– ಇಂಗ್ಲೆಂಡಿನ ಕಂಪೆನಿಯ ವಿಶಿಷ್ಟ ಪೆಂಟಾಲೈಟ್
– ಸಮುದ್ರದಿಂದ 21 ಮೀಟರ್ ಎತ್ತರದಲ್ಲಿದೆ
– ಕರ್ನಾಟಕ ಕರಾವಳಿಯಲ್ಲಿ ಪಾದೆ ಮತ್ತು ಬಿಳಿ ಹೊಗೆಯನ್ನು ಹೊಂದಿರುವ ಅಪರೂಪದ ಕಡಲ ಕಿನಾರೆ
– ಉಡುಪಿಯಲ್ಲಿ ಕೇವಲ 13 ಕಿ.ಮೀ. ದೂರದಲ್ಲಿದೆ.
Advertisement
ಉಡುಪಿ: ಪಶ್ಚಿಮದ ಕಡಲ ಗಡಿ. ಕಣ್ಣು ಹಾಯಿಸಿದಷ್ಟು ದೂರ ನೀಲ ಸಾಗರ. ಕಡಲ ಕಿನಾರೆಯಲ್ಲಿ ಶಿಲೆಗಳಿಗೆ ಬಡಿಯುತ್ತಿರುವ ಅಲೆಗಳ ಅಬ್ಬರ. ಪಕ್ಕದಲ್ಲಿಯೇ ಸಾವಿರಾರು ಮೀನುಗಾರರನ್ನು ರಕ್ಷಿಸಿದ ದೀಪಸ್ತಂಭದ ಪರಂಪರಾಗತ ಶೈಲಿಯ ದರ್ಶನ. ಇವು ಉಡುಪಿಯಿಂದ ಕೇವಲ 13 ಕಿ.ಮೀ. ದೂರದಲ್ಲಿರುವ ಕಾಪು ಕಡಲ ತೀರ ಮತ್ತು ದೀಪಸ್ತಂಭದ ವರ್ಣನೆ.
1901ರಲ್ಲಿ ಸ್ಥಾಪಿಸಲ್ಪಟ್ಟ ಕಾಪು ದೀಪ ಸ್ತಂಭ ಪಾರಂಪರಿಕ ತಾಣವೇ ಸರಿ. ಸಮುದ್ರ ಮಟ್ಟದಿಂದ 27.12 ಮೀಟರ್ ಎತ್ತರದಲ್ಲಿರುವ ಈ ದೀಪ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವುದು ಅಚ್ಚರಿಯೇ ಸರಿ. ಮುಂಚೆ ಸೀಮೆ ಎಣ್ಣೆಯ ಇಂಧನ
ದಿಂದ ಬೆಳಗುತ್ತಿದ್ದ ಪ್ರಿಸ್¾ ಹೊಳಪಿನ ದೀಪ ಇದೀಗ ವಿದ್ಯುತ್ ದೀಪಕ್ಕೆ ಹೊಂದಾ ಣಿಕೆಯನ್ನು ಮಾಡಿಕೊಂಡಿದೆ. ಇಂದಿಗೂ ಸಂಜೆ ದೀಪ ಬೆಳಗಿ ಅನೇಕ ಮೀನುಗಾರರಿಗೆ ದಾರಿ ದೀಪವಾಗಿದೆ.
Related Articles
ಅಗಲ ಕಿರಿದಾಗ ಓಣಿಯ ಮೂಲಕ ಕಾಪು ದೀಪ ಸ್ತಂಭವನ್ನು ತಲುಪುತ್ತಿದ್ದಂತೆ ದಿಢೀರ್ ಆಗಿ ಕನಿಷ್ಠ ಎರಡು ಅಡಿಯಾದರೂ ಹಾರಬೇಕು. ಮೊಣಕಾಲು ಗಂಟಿನ ಸಮಸ್ಯೆ ಇರುವವರಿಗೆ, ಹಿರಿಯರಿಗೆ ಇದು ಸಮಸ್ಯೆಗೆ ಆಹ್ವಾನ ನೀಡುತ್ತದೆ. ಮೇಲಾಗಿ ಸಮುದ್ರದ ಹೊಗೆ ಅರ್ಧ ನಿರ್ಮಾಣಗೊಂಡ ಕಾಂಕ್ರೀಟ್ ಇಳಿಜಾರಿನ ಮೇಲೆ ಬಿದ್ದಿರುವುದರಿಂದ ಕಾಲುಜಾರಿ ಬೀಳುವ ಭೀತಿಯೂ ಇದೆ. ಇನ್ನು ಟಿಕೆಟ್ ಪಡೆದು ದೀಪಸ್ತಂಭದ ಮೇಲೇರಲು ಹರಸಾಹಸ ಪಡಬೇಕಾಗುತ್ತದೆ. ಇದು ಕಟ್ಟಡದ ಸಮಸ್ಯೆಯಲ್ಲ. ಸರಸರನೆ ಹತ್ತಿ ಇಳಿಯುವ ಹುಚ್ಚು ಪ್ರವಾಸಿಗರಿಂದಾಗಿ ಇತರ ಪ್ರವಾಸಿಗರು ತೊಂದರೆ ಅನು ಭವಿಸುತ್ತಿದ್ದಾರೆ.
Advertisement
ನಿರ್ಮಿತಿ ಕೇಂದ್ರದ ಕಾಮಗಾರಿಯಲ್ಲಿ ಯಾವುದೇ ವಿಳಂಬವಾದಂತೆ ಕಾಣವುದಿಲ್ಲ. ಶಿಲಾಮಯ ವಾಕ್ ಪಾತ್ ನಿರ್ಮಾಣ. ಪಾರಂಪರಿಕ ಶೈಲಿಯನ್ನು ಹೋಲುವ ದಾರಿ ದೀಪಗಳು. ಆರಾಮದಲ್ಲಿ ಕುಳಿತು ಸೂರ್ಯಾಸ್ತಮಾನ ವೀಕ್ಷಿಸಲು ಸಹಕಾರಿಯಾಗುವ ಕಲ್ಲಿನ ಕುರ್ಚಿಗಳು ಇಲ್ಲಿವೆ.
ಮತ್ತೂಂದು ಪಾರ್ಶ್ವಕಾಪು ದೀಪ ಸ್ತಂಭದ ದಕ್ಷಿಣ ದಿಕ್ಕಿಗೆ ನಿರ್ಮಾಣವಾಗ ಬೇಕಿದ್ದ ವಾಕ್‌ಪಾತ್ ಕಾಮಗಾರಿ ಅಪೂರ್ಣವಾಗಿದೆ. ಪಾರಂಪರಿಕ ಶೈಲಿಯ ವಿದ್ಯುತ್ ಕಂಬಗಳ ಲಭಿಸುವಾಗ ವಿಳಂಬವಾಯಿತು ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇನ್ನು ಈ ಭಾಗದಲ್ಲಿ ಗ್ರಾನೈಟ್ ನೆಲ ಹಾಸು, ಪ್ರವಾಸಿಗರು ಕುಳಿತುಕೊಳ್ಳಲು ಕಲ್ಲಿನ ಕುರ್ಚಿಗಳು ನಿರ್ಮಾಣವಾಗಬೇಕಾಗಿದೆಯಷ್ಟೆ. ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಇಲಾಖೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಭಾಗ ಇದರ ಉಸ್ತುವಾರಿ ವಹಿಸಿಕೊಂಡಿದೆ. ಅಧಿಕಾರಿ ಗಂಗಾಧರ ಅವರು ಕಾರವಾರದಿಂದಲೇ ಇದರ ಅಭಿವೃದ್ಧಿ ಅಧ್ಯಯನ ಮಾಡುತ್ತಿದ್ದಾರೆ. ಪಾರಂಪರಿಕ ಶೈಲಿಗೆ ಸರಿಹೊಂದುವ ಕಾಸ್ಟ್ ಐಯರ್ ವಿದ್ಯುತ್ ಕಂಬಗಳನ್ನು ಬೆಳಗಾವಿಯಲ್ಲಿ ನಿರ್ಮಿಸಿ ಕಾಪುವಿಗೆ ಕಳುಹಿಸಲಾಗಿದೆ. ಗ್ರಾನೈಟ್ ಅಲಭ್ಯವಾದ ಕಾರಣ ಪೇವರ್‌ಗಳನ್ನೇ ನೆಲಕ್ಕೆ ಹಾಸಲು ಸಲಹೆ ಮಾಡಲಾಗಿದೆ. ವಿದ್ಯುತ್ ವೈರಿಂಗ್ ಮತ್ತು ಉಳಿದ ಸಿಮೆಂಟ್ ಕಾಮಗಾರಿ ಮುಗಿಯುತ್ತಿದ್ದಂತೆ ಕಾಪು ದೀಪಸ್ತಂಭದ ಎಡಪಾರ್ಶ್ವ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಎಡಪಾರ್ಶ್ವ ಅಭಿವೃದ್ಧಿಗೆ ಕೆಆರ್‌ಐಡಿಎಲ್‌ಗೆ 85 ಲಕ್ಷ ರೂಪಾಯಿ ಮಂಜೂರಾಗಿದೆ. ಇದರಲ್ಲಿ ವಾಕಿಂಗ್ ಪಾತ್ ಅಭಿವೃದ್ಧಿ, ವಿದ್ಯುತ್ ದೀಪಗಳ ಅಳವಡಿಕೆ ಜತೆಗೆ ಜೀವ ರಕ್ಷಕ ದೋಣಿ ಮತ್ತು ಕಾವಲು ಗೋಪುರ ಸೇರಿದೆ. ಈ ಎರಡು ಕಾಮಗಾರಿಗಳು ಇನ್ನಷ್ಟೇ ಆಗಬೇಕು ಎಂದು ಅವರು ಹೇಳಿದ್ದಾರೆ. ಪ್ರತಿನಿತ್ಯ ಸ್ಥಳೀಯರು ಸೇರಿದಂತೆ ಸುಮಾರು 2,000 ಪ್ರವಾಸಿಗರು ಬರುತ್ತಾರೆ. ವಾರಾಂತ್ಯ ಅಂದರೆ ಶನಿವಾರ ಮತ್ತು ರವಿವಾರಗಳಂದು ಈ ಸಂಖ್ಯೆ ಹತ್ತು ಪಟ್ಟು ಅಂದರೆ 20,000 ಜನರಿಗೆ ಹೆಚ್ಚುತ್ತದೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯ, ಯಥೇತ್ಛ ಕುಡಿಯುವ ನೀರು, ಒಂದೆಡೆ ಕುಳಿತುಕೊಳ್ಳಲು ನೆರಳು ಅತೀ ಅವಶ್ಯವಾಗಿ ಬೇಕು ಎಂದು ಕಾಪು ದೀಪಸ್ತಂಭವನ್ನು ನಿರ್ವಹಿಸುತ್ತಿರುವ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ. ದುರಂತಗಳು ಇಳಿಮುಖ
ಕಾಪು ದೀಪಸ್ತಂಭವನ್ನು ಖಾಸಗಿ ನಿರ್ವಹಣೆಗೆ ನೀಡಿದ ಬಳಿಕ ದುರಂತಗಳು ಇಳಿಮುಖಗೊಂಡಿವೆ. ಇಬ್ಬರು ಜೀವ ರಕ್ಷಕಕರು ಕಡಲಿಗೆ ಇಳಿದವರ ಮೇಲೆ ನಿಗಾ ಇಟ್ಟಿರುತ್ತಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೆ ಮತ್ತೋರ್ವ ವ್ಯಕ್ತಿಯನ್ನು ನೇಮಿಸಲಾಗುತ್ತದೆ. ಅದು ಮಾತ್ರವಲ್ಲ ಆತ್ಮಹತ್ಯೆಗೆ ಬಂದವರನ್ನೂ ರಕ್ಷಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗುತ್ತಿದೆ ಎಂದು ಕಾಪು ದೀಪಸ್ತಂಭದ ಸಹ ನಿರ್ವಾ ಹಕರಾದ ಪ್ರಶಾಂತ್ ತಿಳಿಸಿದ್ದಾರೆ. ಮೊಬೈಲ್‌ನಲ್ಲಿ ಮೈಮರೆಯುವ ಪೊಲೀಸರು ಪ್ರವಾಸಿಗರಿಗೆ ರಕ್ಷಣೆ ನೀಡುವ ಸಲುವಾಗಿ ನಾಲ್ವರು ಪೊಲೀಸರನ್ನು ನಿಯುಕ್ತಿಗೊಳಿಸಿದ್ದರೂ ಪೊಲೀಸರು ಮಾತ್ರ ಸಮುದ್ರ ಕಿನಾರೆಯಲ್ಲಿ ಗಸ್ತು ಕಾಯುವುದು ಕಾಣುವುದಿಲ್ಲ. ಒಂದೋ ಪಕ್ಕ ಹೊಟೇಲಿನಲ್ಲಿ ಕುಳಿತಿರುತ್ತಾರೆ, ಇಲ್ಲವೇ ಮೊಬೈಲ್ ವೀಕ್ಷಣೆಯಲ್ಲಿ ಮಗ್ನರಾಗಿರುತ್ತಾರೆ ಎಂದು ಸ್ಥಳೀಯ ಜನಾರ್ದನ ತಿಳಿಸುತ್ತಾರೆ. ಸೂರ್ಯಾಸ್ತಮಾನವಾಗುತ್ತಿದ್ದಂತೆ ಕಡಲಕಿನಾರೆಯಿಂದ ತೆರಳುವಂತೆ ಪೊಲೀಸರು ವಿಸಲ್ ಹಾಕಿ ಓಡಿಸುತ್ತಾರೆ. ಮುಸ್ಸಂಜೆಯ ಪ್ರಶಾಂತ ವಾತಾವರಣದ ರಸಸ್ವಾದಕ್ಕೂ ಅವಕಾಶ ನೀಡುವುದಿಲ್ಲ. ಬಹುದೂರದಿಂದ ಸಮುದ್ರದ ಸೊಬಗನ್ನು ನೋಡಲು ಬಂದ ಅನೇಕರಿಗೆ ಇದರಿಂದ ತೊಂದರೆಯಾಗುತ್ತದೆ. ಸಂಜೆ 7 ಆಗುತ್ತಿದ್ದಂತೆ ಬೀಚ್‌ನಿಂದ ಹೊರದಬ್ಬುವ ಪೊಲೀಸರ ಪ್ರವೃತ್ತಿ ಬದಲಾಗಬೇಕೆಂದು ಪ್ರವಾಸಿಗ ಪಾರ್ಥಸಾರಥಿ ತಿಳಿಸುತ್ತಾರೆ. ಸಾಕಷ್ಟು ವಿದೇಶಿಗರೂ ಈ ಕಡಲ ಸೊಬಗನ್ನು ನೋಡಲು ಆಗಮಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇಚ್ಛಾಶಕ್ತಿಯ ಕೊರತೆಯ ರಾಜಕಾರಣಿಗಳು, ಅಭಿವೃದ್ಧಿಗೆ ಅಸಹಕಾರ ನೀಡುವ ಕೆಲವು ಸರಕಾರಿ ಅಧಿಕಾರಿಗಳು, ಯೋಜನೆಗಳ ಗುತ್ಛವನ್ನು ಹೊಂದಿದ್ದರೂ ವರ್ಗಾವಣೆಯ ಪಥದಲ್ಲಿ ಸುತ್ತುವ ಕೆಲ ಅಧಿಕಾರಿ ವರ್ಗ ಹಾಗೂ ಸ್ಥಳೀಯ ವಾಸ್ತುವಿಗೆ ಹೊಂದದೆ ಎಲ್ಲೋ ಮೂಲೆಯಲ್ಲಿ ಕೂತು ಹೊಸ ಯೋಜನೆಗಳನ್ನು ರೂಪಿಸುವ ಏಜೆನ್ಸಿಗಳ ಪಾಶದಲ್ಲಿ ಪ್ರವಾಸೋದ್ಯಮ ಸೊರಗುತ್ತಿದೆ. ಇದಕ್ಕೆ ನವ ಚೈತನ್ಯತುಂಬಲು ಹೊಸ ಹುಮ್ಮಸ್ಸಿನ, ಪರಿಣತ ಅಧಿಕಾರಿಗಳ ಅಗತ್ಯವಿದೆ. ಸ್ವದೇಶಿ ದರ್ಶಿನಿಗೆ 25 ಕೋ. ರೂ.
ಉಡುಪಿಯ ಮಲ್ಪೆ ಮತ್ತು ಮರವಂತೆ ಕಡಲ ಕಿನಾರೆಗಳನ್ನು ಅಭಿವೃದ್ಧಿಗೊಳಿಸಲು ಸ್ವದೇಶಿ ದರ್ಶಿನಿ ಯೋಜನೆ ಸಿದ್ಧವಾಗಿದೆ. ಈ ಯೋಜನೆಗೆ 25 ಕೋ.ರೂ. ಮಂಜೂರಾಗಿದೆ ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ನಿರ್ದೇಶಕರಾದ ನಾಗರಾಜ ತಿಳಿಸಿದ್ದಾರೆ. ಈ ಯೋಜನೆಯಲ್ಲಿ ತೇಲುವ ಹೊಟೇಲ್, ಬೋಟಿಂಗ್, ಜಲಸಾಹಸ ಕ್ರೀಡೆಗಳು, ಸ್ಕೂಬಾಡೈವಿಂಗ್ ಮುಂತಾದ ಪ್ರವಾಸಿ ಆಕರ್ಷಗಳು ಬರಲಿವೆ. ಕ್ರಿಯಾ ಯೋಜನೆ ಸಿದ್ಧವಾಗಿದೆ. ಕಾಮಗಾರಿಗೆ ಗುತ್ತಿಗೆ ನೀಡುವುದು ಬಾಕಿ ಇದೆ ಎಂದು ಅವರು ಹೇಳಿದ್ದಾರೆ. ಮಾಡಲೇಬೇಕಾದ ಕಾರ್ಯಗಳು – ಸ್ತ್ರೀ ಮತ್ತು ಪುರುಷರಿಗೆ ಉತ್ತಮ ಗುಣಮಟ್ಟದ ಶೌಚಾಲಯ
– ಸಮುದ್ರ ಸ್ನಾನದ ಅನಂತರ ಸಿಹಿ ನೀರಿನ ಸ್ನಾನ ಮಾಡಲು ಶವರ್ ಅನುಕೂಲ
– ಶುಚಿಯಾದ ಕುಡಿಯುವ ನೀರಿನ ವ್ಯವಸ್ಥೆ
– ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ನೆರಳು
– ಕತ್ತಲೆಯಲ್ಲಿಯೂ ಪ್ರವಾಸಿಗರು ಕಾಣುವಂತಹ ಹೈಮಾಸ್ಟ್ ಲೈಟ್.
– ಪರಿಣಿತ ಲೈಫ್ ಗಾರ್ಡ್ ಸಂಖ್ಯೆಯನ್ನು ವೃದ್ಧಿಸಬೇಕು
– ಸೂರ್ಯಾಸ್ತಮಾನದ ಬಳಿಕ ಕನಿಷ್ಠ 2 ಗಂಟೆಯಾದರೂ ಉಳಿಯಲು ಅವಕಾಶ. ಪ್ರವಾಸೋದ್ಯಮಕ್ಕೊಂದು ಶಾಪ !
ಸಂಪೂರ್ಣ ವಿಶ್ವದಲ್ಲಿಯೇ ಪ್ರವಾಸೋದ್ಯಮಕ್ಕೊಂದು ಸ್ಥಾನವನ್ನು ತಂದುಕೊಟ್ಟ ಉಡುಪಿ ಜಿಲ್ಲೆಗೆ ಓರ್ವ ಪೂರ್ಣಪ್ರಮಾಣದ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ರಿಲ್ಲವೆಂದು ತಿಳಿಸಲು ವಿಷಾದವಾಗುತ್ತದೆ. ಉಡುಪಿ ಜಿಲ್ಲೆಯಾದಂದಿನಿಂದಲೂ ಪೂರ್ಣ ಪ್ರಮಾಣದ ಸಹಾಯಕ ನಿರ್ದೇಶಕರು ಉಡುಪಿಗೆ ಲಭ್ಯವಾಗದೇ ಇರುವುದೇ ದುರಂತ. ಈ ಹಿನ್ನೆಲೆಯಲ್ಲಿ ಆಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂನ ಅಧ್ಯಕ್ಷರಾದ ಮನೋಹರ ಶೆಟ್ಟಿ ಅವರು ಕೆಎಎಸ್ ಕ್ಯಾಡರ್‌ನ ಅಧಿಕಾರಿಯನ್ನು ಒದಗಿಸಿ ಎಂದು ಈಗಾಗಲೇ ರಾಜ್ಯ ಸರಕಾರವನ್ನು ವಿನಂತಿಸಿದ್ದಾರೆ. ಏನೆಲ್ಲ ಇದೆ ?
ಕಾಪು ದೀಪ ಸ್ತಂಭಕ್ಕೆ ತೆರಳಲು ಅಗಲ ಕಿರಿದಾದ ರಸ್ತೆ ನಿಮ್ಮನ್ನು ಸ್ವಾಗತಿಸುತ್ತದೆ. ಬಲ ಬದಿಯಲ್ಲಿ “ನಿರ್ಮಿತಿ’ ಅವರಿಂದ ನಿರ್ಮಾಣಗೊಂಡ ವಾಕ್‌ಪಾತ್ ಸ್ವಲ್ಪ ಧೈರ್ಯವನ್ನು ನೀಡುತ್ತದೆ. ಹಾಗೇ ಮುಂದುವರಿದರೆ ಪುರುಷ ಮತ್ತು ಮಹಿಳೆಯರಿಗಾಗಿ ಕೇವಲ 10 ವರ್ಷಗಳ ಹಿಂದೆ ನಿರ್ಮಾಣಗೊಂಡ ಜೀರ್ಣಾವಸ್ಥೆಯಲ್ಲಿರುವ ಶೌಚಾಲಯವಿದೆ. ಈ ಪೈಕಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಒಂದೊಂದು ಶೌಚಾಲಯವನ್ನು ಧೈರ್ಯವಾಗಿ ಉಪಯೋಗಿಸಬಹುದು. ಶೌಚಾಲಯದ ಕಿಂಡಿಗಳ ಗಾಜು ಒಡೆದಿರುವುದರಿಂದ ನಿಮ್ಮ ಮಾನ ನೀವೇ ಕಾಪಾಡಿಕೊಳ್ಳಬೇಕು. ಸಮುದ್ರ ಕಿನಾರೆಯ ಬಿಸಿಲ ಝಳ ಹೆಚ್ಚಾದರೆ ಖರೀದಿಸಿ ಕುಡಿಯಲು ಕುಡಿಯುವ ನೀರು ಲಭ್ಯ. ಇದರೊಂದಿಗೆ ತಂಪು ಪಾನೀಯಗಳು, ಕುರುಕಲು ತಿಂಡಿ-ತಿನಸುಗಳು ಸಿಗುತ್ತವೆ. ಇನ್ನೂ ಬಿಸಿಲು ಹೆಚ್ಚಾದರೆ ಟೋಪಿಗಳನ್ನು ಖರೀದಿಸಿ ನೆರಳು ಭಾಗ್ಯವನ್ನು ಪಡೆಯಬಹುದು. ಸಾಧ್ಯತೆಗಳು
– ಮಲ್ಪೆಯಿಂದ ಕಾಪು ದೀಪಸ್ತಂಭಕ್ಕೆ ದೋಣಿಯಾನ ಆರಂಭಿಸಬೇಕು.
– ಜಲಸಾಹಸ ಕ್ರೀಡೆಗೆ ಅವಕಾಶ ನೀಡಬೇಕು
– ಸ್ಕೂಬಾ ಡೈವಿಂಗ್‌ಗೆ ಅವಕಾಶ ಕಲ್ಪಿಸಬೇಕು
– ಉತ್ತಮ ಗುಣಮಟ್ಟದ ಶುಚಿ-ರುಚಿಯಾದ ಹೊಟೇಲ್ ಅಗತ್ಯವಾಗಿ ಬೇಕು
– ವಿಶಾಲ ರಸ್ತೆಗಳು ನಿರ್ಮಾಣವಾಗಬೇಕು
– ಸಮರ್ಪಕ ಸೈನೇಜ್‌ಹಾಕಿ ಪ್ರವಾಸಿಗರನ್ನು ಸೆಳೆಯಬೇಕು
– ತುರ್ತು ಆ್ಯಂಬುಲೆನ್ಸ್ ಸೇವೆ ಬೇಕು – ಆಸ್ಟ್ರೋ ಮೋಹನ್