ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲರ ಸಹಕಾರದೊಂದಿಗೆ ಎ. 18ರಂದು ಬೆಳಗ್ಗೆ 12 ಗಂಟೆಗೆ ಕಾಪು ತಾಲೂಕು ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.
ಶನಿವಾರ ಕಾಪು ರಾಜೀವ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಹಸ್ರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಕಾಲ್ನಡಿಗೆಯ ಮೂಲಕ ಬಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದರು.
ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಾಪು ಜನಾರ್ದನ ದೇವಸ್ಥಾನದಿಂದ ಬಂಗ್ಲೆ ಮೈದಾನದವರೆಗೆ ಬೃಹತ್ ಜಾಥ ನಡೆಯಲಿದ್ದು ಬಳಿಕ ಬಂಗ್ಲೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಹಿತ ಪಕ್ಷದ ಜಿಲ್ಲೆ ಮತ್ತು ರಾಜ್ಯ ಮಟ್ಟದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.
ಕಾಪು ಕ್ಷೇತ್ರವು 2013ರಲ್ಲಿ ರಾಜಕೀಯವಾಗಿ ನನಗೆ ಪುನರ್ಜನ್ಮ ನೀಡಿದ ಕ್ಷೇತ್ರವಾಗಿದ್ದು ಈ ಕ್ಷೇತ್ರದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದ ಸಂತೃಪ್ತಿಯಿದೆ. 2018ರಲ್ಲಿ ಬಿಜೆಪಿಯವರ ಅಪ್ರಚಾರದಿಂದಾಗಿ ಸೋಲುಂಟಾಗಿದ್ದು ಈ ಬಾರಿ ಮತ್ತೆ ಅತ್ಯಧಿಕ ಮತಗಳೊಂದಿಗೆ ಚುನಾವಣೆ ಗೆಲ್ಲುವ ವಿಶ್ವಾಸವಿದೆ ಎಂದರು.
ಕಾಪು ತಾಲೂಕು, ಪುರಸಭೆ ರಚನೆ, ಮಿನಿ ವಿಧಾನಸೌಧ ಸಹಿತವಾಗಿ ಶಾಶ್ವತವಾಗಿ ಉಳಿಯುವಂತಹ ಹತ್ತಾರು ಯೋಜನೆಗಳು ತಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದು ಇನ್ನಷ್ಟು ಯೋಜನೆಗಳ ಜಾರಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ವಿನಂತಿಸುತ್ತಿದ್ದೇವೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಸಂಯೋಜಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ನವೀನ್‌ಚಂದ್ರ ಜೆ. ಶೆಟ್ಟಿ, ಪಕ್ಷದ ಮುಖಂಡರಾದ ವೈ. ಸುಕುಮಾರ್, ಕೆ.ಎಚ್. ಉಸ್ಮಾನ್, ಸುನೀಲ್ ಬಂಗೇರ ಉಪಸ್ಥಿತರಿದ್ದರು.