ಉಡುಪಿ/ಮುಂಬೈ: ಸೂಪರ್ ಸ್ಟಾರ್ ಬಿಗ್ ಬಿ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ ಪತಿ ಸ್ಟೂಡೆಂಟ್ ವೀಕ್ ಸ್ಪೆಷಲ್ ನಲ್ಲಿ ಭಾಗವಹಿಸಿದ್ದ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ನ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ಅವರು 14 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 50 ಲಕ್ಷ ರೂಪಾಯಿ ಗೆದ್ದಿದ್ದರು.
ಆದರೆ ಒಂದು ಕೋಟಿ ರೂಪಾಯಿ ಮೊತ್ತದ 12ನೇ ಪ್ರಶ್ನೆಯಾದ ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಬದುಕುಳಿದು ಯುಧಿಷ್ಠಿರನ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡಿದ್ದ ಕರ್ಣನ ಮಗ ಯಾರು ಎಂಬ ಪ್ರಶ್ನೆಗೆ ಅನಮಯ ಬಳಿ ಒಂದು ಲೈಫ್ ಲೈನ್ ಇದ್ದರೂ ಕೂಡಾ ಉತ್ತರ ಗೊತ್ತಿಲ್ಲದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದು 50 ಲಕ್ಷ ರೂ. ಬಹುಮಾನ ಗೆದ್ದಿದ್ದರು.
ಈ ವಾರದ ಕೆಬಿಸಿ ಸ್ಟೂಡೆಂಟ್ಸ್ ವಿಶೇಷ ಸಂಚಿಕೆಯಾಗಿತ್ತು. ಇದರಲ್ಲಿ ಹಲವು ಬುದ್ದಿವಂತ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಚತುರ ಉತ್ತರಗಳ ಮೂಲಕ ಎಲ್ಲರ ಮನಗೆದ್ದಿದ್ದರು. ಜತೆಗೆ ಬುಧವಾರ(ಡಿಸೆಂಬರ್ 16, 2020) ಹಾಟ್ ಸೀಟ್ ನಲ್ಲಿ ಕುಳಿತಿದ್ದ ಉಡುಪಿಯ ಅನಮಯ ದಿವಾಕರ್ ತಮ್ಮ ಅದ್ಭುತ ಉತ್ತರದೊಂದಿಗೆ ಬಿಗ್ ಬಿ ಹಾಗೂ ಪ್ರೇಕ್ಷಕರ ಮನಗೆದ್ದಿದ್ದರು.
ಹದಿನಾಲ್ಕು ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಮೂಲಕ ಅನಮಯ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದ್ದು ಒಂದು ಕೋಟಿ ರೂ. ಮೊತ್ತ ಬಹುಮಾನ ಗೆಲ್ಲುವ 12ನೇ ಪ್ರಶ್ನೆಯ ಉತ್ತರಕ್ಕಾಗಿ. ಈಗ ನಿಮಗೆ 12ನೇ ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ತಯಾರಾಗಿ ಎಂದಿದ್ದ ಬಿಗ್ ಬಿಗೆ ಅನಮಯ ಸಮ್ಮತಿ ಸೂಚಿಸಿದ್ದರು.
ಪ್ರಶ್ನೆ: ಮಹಾಭಾರತ ಯುದ್ಧದಲ್ಲಿ ಬದುಕುಳಿದು ಯುಧಿಷ್ಠಿರನ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡಿದ್ದ ಕರ್ಣನ ಪುತ್ರ ಯಾರು?
A)ವೃಷಕೇತು
2)ಸತ್ಯಸೇನಾ
3)ವೃಷಸೇನಾ
4)ವೃಹಿಹಂತ
ಉತ್ತರ:A. ವೃಷಕೇತು
ಹಾಟ್ ಸೀಟ್ ನಲ್ಲಿ ಕುಳಿತಿದ್ದ ಅನಮಯ ಅಂತಿಮ ಪ್ರಶ್ನೆಗೆ ಉತ್ತರ ತಿಳಿದಿಲ್ಲ ಎಂದು ಹೇಳುವ ಮೂಲಕ ಲೈಫ್ ಲೈನ್ ಇದ್ದರೂ ಯಾವುದೇ ಅಪಾಯ ತೆಗೆದುಕೊಳ್ಳದೇ ಸ್ಪರ್ಧೆಯಿಂದ ಹಿಂದೆ ಸರಿದು 50 ಲಕ್ಷ ರೂ. ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.