Advertisement
ಕಾಪು ತಾಲೂಕು ರಚನೆಯಾಗಿ ವರ್ಷವೇ ಕಳೆದಿದ್ದರೂ, ಉಡುಪಿ ತಹಶೀಲ್ದಾರರೇ ಕಾಪು ತಾಲೂಕಿನ ಜನನ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಹಿ ಹಾಕುವ ಅಧಿಕಾರವನ್ನು ಹೊಂದಿದ್ದರು. ಒಂದು ವಾರದ ಹಿಂದೆ ತಾಂತ್ರಿಕವಾಗಿ ಕಾಪು ತಾಲೂಕನ್ನು ಉಡುಪಿಯಿಂದ ಪ್ರತ್ಯೇಕಿಸಲಾಗಿದ್ದು, ಕಾಪು ತಹಶೀಲ್ದಾರರು ಹಾಗೂ ಉಪ ತಹಶೀಲ್ದಾರರು ಡಿಜಿಟಲ್ ಸಹಿ ಮಾಡಿ ಪ್ರತಿ ಒಟಿಸಿ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಮಾನ್ಯ ಮಾಡಬೇಕಿದೆ. ಈ ಪ್ರಕ್ರಿಯೆಗೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು.ಪ್ರಕ್ರಿಯೆ ಹೇಗೆ?
ಈ ವರೆಗೆ ಉಡುಪಿ ತಾಲೂಕಿನ ಲಾಗಿನ್‌ನಲ್ಲಿದ್ದ ಕಾಪು ಹೋಬಳಿಯ ಒಟಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕಾಪು ತಾಲೂಕಿಗೆ ವರ್ಗಾಯಿಸಲಾಗಿದೆ. ಇವುಗಳಿಗೆ ಹಿಂದಿದ್ದ ಉಡುಪಿ ತಹಶೀಲುದಾರರ ಡಿಜಿಟಲ್ ಸಹಿಯನ್ನು ಬದಲಿಸಿ ಕಾಪು ತಹಶೀಲುದಾರರು ಹಾಗೂ ಡೆಪ್ಯೂಟಿ ತಹಶೀಲುದಾರರು ಆನ್‌ಲೈನ್‌ನಲ್ಲಿ ಡಿಜಿಟಲ್ ಅನುಮೋದನೆ ನೀಡಬೇಕಿದೆ. ಪ್ರತಿ ಒಟಿಸಿಗೂ ಇದೇ ರೀತಿ ಮಾಡಬೇಕಿರುವುದರಿಂದ ದಿನಕ್ಕೆ ಗರಿಷ್ಠ 100ರಿಂದ 200 ಒಟಿಸಿ ಅನುಮೋದನೆ ಮಾಡಲಾಗುತ್ತಿದೆ. ಸುಮಾರು 1.5 ಲಕ್ಷ ಒಟಿಸಿ ಬಾಕಿ ಇದೆ. ಶೀಘ್ರ ಇವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಕಾಪು ಉಪ ತಹಶೀಲ್ದಾರ್ ಕಲ್ಲಮುರುಡಪ್ಪ
ಅವರು ತಿಳಿಸಿದ್ದಾರೆ.
ಪ್ರತಿ ಒಟಿಸಿ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕ ಡಿಜಿಟಲ್ ಸಹಿಯಿಂದ ತಹಶೀಲ್ದಾರ್, ಡಿಟಿ ಅನುಮೋದಿಸಬೇಕಿದ್ದು ಇದಕ್ಕೆ ಸಮಯ ತೆಗದುಕೊಳ್ಳುತ್ತದೆ. ಆಫ್ಲೈನ್ ಪ್ರಕ್ರಿಯೆಯಲ್ಲಿ ಇದನ್ನು ತ್ವರಿತವಾಗಿ ಮಾಡಬಹುದಾಗಿದೆ. ಆದರೆ ಆಫ್ಲೈನ್ ಪ್ರಕ್ರಿಯೆಗೆ ಪ್ರತ್ಯೇಕ ಡಾಟಾಬೇಸ್, ಸಾಫ್ಟ್ವೇರ್ ತಾಂತ್ರಿಕತೆಯಲ್ಲಿ ಬದಲಾವಣೆ ಮಾಡಬೇಕಿದೆ. ಆದರೆ ಇದರಿಂದ ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದ್ದು ಈ ಬಗ್ಗೆ ಪರಿಶೀಲಿಸಬೇಕಿದೆ.
ಹೊಸ ಅರ್ಜಿ ಸ್ವೀಕರಿಸಲು ಸಮಸ್ಯೆ
ಪ್ರಸ್ತುತ ಸಾಫ್ಟ್ವೇರ್‌ನಲ್ಲಿ ಪರಿಷ್ಕರಣೆ ನಡೆಯುತ್ತಿರುವುದರಿಂದ ನಾಡಕಚೇರಿ ಹಾಗೂ ಗ್ರಾಪಂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜಾತಿ-ಆದಾಯ ಪ್ರಮಾಣಪತ್ರಗಳ ಹೊಸ ಅರ್ಜಿಗಳನ್ನು ಸ್ವೀಕರಿಸುವುದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಬಾಪೂಜಿ ಸೇವಾ ಕೇಂದ್ರಗಳ ಲಾಗಿನ್ ಕೂಡಾ ಕಾಪುವಿಗೆ ಬದಲಿಸಲಾಗಿದೆ. ಒಟಿಸಿಯಲ್ಲಿ ಪ್ರಮಾಣಪತ್ರ ಸಿಗದಿರುವವರು ಹೊಸದಾಗಿ ಅರ್ಜಿ ಸಲ್ಲಿಸಲೂ ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಶೀಘ್ರ ಲಭ್ಯವಾಗಲಿವೆ.
ಕಾಪುವಿಗೆ ಪ್ರತ್ಯೇಕ ಲಾಗಿನ್ ಸೃಜಿಸಿರುವುದರಿಂದ ಪ್ರತಿ ಒಟಿಸಿ ಜಾತಿ-ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲಿ ಡಿಜಿಟಲ್ ಸಹಿ ಮಾಡುವುದು ಅನಿವಾರ್ಯ. ತೀವ್ರಗತಿಯಲ್ಲಿ ಪರಿಶೀಲನೆ ನಡೆಸಿ ಡಿಜಿಟಲ್ ಸಹಿ ಮಾಡಲಾಗುತ್ತಿದೆ. ಶೀಘ್ರ ಪ್ರಮಾಣಪತ್ರಗಳು ಲಭ್ಯವಾಗಲಿವೆ.
– ಪ್ರದೀಪ್ ಕುರ್ಡೇಕರ್,
ತಹಶೀಲ್ದಾರ್, ಕಾಪು, ಉಡುಪಿ