Advertisement

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

03:46 PM Nov 06, 2024 | Team Udayavani |

ಕಟಪಾಡಿ: ಮಟ್ಟು ಬೀಚ್‌ ಸಂಪರ್ಕದ ಕಟಪಾಡಿ-ಮಟ್ಟು ಮೀನು ಗಾರಿಕಾ ರಸ್ತೆಯು ಶ್ರೀ ಕ್ಷೇತ್ರ ಪೇಟೆಬೆಟ್ಟು ಮುಂಭಾಗದಲ್ಲಿನ ರಸ್ತೆಯೂ ಹಾಳಾಗಿದ್ದು, ರಸ್ತೆಯಂಚಿನಲ್ಲಿ ಅಪಾಯಕಾರಿ ಗುಂಡಿ ಯೊಂದು ಬಾಯ್ದೆರೆದು ನಿಂತಿದ್ದು ಹೆಚ್ಚಿನ ಅವಘಡ ಸಂಭವಿಸದಂತೆ ಹಾಗೂ ಅಪಾಯದ ಮುನ್ನೆಚ್ಚರಿಕೆಗಾಗಿ ಶ್ರೀ ಕ್ಷೇತ್ರ ಪೇಟೆಬೆಟ್ಟು ವತಿಯಿಂದ ಬ್ಯಾರಿಕೇಡ್‌ ಇರಿಸಿ ಪ್ಲಾಸ್ಟಿಕ್‌ ರಿಬ್ಬನ್‌ ಬಿಗಿದು ಮಾನವೀಯತೆ ಮೆರೆದಿದ್ದಾರೆ.

Advertisement

ಬಹಳಷ್ಟು ವಾಹನ ದಟ್ಟಣೆಯಿಂದ ಕೂಡಿದ ಈ ರಸ್ತೆಯ ಈ ಭಾಗದಲ್ಲಿ ತ್ರಿಶಾ ಕಾಲೇಜು, ಎಸ್‌ವಿಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳು, ಸಹಸ್ರಾರು ಭಕ್ತಾಧಿಗಳ ಧಾರ್ಮಿಕ ಶ್ರದ್ಧಾ ಕೇಂದ್ರವೂ ಇರುವುದರಿಂದ ಸಹಜವಾಗಿ ಸಂಚಾರ ಹಾಗೂ ವಾಹನಗಳ ದಟ್ಟಣೆಯು ಅಧಿಕವಾಗಿರುತ್ತದೆ.

ರಸ್ತೆಯ ಅಂಚಿನಲ್ಲಿಯೇ ಈ ಅಪಾಯಕಾರಿ ಗುಂಡಿಯು ಬಾಯ್ದೆರೆದಿದ್ದು, ವಾಹನಗಳು ಎದುರು ಬದುರಾದ ಸಂದರ್ಭದಲ್ಲಿ ಅಪಾಯವು ಕಟ್ಟಿಟ್ಟ ಬುತ್ತಿ.

ಅಂದಾಜು ತಪ್ಪಿದ 2-3 ಸೈಕಲ್‌ ಸವಾರ ವಿದ್ಯಾರ್ಥಿಗಳು, ದ್ವಿ ಚಕ್ರ ವಾಹನ ಸವಾರರು ಈಗಾಗಲೇ ಈ ಗುಂಡಿಗೆ ಬಿದ್ದು ಅಪಾಯದ ರುಚಿ ಕಂಡಿದ್ದಾರೆ.

ಈ ಬಗ್ಗೆ ಸಾರ್ವಜನಿಕರ, ನಿತ್ಯ ಸಂಚಾರಿಗಳ ಆತಂಕದ ಕುರಿತು ಉದಯವಾಣಿ ಸುದಿನ ನ.1 ರಂದು ವರದಿಯನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸಂಭಾವ್ಯ ಮಾರಣಾಂತಿಕ ಅಪಘಾತಗಳನ್ನು ತಪ್ಪಿಸಿ, ಸುರಕ್ಷಿತಗೊಳಿಸುವಂತೆ ನಿತ್ಯ ಸಂಚಾರಿಗಳ ಆಗ್ರಹವನ್ನು ತಿಳಿಸಿತ್ತು. ಆದರೂ ಇದುವರೆಗೂ ಯಾವುದೇ ಇಲಾಖಾಧಿಕಾರಿಗಳು ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ. ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

ಸಂಚಾರವೇ ಸಂಕಷ್ಟ
ಸಂಚಾರವೇ ಸಂಕಷ್ಟ. ಸ್ವಲ್ಪ ಮಟ್ಟಿಗೆ ರಸ್ತೆಯೂ ಇಲ್ಲಿ ಹಾಳಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಅಪಾಯಕಾರಿ ಸ್ಥಳದ ಬಗ್ಗೆ ಉದಯವಾಣಿ ಜನಪರ ಕಾಳಜಿಯ ವರದಿಯನ್ನೂ ಪ್ರಕಟಿಸಿತ್ತು. ಅದನ್ನು ಮನಗಂಡು ಸುರಕ್ಷತೆಗಾಗಿ ಪ್ಲಾಸ್ಟಿಕ್‌ ರಿಬ್ಬನ್‌ ಅಳವಡಿಸಲಾಗಿದೆ. ಪ್ರವಾಸಿಗರು, ವಿದ್ಯಾರ್ಥಿಗಳು, ವಾಹನ ಚಾಲಕರು ಈ ಭಾಗದಲ್ಲಿ ತುಸು ಎಚ್ಚರಿಕೆಯಿಂದ ವಾಹನ ಚಲಾಯಿಸಿರಿ.
-ಜಯಕರ್‌ ಕುಂದರ್‌, ರಿಕ್ಷಾ ಚಾಲಕ, ಕಟಪಾಡಿ

ಅವಘಡಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಿ
ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಮಟ್ಟು ಬೀಚ್‌ಗೆ ತೆರಳುವ ಪ್ರವಾಸಿಗರು, ಕೋಟೆ, ಮಟ್ಟು, ಕಟಪಾಡಿ ಗ್ರಾಮಸ್ಥರು, ಬಸ್ಸು ಸಹಿತ ಖಾಸಗಿ ವಾಹನಗಳು ನಿರಂತರವಾಗಿ ಸಂಚರಿಸುವ ವಾಹನ ಮತ್ತು ಜನ ದಟ್ಟಣೆಯ ಪ್ರದೇಶ ಇದು. ಇಕ್ಕಟ್ಟಾದ ಈ ಪ್ರದೇಶದಲ್ಲಿ ರಸ್ತೆಯ ಅಂಚಿನಲ್ಲಿ ಈ ಗುಂಡಿ ಇದೆ. ಪಕ್ಕದಲ್ಲಿ ಆಳವಾದ ಪ್ರದೇಶವಿದೆ. ರಸ್ತೆಯ ಬದುವನ್ನು ಕಟ್ಟಿ ಎತ್ತರಿಸಿ ಈ ಭಾಗದಲ್ಲಿ ಇನ್ನಷ್ಟು ಅವಘಡಗಳು ಸಂಭವಿಸುವ ಮುನ್ನವೇ ಎಚ್ಚೆತ್ತು, ಸುರಕ್ಷತೆಯನ್ನು ಕಲ್ಪಿಸಬೇಕಾದ ಅವಶ್ಯಕತೆ ಇದೆ.
– ತುಕಾರಾಮ್‌ ಎಸ್‌. ಉರ್ವ, ಮುಖ್ಯಸ್ಥರು, ಶ್ರೀ ಕ್ಷೇತ್ರ ಪೇಟೆಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next