ಕಾಪು : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕವಾಗಿ ಜೀವ ಬೆದರಿಕೆಯೊಡ್ಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕು ಬಜ್ಪೆ ನಿವಾಸಿ ಮಹಮ್ಮದ್ ಶಾಫಿ (26) ಬಂಧಿತ ಆರೋಪಿಯಾಗಿದ್ದು ಈತನನ್ನು ಕಾಪು ಪೊಲೀಸರು ಬಜ್ಪೆಯಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣ ಅವರ ವಿರುದ್ಧು ಸಾಮಾಜಿಕ ಜಾಲತಾಣ ಮಾರಿಗುಡಿ ೬ ಎಂಬ ಇನ್‌ಸ್ಟಾ ಗ್ರಾಂನ ಖಾತೆಯಲ್ಲಿ ಜೀವ ಬೆದರಿಕೆಯೊಡ್ಡಿದ್ದು ಅವರನ್ನು ಹತ್ಯೆಗೈದವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಪೋಸ್ಟ್ ಹಾಕಲಾಗಿತ್ತು. ಯಶ್‌ಪಾಲ್ ಸುವರ್ಣ ಅವರ ಬಗ್ಗೆ ಈ ರೀತಿಯಾಗಿ ಪೋಸ್ಟ್ ಹಾಕಿದ್ದವರನ್ನು ಪತ್ತೆ ಹಚ್ಚಿ, ಶಿಕ್ಷೆಗೊಳಪಡಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಆಧ್ಯಕ್ಷ ಸಚಿನ್ ಸುವರ್ಣ ಅವರ ನೇತೃತ್ವದ ಯುವ ಮೋರ್ಚಾ ತಂಡ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಒತ್ತಾಯಿಸಿದ್ದರು.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ಪಂಚಮಸಾಲಿ ಮೀಸಲು ಪರವಾಗಿದ್ದಾರೆ: ಸಿ.ಸಿ.ಪಾಟೀಲ್
ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ, ಕಾರ್ಕಳ ಡಿವೈಎಸ್ಸಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾಪು ಸಿಐ ಪ್ರಕಾಶ್ ನೇತೃತ್ವದಲ್ಲಿ ಕಾಪು ಎಸ್ಸೈ ಶ್ರೀಶೈಲ ಮುರಗೋಡ, ಸಿಬಂದಿಗಳಾದ ಪ್ರವೀಣ್, ನಾರಾಯಣ, ರಾಜೇಶ್, ಹೇಮರಾಜ್ ಅವರ ನೇತೃತ್ವದ ತಂಡವು ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಯಶ್‌ಪಾಲ್ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಬಜ್ಪೆ ನಿವಾಸಿ ಮೊಹಮ್ಮದ್ ಶಾಫಿಯನ್ನು ಜೂ. ೧೮ರಂದು ಬಜ್ಪೆ ತಾರಿಕಂಬ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ವಿಚಾರಣೆಯ ವೇಳೆ ಬಂಧಿತ ಆರೋಪಿ ಮೊಹಮ್ಮದ್ ಶಾಫಿ ತನ್ನ ಸ್ನೇಹಿತ ಆಸಿಫ್ ಎಂಬಾತನೊಂದಿಗೆ ಸೇರಿಕೊಂಡು ಮಾರಿಗುಡಿ 6 ಎಂಬ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಯಶ್‌ಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್ ಅವರ ಫೋಟೊ ಇರುವ ಪೋಸ್ಟ್‌ನ್ನು ಸೃಷ್ಟಿಸಿ, ಅದರಲ್ಲಿ ಎರಡು ಹಂದಿಗಳ ತಲೆ ಕಡಿದರೆ 20 ಲಕ್ಷ.. ಒಂದು ತಲೆಗೆ 10 ಲಕ್ಷ ರೂಪಾಯಿ ಎಂದು ಘೋಷಣೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮತ್ತೋರ್ವ ಆರೋಪಿ ಆಸಿಫ್‌ನ ಬಂಧನಕ್ಕೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.