Advertisement
16ನೇ ಶತಮಾನದಲ್ಲಿ ಪಾಂಗಾಳದ ನಾನಯರ ಗುರುಮಠದ ಗುರುಗಳಾದ ಕಿನ್ನಿಂಗದೇವ ನಾನಯರ ಸಲಹೆಯಂತೆ ಅವರ ಶಿಷ್ಯಂದಿರಾದ ಬಲಿಪ ನಾನಯ ಮತ್ತು ಪಿಲಿಪ ನಾನಯ ಅವರು, ಕೋಟಿ-ಚೆನ್ನಯರಿಗೆ ಯುದ್ಧ ವಿದ್ಯೆಗಳನ್ನು ಕಲಿಸಿದ್ದರು. ತುಳುನಾಡಿನಲ್ಲಿ ಮಲ್ಲ ವಿದ್ಯೆಯನ್ನು ಕಲಿಸುವ ಹಲವಾರು ಗರಡಿಗಳಿದ್ದವು. ಇಲ್ಲಿ ಮೂರು ವರ್ಷದ ತರಬೇತಿ ನೀಡುತ್ತಿದ್ದು ಇದನ್ನು ಕೇರಳದಲ್ಲಿ ತುಳುನಾಡನ್ ವಿದ್ಯೆ ಎಂದು ಕರೆಯುತ್ತಿದ್ದರು. ಈ ಮಲ್ಲ ವಿದ್ಯೆಗಳಿಗಾಗಿ ಮಲ್ಲಕಂಬಗಳನ್ನು ಬಳಸಲಾಗುತ್ತಿತ್ತು. ತುಳುನಾಡಿನ ಹಲವಾರು ಗರೋಡಿಗಳಲ್ಲಿ ಕಾಣಸಿಗುವ ಗುರು ಕಂಬಗಳಿಗೂ, ಕಳರಿ ಸಮರಾಭ್ಯಾಸದ ಮಲ್ಲ ಕಂಬಗಳಿಗೂ ಪರಸ್ಪರ ಸಂಬಂಧಗಳಿವೆ.
Related Articles
Advertisement
ಶ್ರೀ ಚಂಡಿಕಾ ಪರಮೇಶ್ವರಿ ದೇವಿ ಇಲ್ಲಿನ ಶಕ್ತಿ ದೇವತೆಯಾಗಿದ್ದು ಗಣಪತಿ, ಬ್ರಹ್ಮ, ವೀರಭದ್ರ, ಈಶ್ವರ, ಕುಮಾರನ್ನೊಳಗೊಂಡ ಪಂಚದೈವಿಕ ಸಾನಿಧ್ಯಗಳಿವೆ. ಕೋಟಿ ಚೆನ್ನಯ್ಯರ ಶಸ್ತ್ರ ತರಬೇತಿ ಗುರುಗಳಾದ ಬಲಿಪ ನಾನಯ ಮತ್ತು ಪಿಲಿಪ ನಾನಯರ ಸಮಾಧಿ, ಕೋಟಿ ಚೆನ್ನಯ್ಯರ ಸಹಿತವಾಗಿ ಅನೇಕರು ಸಾಧನೆಗೈಯ್ಯುತ್ತಿದ್ದ ಕಟ್ಟಿಕೆರೆ ಸದ್ಯಕ್ಕೆ ಇಲ್ಲಿ ತೋರಿ ಬರುತ್ತಿರುವ ಪುರಾವೆಗಳು.
ಗುರು ಸ್ಮರಣೆಗಾಗಿ 66 ಗರಡಿ ನಿರ್ಮಾಣ
ಸಾಯನ ಬೈದ್ಯರ ಸೂಚನೆಯಂತೆ ಕೋಟಿ-ಚೆನ್ನಯ್ಯರಿಗೆ ಪಾಂಗಾಳ ನಾನಯರ ಗರಡಿಯಲ್ಲಿ ಬಲಿಪ ನಾನಯ ಮತ್ತು ಪಿಲಿಪ ನಾನಯರೆಂಬ ಅವಳಿ ಪುರುಷರ ಬಳಿ ಕಳರಿ ವಿದ್ಯೆ ಸಹಿತ ಪರಿಪೂರ್ಣ ಅಂಗ ಸಾಧನೆ ಕಲಿಸಲಾಗುತ್ತದೆ. ಅಲ್ಲಿ ಗುರುಕಾಣಿಕೆ ವಿಷಯ ಬಂದಾಗ ಗುರುಗಳು ನಿರಾಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಗುರು ವಿದ್ಯೆ ಕಲಿತ ಸ್ಮರಣೆಗಾಗಿ 66 ಗರಡಿ ನಿರ್ಮಿಸುವುದಾಗಿ ಬಲಿಪ ಮತ್ತು ಪಿಲಿಪ ನಾನಯರಿಗೆ ವಾಗ್ಧಾನ ನೀಡುತ್ತಾರೆ. ಮರಣ ಕಾಲಕ್ಕೆ 66 ಗರಡಿ ನಿರ್ಮಾಣ ಮಾಡುವಂತೆ ಬಲ್ಲಾಳರಿಗೆ ಸೂಚನೆ ನೀಡಿದ್ದು, ಪಾಂಗಾಳ ನಾನಯರ ಗರಡಿಯ ಆಯವನ್ನು ಮಾದರಿಯನ್ನಾಗಿಸಿಕೊಂಡು 66 ಗರಡಿ ನಿರ್ಮಾಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.-ಸುಧಾಕರ್ ಡಿ. ಅಮೀನ್, ಪಾಂಗಾಳ ಗುಡ್ಡೆ ಗರಡಿಮನೆ ಕೇರಳದಲ್ಲಿ 14 ಗ್ರಾಮಗಳು ಉಂಬಳಿ! ಪಾಂಗಾಳ ನಾನಯರ ಗರಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ಕೂಡಾ ಕಳರಿ ಕಲಿಯಲು ಬರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಮುದ್ದು ಕುಳಂ, ಚಂಬ ಕುಳಂ ಸಹಿತ 14 ಗ್ರಾಮಗಳನ್ನು ಗುರುದಕ್ಷಿಣೆ ರೂಪದಲ್ಲಿ ನಾನಯರ ಕುಟುಂಬಸ್ಥರಿಗೆ ಉಂಬಳಿ ರೂಪದಲ್ಲಿ ಬಿಡಲಾಗಿತ್ತು. ಅದರಲ್ಲಿ ಮುದ್ದು ಕುಳಂ, ಚಂಬ ಕುಳಂನ ಜಮೀನು ಉಳುವನೇ ಹೊಲದೊಡೆಯ ಕಾನೂನಿನಲ್ಲಿ ಕಳೆದುಹೋಗಿದೆ, ಮುದ್ದು ಕುಳಂನಲ್ಲಿ ಗುರು ಮಠ, ಮನೆ ಮತ್ತು ಪಾಂಗಾಳದಿಂದ ಕೊಂಡೊಯ್ದು ಪ್ರತಿಷ್ಠಾಪಿಸಲಾಗಿರುವ ವೀರಭದ್ರ ದೇವಸ್ಥಾನದಲ್ಲಿ ಈಗಲೂ ಆರಾಧನೆ ನಡೆಯುತ್ತಿದೆ. ನಾನಯ ಕುಟುಂಬದ ಸದಸ್ಯರು ಈಗಲೂ ಮಠದಲ್ಲಿ ವಾಸವಿದ್ದಾರೆ ಎನ್ನುತ್ತಾರೆ ಪಾಂಗಾಳದ ನಾನಯರ ಗರಡಿಯ ಕರುಣಾಕರ ಶೆಟ್ಟಿ. -ರಾಕೇಶ್ ಕುಂಜೂರು