Advertisement

ಇಬ್ಬರು ಸಚಿವರನ್ನು ನೀಡಿದ ವಿಧಾನಸಭಾ ಕ್ಷೇತ್ರ ಕಾಪು

05:10 PM Apr 01, 2019 | keerthan |

ಉಡುಪಿ: ಒಂದು ಕಾಲದಲ್ಲಿ ಕಾಂಗ್ರೆಸ್‌ ಪಾರಮ್ಯ ಹೊಂದಿದ್ದ ಕ್ಷೇತ್ರವಿದು. ಸಾಕಷ್ಟು ಪೈಪೋಟಿಯ ನಡುವೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿ. ಭಾಸ್ಕರ ಶೆಟ್ಟಿ ಮತ್ತು ವಸಂತ ವಿ. ಸಾಲ್ಯಾನ್‌ ಅವರಿಗೆ ಹ್ಯಾಟ್ರಿಕ್‌ ಗೆಲುವು ದೊರಕಿಸಿಕೊಟ್ಟ ವಿಶಿಷ್ಟ ಕ್ಷೇತ್ರ. ಹೊರಗಿನವರಾದ ವಿನಯ ಕುಮಾರ್‌ ಸೊರಕೆ ಅವರಿಗೂ ಪ್ರತಿನಿಧಿಸಲು ಅವಕಾಶ ಕೊಟ್ಟಿದೆ.

Advertisement

ಕಾಂಗ್ರೆಸ್‌ ಅಲೆ
2009ರಲ್ಲಿ ನಡೆದ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ ಜಯ ಗಳಿಸಿದರೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಅವರಿಗಿಂತ 2,539 ಅಧಿಕ ಮತಗಳನ್ನು ಪಡೆದಿದ್ದರು. ಬಳಿಕ 2012ರಲ್ಲಿ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಹೆಗ್ಡೆಯವರು ಜಯ ಗಳಿಸಿದ್ದರು.

ಬಿಜೆಪಿ ಲಗ್ಗೆ
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರಿಗಿಂತ 27,801ರಷ್ಟು ಮುನ್ನಡೆ ಗಳಿಸಿದ್ದರು. ಇದರ ಮುಂದುವರಿಕೆಯೋ ಎಂಬಂತೆ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ವಿರುದ್ಧ 11,917 ಮತಗಳ ಅಂತರದಲ್ಲಿ ಜಯ ಗಳಿಸಿದರು.

ಕಾಪು ವಿಧಾನಸಭಾ ಕ್ಷೇತ್ರ ಮೊದಲ ಚುನಾ ವಣೆ ಎದುರಿಸಿದ್ದು 1957ರಲ್ಲಿ. ಈವರೆಗಿನ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 9 ಬಾರಿ, ಬಿಜೆಪಿ 3 ಬಾರಿ, ಪಿಎಸ್‌ಪಿ 2 ಬಾರಿ ಜಯ ಗಳಿಸಿವೆ.

ಇಲ್ಲಿನ ಸಚಿವರು
ಕಾಪು ಕ್ಷೇತ್ರದಿಂದ ಆಯ್ಕೆಯಾದ ವಸಂತ ವಿ. ಸಾಲ್ಯಾನ್‌ ಮತ್ತು ವಿನಯ ಕುಮಾರ್‌ ಸೊರಕೆ ಸಚಿವರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ಬಿ. ಭಾಸ್ಕರ ಶೆಟ್ಟಿ ಮತ್ತು ವಸಂತ ವಿ. ಸಾಲ್ಯಾನ್‌ ಅವರಿಗೆ ಹ್ಯಾಟ್ರಿಕ್‌ ಗೆಲುವು ನೀಡಿದ ಕ್ಷೇತ್ರವೂ ಹೌದು. ಇಲ್ಲಿ ಕಾಂಗ್ರೆಸ್‌ನಿಂದ ಸತತ ಗೆಲುವು ಸಾಧಿಸಿದ್ದ ವಸಂತ ಸಾಲ್ಯಾನ್‌ ಬಳಿಕ ಪಕ್ಷವು ವಿನಯ ಕುಮಾರ್‌ ಸೊರಕೆಯವರಿಗೆ ಟಿಕೆಟ್‌ ನೀಡಿದಾಗ ಪಕ್ಷಾಂತರ ಮಾಡಿದ್ದರು.

Advertisement


ಗಮನಾರ್ಹ ಸಾಧನೆ

ರಾಜಕೀಯ-ಚುನಾವಣೆ ಇತಿಹಾಸದ ದೃಷ್ಟಿಯಿಂದಲೂ ಕಾಪು ವಿಧಾನಸಭಾ ಕ್ಷೇತ್ರ ಗಮನಾರ್ಹವಾಗಿದೆ. ರಾಷ್ಟ್ರೀಯ ನಾಯಕರೆಲ್ಲ ಇಲ್ಲಿಗೆ ಬಂದಿದ್ದಾರೆ ಮತ್ತು ಬರುತ್ತಿದ್ದಾರೆ. 2004ರ ಚುನಾವಣೆಯ ಸಂದರ್ಭದಲ್ಲಿ ಪುಟ್ಟ ಕ್ಷೇತ್ರವಾಗಿದ್ದ ಕಾಪು ಹೊಂದಿದ್ದ ಮತದಾರರ ಸಂಖ್ಯೆ 1,13,871. 2009ರ ಪುನರ್‌ವಿಂಗಡಣೆಯ ಸಂದರ್ಭ ವಿಸ್ತಾರಗೊಂಡ ಬಳಿಕ ಅದರ ವ್ಯಾಪ್ತಿಗೆ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಪೆರ್ಣಂಕಿಲ, ಆತ್ರಾಡಿ, ಬೊಮ್ಮರಬೆಟ್ಟು, ಅಲೆವೂರು, 80ನೇ ಬಡಗಬೆಟ್ಟು ಗ್ರಾಮಗಳು ಮತ್ತು ಬ್ರಹ್ಮಾವರ ಕ್ಷೇತ್ರಕ್ಕೆ ಒಳಪಟ್ಟಿದ್ದ ಪೆರ್ಡೂರು, ಹರಿಖಂಡಿಗೆ, ದೊಂಡೇರಂಗಡಿ ಗ್ರಾಮಗಳು ಸೇರ್ಪಡೆಗೊಂಡವು. ಅನಂತರ ಮತದಾರರ ಸಂಖ್ಯೆ ದುಪ್ಪಟ್ಟಾಯಿತು.

ಹೀಗಿದೆ ಇತಿಹಾಸ
ಕಾಪು ಕ್ಷೇತ್ರವನ್ನು 1957ರಿಂದ 2013ರ ವರೆಗಿನ 56 ವರ್ಷಗಳ ಅವಧಿಯ 13 ಚುನಾವಣೆಗಳಲ್ಲಿ ಐವರು ಶಾಸಕರು ಮಾತ್ರ ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್‌ನ ಎಫ್‌.ಎಕ್ಸ್‌.ಡಿ. ಪಿಂಟೋ ಒಂದು ಬಾರಿ, ಬಿ. ಭಾಸ್ಕರ ಶೆಟ್ಟಿ ಕಾಪು (ಕಾಂಗ್ರೆಸ್‌-ಪಿಎಸ್‌ಪಿಯಿಂದ ತಲಾ 2 ಬಾರಿ), ವಸಂತ ವಿ. ಸಾಲ್ಯಾನ್‌ ಐದು ಬಾರಿ, ವಿನಯ ಕುಮಾರ್‌ ಸೊರಕೆ ಒಂದು ಬಾರಿ; ಬಿಜೆಪಿಯಿಂದ ಲಾಲಾಜಿ ಆರ್‌. ಮೆಂಡನ್‌ ಮೂರು ಬಾರಿ ಆಯ್ಕೆಯಾಗಿದ್ದಾರೆ.

 ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next