ಕಾಪು : ಇತಿಹಾಸ ಪ್ರಸಿದ್ಧವಾಗಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಪ್ರಥಮ ಹಂತದಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಸಮಸ್ತ ಭಕ್ತರ ಸಹಕಾರದೊಂದಿಗೆ ವಾಸ್ತುವಿಗೆ ಬದ್ಧವಾಗಿ ಸಂಪೂರ್ಣ ಶಿಲಾಮಯ ನಿರ್ಮಾಣದೊಂದಿಗೆ ಅದ್ವಿತೀಯ ಎಂಬಂತೆ ಮಾರಿಯಮ್ಮ ದೇವಿಯ ಸಾನಿಧ್ಯವು ಪುನರುತ್ಥಾನಗೊಳ್ಳುತ್ತಿದೆ.
ಸಂಪೂರ್ಣ ಶಿಲಾಮಯವಾಗಿ ನಡೆಯುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಗರ್ಭ ಗುಡಿಯ ಪುನರ್ ನಿರ್ಮಾಣ ಯೋಜನೆಯು ಇಳಕಲ್ ಕೆಂಪು ಶಿಲೆಯಿಂದ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕೆ ಪೂರಕವಾಗಿ ಮಾರಿಯಮ್ಮನ ಭಕ್ತರು ತಮ್ಮ ಶಕ್ತ್ಯಾನುಸಾರವಾಗಿ ಶಿಲಾ ಸೇವೆಯನ್ನು ನೀಡುವ ಮೂಲಕ ಸಮಗ್ರ ಜೀರ್ಣೋದ್ಧಾರಕ್ಕೆ ಕೈ ಜೋಡಿಸುತ್ತಿದ್ದಾರೆ.
ಈ ಜೀರ್ಣೋದ್ಧಾರ ಕಾರ್ಯಗಳಿಗೆ ಮುಂಬಯಿಯ ಭಕ್ತರನ್ನೂ ಸೇರಿಸಿಕೊಳ್ಳಬೇಕೆಂಬ ಮಾರಿಯಮ್ಮನ ಅಪೇಕ್ಷೆಯಂತೆ ಮುಂಬಯಿ ನಗರ ಮತ್ತು ಇತರ ಕಡೆಗಳಲ್ಲಿ ನೆಲೆಸಿರುವ ಕಾಪುವಿನ ಅಮ್ಮನ ಭಕ್ತರನ್ನು ಸೇರಿಸಿಕೊಂಡು ಮುಂಬಯಿಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದ್ದು ಅದಕ್ಕೆ ಪೂರ್ವಭಾವಿಯಾಗಿ ಜೂ. 11 ರಂದು ಶನಿವಾರ ಸಂಜೆ 3.30 ಕ್ಕೆ ಮುಂಬೈ ಅಂಧೇರಿ ಪೂರ್ವದ ಚಕಾಲದಲ್ಲಿರುವ ಹೋಟೆಲ್ ಸಾಯಿ ಪ್ಯಾಲೇಸ್ ನಲ್ಲಿ ಎಲ್ಲಾ ಸಮಾಜದವರನ್ನೊಳಗೊಂಡಿರುವ ಸದ್ಭಕ್ತರ ಸಭೆ ಕರೆಯಲಾಗಿದೆ.
ಇದನ್ನೂ ಓದಿ : ಪೀರಪಾಷಾ ಬಂಗಲೆಯಲ್ಲಿರುವ ಮಂಟಪ ಸಂರಕ್ಷಿಸಿ :ಸಿಎಂ ಭೇಟಿಯಾದ ಮಠಾಧೀಶರು
ಮುಂಬಯಿಯಲ್ಲಿ ನೆಲೆಸಿರುವ ಕಾಪು ಸಾವಿರ ಸೀಮೆ ಹಾಗೂ ಉಡುಪಿ, ದಕ್ಷಿಣ ಕನ್ನಡ ಮತ್ತು ಮಹಾರಾಷ್ಟ್ರ ದ ವಿವಿಧೆಡೆಗಳಲ್ಲಿರುವ ಎಲ್ಲಾ ಸಮಾಜದವರನ್ನೊಳಗೊಂಡ ಕಾಪುವಿನ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಮುಂಬಯಿ ಸಮಿತಿ ರಚನೆಗೆ ಸಹಕರಿಸಿ ಮಾರಿಯಮ್ಮ ದೇವಿಯ ಸಾನಿಧ್ಯ ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾದ ಯೋಗೀಶ್ ಶೆಟ್ಟಿ ಬಾಲಾಜಿ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.