಿಸುವಲ್ಲಿ ಸಮರ್ಪಕ ಸರ್ವಿಸ್‌ ರಸ್ತೆ ಇಲ್ಲದೆ ಅಲ್ಲಿ ವಾಹನಗಳು ವಿರುದ್ಧ ದಿಕ್ಕಿನಲ್ಲೇ ಸಂಚರಿಸುವುದು ಅಪಘಾತಕ್ಕೆ ಮುಖ್ಯ ಕಾರಣ. ಕೆಲವು ಕಡೆ ಡಿವೈಡರ್‌ಗಳಲ್ಲೇ  ದ್ವಿಚಕ್ರ ವಾಹನಗಳು ಇನ್ನೊಂದು ರಸ್ತೆಗೆ ತೂರಿ ಬರುತ್ತಿವೆ.

ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯ 
ಅಪಘಾತಗಳು ಮತ್ತು ಸಾವು – ನೋವಿನಿಂದಾಗಿ ಹೆದ್ದಾರಿಗೆ ಕೆಟ್ಟ ಹೆಸರು ಬರುತ್ತಿದೆ. ಅಪಾಯಕಾರಿ ಜಂಕ್ಷನ್‌ಗಳ ಕುರಿತು ವರದಿ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಪ್ಪಿಸಲಾಗಿದ್ದರೂ ಹೆದ್ದಾರಿ ಇಲಾಖೆ ಇನ್ನೂ ಯಾವುದೇ ರೀತಿಯ ಪ್ರಸ್ತಾವಿತ ಸುಧಾರಣೆಗಳನ್ನು ಕೈಗೊಳ್ಳುತ್ತಿಲ್ಲ. ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದೇವೆ ಎನ್ನುತ್ತಾರೆ ಪೊಲೀಸರು.
ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಲಿ

Advertisement

ರಾಷ್ಟ್ರೀಯ ಹೆದ್ದಾರಿ 66ರ ಕೆಲವು ಕಡೆಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾಗದೇ ಇರುವುದು ಅಪಘಾತಕ್ಕೆ ಮುಖ್ಯ ಕಾರಣ. ಅಸಮರ್ಪಕ ಡಿವೈಡರ್‌ಗಳು, ಅಸಮರ್ಪಕ ಕೂಡುರಸ್ತೆಗಳಿದ್ದು, ಅವುಗಳನ್ನು ಸ್ಥಳಾಂತರಿಸಲು ಹೆದ್ದಾರಿ ಇಲಾಖೆ ಕ್ರಮ ತೆಗೆದು ಕೈಗೊಳ್ಳಬೇಕು. ಜಂಕ್ಷನ್‌ಗಳಲ್ಲಿ ಪೊಲೀಸ್‌ ಪಹರೆ ಹಾಕುವುದು, ಸಿಸಿ ಕೆಮರಾ ಅಳವಡಿಸುವ ಕಾರ್ಯವಾಗಬೇಕು.
– ಅನಿಲ್‌ ಶೆಟ್ಟಿ, ರಿಕ್ಷಾ ಚಾಲಕ 

ವಿಶೇಷ ಕ್ರಮ
ಡಿವೈಡರ್‌ ಮತ್ತು ಜಂಕ್ಷನ್‌ಗಳು ಇರುವಲ್ಲಿ ಬ್ಯಾರಿಕೇಡ್‌ ಅಳವಡಿಕೆ, ಸರ್ವೀಸ್‌ ರಸ್ತೆ ಇಲ್ಲದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ವಾಹನಗಳಿಗೆ ದಂಡ ವಿಧಿಸುವುದು, ಎಚ್ಚರಿಕೆ ಫಲಕ ಅಳವಡಿಕೆ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಮೂಲಕ ಅಪಘಾತ ತಡೆಯಲು ಪೊಲೀಸ್‌ ಇಲಾಖೆ ಮುಂದಾಗಿದೆ. ಮುಖ್ಯವಾಗಿ ವಾಹನ ಚಾಲಕರು ತಮ್ಮ ಜೀವದ ಬಗ್ಗೆ ಎಚ್ಚರ ವಹಿಸಿದಲ್ಲಿ ಅಪಘಾತ ತಡೆಗಟ್ಟಲು ಸಾಧ್ಯವಿದೆ.
– ಹಾಲಮೂರ್ತಿ ರಾವ್‌, 
ವೃತ್ತನಿರೀಕ್ಷಕರು, ಕಾಪು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next