Advertisement
ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ನೇಕಾರಿಕೆ, ಕಮ್ಮಾರಿಕೆ, ಅಕ್ಕಸಾಲಿಗರ ಪ್ರಾತ್ಯಕ್ಷಿಕೆ, ಪಕ್ಷಿಗಳ ಪ್ರದರ್ಶನ, ಗೂಡುದೀಪ ತಯಾರಿಕೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ದೇವಸ್ಥಾನದ ವಾದ್ಯ ಪರಿಕರಗಳ ಪ್ರದರ್ಶನ, ಬುಟ್ಟಿ ತಯಾರಿಕೆ, ಎತ್ತಿನ ಗಾಣ ಸಹಿತ ಅಲೆ ಮನೆ ಕಬ್ಬಿನ ಹಾಲು ಎಲ್ಲವೂ ಸೇರಿ ಜನರಿಗೆ ಹೊಸ ಲೋಕ ದರ್ಶನ ಮಾಡಿಸುತ್ತಿವೆ.
ಬೆಟ್ಟದ ಒಳಗಿನ ಸುರಂಗದಂತಿರುವ ಪ್ರವೇಶ ದ್ವಾರದ ಒಳಗೆ ಹೋಗುತ್ತಿದ್ದಂತೆಯೇ ದನ ಕರು, ಜಿಂಕೆ ಸಹಿತವಾಗಿ ಪ್ರಾಣಿಗಳ ರೂಪಗಳು ಸ್ವಾಗತಿಸುತ್ತವೆ. ಬಳಿಕ ಉಚ್ಚಿಲ ದಸರಾ 2023ರ ಫೋಟೋ ಪ್ರದರ್ಶನ ಸೆಳೆಯುತ್ತದೆ. ಮುಂದೆ ವಾದ್ಯ ಪರಿಕರಗಳು, ಡಾಲ್ಫಿನ್, ಮಿಕ್ಕಿಮೌಸ್, ವಿವಿಧ ಪ್ರಾಣಿ ಪಕ್ಷಿಗಳು, ಹಣ್ಣು ಹಂಪಲುಗಳೊಂದಿಗಿನ ಫಲಪುಷ್ಟ ಪ್ರದರ್ಶನವು ವಸ್ತು ಪ್ರದರ್ಶನದ ಪೆಂಡಾಲ್‌ನ ಅಂದ ಹೆಚ್ಚಿಸಿದೆ. ಯತೀಶ್ ಕಿದಿಯೂರು ದಂಪತಿ ನೇತೃತ್ವದ ಬಾಟಲ್ ಗಾರ್ಡನ್ ಎಲ್ಲರ ಗಮನ ಸೆಳೆಯುತ್ತದೆ.
Related Articles
Advertisement
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘವು ಉಚ್ಚಿಲದಲ್ಲಿ ಶಾಶ್ವತವಾಗಿ ಸ್ಥಾಪಿಸಲುದ್ದೇಶಿಸಿರುವ ಮ್ಯೂಸಿಯಂ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನಕ್ಕೆ ಕರಾವಳಿಯ ಮೀನುಗಾರರು ಒದಗಿಸಿರುವ ಹಳೆಯ ಕಾಲದ ಬೃಹತ್ ದೋಣಿಗಳು, ಸಣ್ಣ ದೋಣಿಗಳು, ಬಲೆಗಳು, ಮೀನುಗಾರಿಕಾ ಪರಿಕರಗಳು ಯುವ ಸಮುದಾಯವನ್ನು ಹೆಚ್ಚು ಆಕರ್ಷಿಸುತ್ತಿದೆ.
ಉಚ್ಚಿಲ ದಸರಾದಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ ಭಾರೀ ಜನಾಕರ್ಷಣೆ ಪಡೆಯಿತು. ಜೀವಂತ ಮೀನುಗಳು ಇಲ್ಲಿವೆ
ಬಂಗುಡೆ, ಕೊಕ್ಕರ್, ಏಡಿ, ತೊರಕೆ, ಕಾಂಡೈ, ಸಮುದ್ರ ಹಾವು, ನಕ್ಷತ್ರ ಮೀನು, ಕೊಂತಿ, ಮಾಲಯಿ, ಕುಲೇಜಿ, ಪಲಾಯಿ, ಇರ್ಪೆ, ಗುಮ್ಮ ಮೀನು ಸಹಿತ ಸಮುದ್ರದ ಉಪ್ಪು ನೀರಿನಲ್ಲಿ ಸಿಗುವ ಮತ್ತು ಸಿಹಿ ನೀರಿನಲ್ಲಿ ಸಿಗುವ ವಿವಿಧ ಜಾತಿಯ ಜೀವಂತ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪಚ್ಚೆಲೆ ಕೃಷಿ, ಪಂಜರ ಕೃಷಿ ಪ್ರಾತ್ಯಕ್ಷಿಕೆ, ಅಲಂಕಾರಿಕ ಮೀನುಗಳ ಬಗ್ಗೆ ವೀಕ್ಷಣೆಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಏನೇನು ಆಕರ್ಷಣೆ?
- ಅಲಂಕಾರಿಕ ಮೀನುಗಳು, ಲವ್‌ಬರ್ಡ್‌ಗಳು, ಮಣ್ಣಿನಲ್ಲಿ ನಿರ್ಮಿಸಿದ ಅಲಂಕಾರಿಕ ಪ್ರಾಣಿ ಪಕ್ಷಿಗಳು, ದನಕರುಗಳು ವನ್ಯಜೀವಿಧಾಮದ ನೆನಪನ್ನು ನೀಡುತ್ತಿವೆ.
- ವಿವಿಧ ಜಾತಿಯ ಹೂವಿನ ಗಿಡಗಳು, ಮರಗಿಡಗಳು ಪ್ರದರ್ಶನ ಮತ್ತು ಮಾರಾಟಕ್ಕೂ ಭರ್ಜರಿ ಸ್ಪಂದನೆ ಇದೆ.
- ಐಟಿಡಿಪಿ ವಿಭಾಗದ ಸಹಯೋಗದೊಂದಿಗೆ ಕರಕುಶಲ ವಸ್ತುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಳದಲ್ಲೇ ಬುಟ್ಟಿ ನೆಯ್ದು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಪಾದೆಬೆಟ್ಟುವಿನ ತಂಡ ಈ ವಿಭಾಗವನ್ನು ಅದ್ಭುತವಾಗಿ ನಿರ್ವಹಿಸುತ್ತಿದೆ.
- ಜೇನು ಹನಿ ಸಹಿತ ವಿವಿಧ ಗ್ರಾಮೀಣ ಜನರ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
- ನೇಕಾರಿಕೆ, ಕೊಡಪಟ್ಯ, ಕಮ್ಮಾರಿಕೆ, ಗೂಡುದೀಪ ತಯಾರಿಕೆ, ಬುಟ್ಟಿ ತಯಾರಿಕೆ, ಗುಡಿ ಕೈಗಾರಿಕೆಯ ಪ್ರಾತ್ಯಕ್ಷಿಕೆ ಸಹಿತ ಮಾರಾಟ ಮಳಿಗೆಯಿದೆ.
ಪ್ರಕೃತಿ ಮೇಲಿನ ಮನುಷ್ಯನ ಧಾಳಿ, ಬೆಟ್ಟ ಗುಡ್ಡಗಳ ನಾಶವನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ದಸರಾ ರೂವಾರಿ ಡಾ| ಜಿ. ಶಂಕರ್, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರ ಮಾರ್ಗದರ್ಶನದಂತೆ ಪವಿತ್ರ ಪರ್ವತ ಪರಿಶುದ್ಧ ಪರಿಸರ – ಪರ್ವತಗಳ ನಾಶ ಮನುಕುಲದ ವಿನಾಶ ಎಂಬ ಕಲ್ಪನೆಯೊದಿಗೆ ಪ್ರವೇಶ ದ್ವಾರವನ್ನು ವಿನ್ಯಾಸಗೊಳಿಸಲಾಗಿದೆ.
-ಯತೀಶ್ ಕಿದಿಯೂರು, ವಸ್ತು ಪ್ರದರ್ಶನ ಉಸ್ತುವಾರಿ -ರಾಕೇಶ್ ಕುಂಜೂರು