ಕಾಪು: ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದ ಸಮಗ್ರ ಜೀರ್ಣೋದ್ದಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು 2025ರ ಮಾರ್ಚ್‌ನಲ್ಲಿ ಜರಗಲಿರುವ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಹೇಳಿದರು.
ಶನಿವಾರ ಕಾಪುವಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದೇವಸ್ಥಾನದ ಪ್ರಧಾನ ತಂತ್ರಿ ಕೆ. ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಅವರ ಉಪಸ್ಥಿತಿಯಲ್ಲಿ ಸೆ.3 ರಂದು ಬೆಳಿಗ್ಗೆ ಮಂಗಳ ಗೌರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞ ಪೂರ್ವಭಾವಿ ಲೇಖನ ಸಂಕಲ್ಪಕ್ಕೆ ಚಾಲನೆ ನಿಡಲಾಗುವುದು. ಬೆಳಿಗ್ಗೆ 8.30ಕ್ಕೆ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ, 8.40ಕ್ಕೆ ಲೇಖನ ಸಂಕಲ್ಪಕ್ಕೆ ಭಕ್ತಾದಿಗಳನ್ನು ಮಂಗಳಗೌರಿ ಮಂಟಪಕ್ಕೆ ಕರೆದೊಯ್ಯುವುದು. 9.09ಕ್ಕೆ ಮಂಗಳಗೌರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭವಾಗಲಿದೆ ಎಂದರು.
ಬೆಳಿಗ್ಗೆ 10.15ಕ್ಕೆ ಅವಧೂತ ವಿನಯ್ ಗುರೂಜಿ ಗೌರಿಗದ್ದೆ, ಸಂಸದರು, ಉಡುಪಿ ಜಿಲ್ಲೆಯ ಎಲ್ಲ ಶಾಸಕರುಗಳು, ಆಂಧ್ರಪ್ರದೇಶ ಕಲ್ಯಾಣಗುರ್ಗ ಶಾಸಕ ಅಮಿಲಿನೆನಿ ಸುರೇಂದ್ರ ಬಾಬು ಸಹಿತ ಗಣ್ಯರ ಉಪಸ್ಥಿತಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಕನಿಷ್ಠ 99,999 ಲೇಖನ ಯಜ್ಞ ಗುರಿ: ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಸೆ.3ರಂದು 99 ಮಂದಿ ಮಹಿಳೆಯರ ನೇತೃತ್ವದಲ್ಲಿ 999 ಮಂದಿ ಲೇಖನ ಯಜ್ಞ ಸಂಕಲ್ಪವನ್ನು ಸ್ವೀಕರಿಸಲಿದ್ದು ಕನಿಷ್ಠ 99,999 ಲೇಖನ ಯಜ್ಞ ಸಂಕಲ್ಪ ಗುರಿ ಹೊಂದಲಾಗಿದೆ. ನವದುರ್ಗಾ ಲೇಖನ ಯಜ್ಞ ಪುಸ್ತಕ ಪಡೆಯಲು ಭಕ್ತರು ರೂ. 199 ಪಾವತಿಸಿ, ಹೆಸರು ನೋಂದಾಯಿಸ ಬೇಕಿದ್ದು, ಬಳಿಕ ಮಂಗಳಗೌರಿ ಪೂಜೆಯಲ್ಲಿ ಪಾಲ್ಗೊಂಡು ನವದುರ್ಗಾ ಲೇಖನ ಯಜ್ಞದ ಸಂಕಲ್ಪ ಸ್ವೀಕರಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಅ. 29ಕ್ಕೆ ಲೇಖನ ಪುಸ್ತಕ ಬಿಡುಗಡೆ: ಅ. 28ರವರೆಗೆ ಯಜ್ಞ ಸಂಕಲ್ಪಕ್ಕೆ ಹೆಸರು ನೋಂದಾವಣೆಗೆ ಅವಕಾಶವಿದ್ದು ಅ. 29ರಂದು ಶ್ರೀ ವಾಗೀಶ್ವರೀ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞದ ಪುಸ್ತಕ ಬಿಡುಗಡೆಗೊಳಿಸಿ, ಸಂಕಲ್ಪ ಸ್ವೀಕರಿಸಿದವರಿಗೆ ವಿತರಿಸಲಾಗುವುದು. ಅ. 29ರ ನಂತರ 45 ದಿನದ ಒಳಗೆ ನವದುರ್ಗಾ ಲೇಖನವನ್ನು ಬರೆದು ಪುಸ್ತಕವನ್ನು ಸಾನಿಧ್ಯಕ್ಕೆ ತಲುಪಿಸಬೇಕು. 2025ರ ಫೆ. 4 ರಂದು ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನವ ಚಂಡೀಯಾಗದೊಂದಿಗೆ ಯಜ್ಞ ಸಂಪನ್ನಗೊಳ್ಳಲಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿಯೂ ಈ ಬಗ್ಗೆ ಮಾಹಿತಿಯನ್ನು ನೀಡಿ ಯಜ್ಞದಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ದೇಶ ವಿದೇಶದಲ್ಲಿರುವ ಭಕ್ತರೂ ಕೂಡಾ ಆನ್‌ಲೈನ್ ಮೂಲಕ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ಈ ಕುರಿತಾದ ಮಾಹಿತಿಯನ್ನು ಶ್ರೀ ಹೊಸ ಮಾರಿಗುಡಿಯ ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ. ಭಕ್ತರು ಬರೆಯುವ ಲೇಖನ ಯಜ್ಞ ಪುಸ್ತಕವನ್ನು ಸಂರಕ್ಷಿಸಿ ಕಾಪಿಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಮುಂಬಯಿಯಲ್ಲೂ ಪೂರ್ಣ ಸಹಕಾರ: ಮುಂಬೈ ಸಮಿತಿಯ ಪ್ರಮುಖರಾದ ಎರ್ಮಾಳು ಹರೀಶ್ ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ ಪೂನಾ ಮಾತನಾಡಿ, ಹೊಸ ಮಾರಿಗುಡಿ ದೇವಸ್ಥಾನದ ಜೀಣೋದ್ಧಾರ ಕಾರ್ಯದಲ್ಲಿ ಮುಂಬಯಿಂದಲೂ ದೊಡ್ಡ ರೀತಿಯ ಸಂಘಟನೆ, ಸಹಕಾರ ದೊರಕುತ್ತಿದೆ. ವಿವಿಧ ಸಮಿತಿಯನ್ನು ರಚಿಸಿ ಕಾರ್ಯ ಮಗ್ನರಾಗಿದ್ದು ಮುಂದೆ ನಡೆಯುವ ನವದುರ್ಗಾ ಲೇಖನ ಯಜ್ಞದಲ್ಲಿಯೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಕೆಲಸವನ್ನೂ ನಡೆಸಲಾಗುತ್ತಿದೆ ಎಂದರು.
ನವದುರ್ಗಾ ಲೇಖನ ಯಜ್ಞದಲ್ಲಿ ಹೆಸರು ನೋಂದಾಯಿಸಿದವರಿಗೆ ಮಾರಿಗುಡಿಯಲ್ಲಿ ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿದ ಬಳಿಕ ನಿರ್ದಿಷ್ಟ ಗಾತ್ರದ ಪುಸ್ತಕ ಹಾಗೂ ಬರವಣಿಗೆ ಸಾಮಾಗ್ರಿಗಳನ್ನು ಒದಗಿಸಲಾಗುತ್ತದೆ. ಲೇಖನ ಯಜ್ಞ ಪುಸ್ತಕವನ್ನು ಸಾವಿರಾರು ವರ್ಷಗಳವರೆಗೆ ಸಂರಕ್ಷಿಸಿ ಕಾಪಿಡಲು ಸೂಕ್ತ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗುತ್ತದೆ. ಅದನ್ನು ಮಾರಿಗುಡಿಯ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗುವುದು. ಅದಕ್ಕೆ ಪ್ರತಿ ನವರಾತ್ರಿಯ ವಿಜಯ ದಶಮಿಯಂದು ಶ್ರೀ ವಾಗೀಶ್ವರೀ ಪೂಜೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬಲ್ ಸಂಖ್ಯೆ 9844749993, ವೆಬ್‌ಸೈಟ್ https://www.srihosamarigudikaup.org ಅನ್ನು ಸಂಪರ್ಕಿಸಬಹುದು.
ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಸಂಯೋಜಕ ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.