Advertisement
ರಾತ್ರಿ ಇಡೀ ಮಳೆ. ಕೆಮ್ಮಣ್ಣು ಗುಂಡಿಯ ಹಾದಿಯಲ್ಲಿ ಉದ್ದಕ್ಕೂ ಗುಂಡಿಗಳೇ ಸಿಕ್ಕವು. ಕಲ್ಲತ್ತಗಿರಿ ಜಲಪಾತ ನೋಡುವ ಉತ್ಸಾಹ ನೂರ್ಮುಡಿಯಾಗಿದ್ದು ಈ ಮಳೆಯಿಂದಲೇ. ಜಲಪಾತ ನೋಡಲು ಅಣಿಯಾದೆವು. ಅಲ್ಲಿಯೇ ಹತ್ತಿರದ ಹೊಟೇ ಲೊಂದರಲ್ಲಿ ಉಪಹಾರ ಮುಗಿಸಿ ಬಳುಕಿನ ಹಾದಿಯಲ್ಲಿ ಮಲೆನಾಡ ಸೊಬಗನ್ನು ಸವಿಯುತ್ತಾ ಹೊರಟೆವು. ಎಲ್ಲೆಲ್ಲೂ ಹಚ್ಚ ಹಸುರು, ನಡುನಡುವೆ ಸುರಿವ ತುಂತುರು. ಜತೆಜತೆಗೆ ಜೋರು ಮಳೆ. ಹಸಿರು ಗಿರಿಶ್ರೇಣಿಗಳ ಮೇಲೆ ಹಾರಾಡುತ್ತಾ ಹಸಿರು ಗುಡ್ಡಗಳಿಗೆ ಮುತ್ತಿಕ್ಕುವ ಮುದವಾದ ನೋಟ ನಮ್ಮ ಕಣ್ಣುಗಳನ್ನು ತಂಪಾಗಿಸಿತು. ದಾರಿಯ ನಡುವೆ ಸಿಗುವ ಸಣ್ಣ ಸಣ್ಣ ಜಲಪಾತಗಳು ಇನ್ನಷ್ಟು ಹುಚ್ಚೆಬ್ಬಿಸಿದ್ದವು. ಎಲ್ಲರೂ ಫೋಟೋ ಶೂಟ್ ನಡೆಸಿದ್ದೇ ನಡೆಸಿದ್ದು.
ಅರಣ್ಯ ಇಲಾಖೆಯ ತಪಾಸಣೆ ಮುಗಿಸಿಕೊಂಡು ಜಲಪಾತದ ಹತ್ತಿರಕ್ಕೆ ಬಂದಾಗಲೂ ಮಳೆ ಸುರಿಯುತ್ತಲೇ ಇತ್ತು. ಮಳೆ ಹನಿಗಳ ಜತೆ ಹರಿಯುವ ನೀರಿನಲ್ಲಿ ಮಿಂದು ಅಲ್ಲಿಯೇ ಇದ್ದ ಹೊಟೇಲೊಂದರಲ್ಲಿ ಕುಡಿದ ಮಲೆನಾಡಿನ ಬಿಸಿ ಬಿಸಿ ಕಾಫಿ ಹೃದಯವನ್ನು ಬೆಚ್ಚಗೆ ಮಾಡಿತು. ಅಲ್ಲಿಂದ ಹೊರಟ ತಲುಪಿದ್ದು ಝೆಡ್ ಪಾಯಿಂಟ್‌ಗೆ. ಅಲ್ಲೂ ಜಿಟಿಜಿಟಿ ಮಳೆ, ಮೈ ಕೊರೆಯುವ ಚಳಿ. ಸುಂದರ ಪರಿಸರ, ಮಳೆಯಿಂದಾಗಿ ಎಲ್ಲೆಲ್ಲೂ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಪರ್ವತ ಸಾಲುಗಳ ರುದ್ರರಮಣೀಯ ಪರಿಸರ.
Related Articles
Advertisement
ಮುಂದೆ ಸಿಕ್ಕಿದ್ದು, ಎಲ್ಲೆಲ್ಲೂ ಹಸುರು ಸೀರೆಯನ್ನು ಉಟ್ಟ ಪರ್ವತ ಸಾಲುಗಳೇ. ಪ್ರಕೃತಿಯ ಹಸಿರ ಸೌಂದರ್ಯವನ್ನು ಆಸ್ವಾದಿಸುತ್ತಾ ಗುಡ್ಡದ ತುತ್ತತುದಿಯನ್ನು ತಲುಪಿದಾಗ ಸ್ವರ್ಗಕ್ಕೆ ಮೂರೇ ಗೇಣು. ಮೈಮನಗಳಲ್ಲಿ ನಿಜಾರ್ಥದಲ್ಲಿ ರೋಮಾಂಚನ ಉಂಟು ಮಾಡುವಂಥ ಜಾಗ. ಸ್ವಲ್ಪ ಸಮಯ ಅಲ್ಲೇ ಕಾಲ ಕಳೆದು ವಾಪಸ್ ಹೊರಟೆವು.
ರೂಟ್ ಮ್ಯಾಪ್· ಮಂಗಳೂರಿನಿಂದ ಕೆಮ್ಮಣ್ಣು ಗುಂಡಿಗೆ ಸುಮಾರು 213 ಕಿ.ಮೀ. ದೂರ.
·ಕೆಮ್ಮಣ್ಣು ಗುಂಡಿಯಿಂದ 4 ಕಿ.ಮೀ. ದೂರದ ಲ್ಲಿದೆ ಫಾಲ್ಸ್.
·ಕಲ್ಲತ್ತಗಿರಿ ಜಲಪಾತಕ್ಕೆ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋದರೆ ಅನುಕೂಲ.
·ಕೆಮ್ಮಣ್ಣುಗುಂಡಿಯಲ್ಲಿ ಮೊದಲೇ ಬುಕ್ಕಿಂಗ್ ಮಾಡಿದರೆ ವಸತಿ, ಊಟದ
ಸಮಸ್ಯೆಯಿಲ್ಲ.
·ಹತ್ತಿರದಲ್ಲಿದೆ ರಾಕ್ ಗಾರ್ಡನ್, ಕೆಮ್ಮಣ್ಣು ಗುಂಡಿ ಕೃಷ್ಣರಾಜೇಂದ್ರ ಪಾರ್ಕ್, ಶಾಂತಿ
ಫಾಲ್ಸ್. ಲಕ್ಷ್ಮೀಕಾಂತ್ ಎಲ್.ವಿ