Advertisement
ಕೇಂದ್ರ, ರಾಜ್ಯಗಳ 50:50 ಅನುಪಾತದ ಈ ಮಹತ್ವಾಕಾಂಕ್ಷಿ ಯೋಜನೆಗೆ 2021ರ ಜ. 19ರಂದು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಿದ್ದರು. ಯೋಜನೆಯಡಿ ಸರಕಾರದ ಸುಮಾರು 70 ಎಕ್ರೆ ಜಾಗದಲ್ಲಿ ಅರೆಬರೆ ಆವರಣ ಗೋಡೆ ಕಾಮಗಾರಿ, ಗೇಟು, ಭೂಮಿಯ ಸಮತಟ್ಟುಗೊಳಿಸುವಿಕೆ, ಆಂಶಿಕ ಧಕ್ಕೆ ಕಾಮಗಾರಿ, ಕಚ್ಚಾ ರಸ್ತೆ ನಿರ್ಮಾಣಗಳನ್ನು ಚೆನ್ನೈನ ಶ್ರೀಪತಿ ಎಸೋಸಿಯೇಟ್ಸ್ ಗುತ್ತಿಗೆದಾರ ಕಂಪೆನಿ ನಿರ್ವಹಿಸಿದೆ. ಡ್ರೆಜ್ಜಿಂಗ್, ಪೂರ್ಣ ಪ್ರಮಾಣದಲ್ಲಿ ನೀಲ ನಕಾಶೆಯಲ್ಲಿನ ಸಮಗ್ರ ಕಟ್ಟಡಗಳ ಕಾಮಗಾರಿ, ರಸ್ತೆ, ಆವರಣಗೋಡೆಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಅವರಿಗೂ ಸರಕಾರದಿಂದ ಸಿಗಬೇಕಾದ ಪಾವತಿ ಮೊತ್ತ ಈಗಾಗಲೇ 28 ಕೋಟಿಗಳಷ್ಟು ಬಾಕಿ ಇದೆ. ಸುಮಾರು 60-70ಶೇಕಡಾ ಪೂರ್ಣಗೊಂಡಿರುವುದಾಗಿ ಮೀನುಗಾರಿಕಾ ಇಲಾಖಾ ಅಧಿಕಾರಿಗಳು ಹೇಳುತ್ತಾರೆ.
ಈ ಯೋಜನೆಗಾಗಿ ಸುಮಾರು 12.20ಎಕ್ರೆ ಖಾಸಗಿ ಭೂಮಿಗಳ ಸ್ವಾಧೀನಕ್ಕಾಗಿ ಮೀಸಲಿಟ್ಟ 21 ಕೋಟಿ ರೂ. ಸದ್ಯ ಕುಂದಾಪುರದ ಸಹಾಯಕ ಕಮಿಶನರ್ ಕಚೇರಿಯಲ್ಲಿ ಜಮಾ ಆಗಿದೆ. ಈಗ ಯೋಜನಾ ವೆಚ್ಚ ಹೆಚ್ಚಾಗಿದ್ದು, ಇನ್ನೂ 21 ಕೋಟಿ ರೂ. ಮೊತ್ತಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ರವಾನಿಸಲಾಗಿದೆ. ಇದು ಬಿಡುಗಡೆಗೊಂಡ ಬಳಿಕಷ್ಟೇ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರಧನದ ಹಂಚಿಕೆಯಾಗಬೇಕು. ಆ ಬಳಿಕವೇ 2025ರಲ್ಲಿ ಹೆಜಮಾಡಿ ಮೀನುಗಾರಿಕಾ ಬಂದರು ಪೂರ್ಣಗೊಳ್ಳಬಹುದು ಎನ್ನುತ್ತಾರೆ ಮೀನುಗಾರಿಕಾ ಹಾಗೂ ಬಂದರು ಇಲಾಖಾ ಜಂಟಿ ನಿರ್ದೇಶಕ ವಿವೇಕ್ ಆರ್. ತಿಳಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಗುರ್ಮೆ ಮನವಿ
ಬಂದರು ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಮತ್ತು ಸುತ್ತಮುತ್ತಲಿನ ಮೀನುಗಾರರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ತಕ್ಷಣ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ಹೆಜಮಾಡಿ ಬಂದರಿನ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮೀನುಗಾರಿಕಾ ಇಲಾಖಾ ಮುಖ್ಯ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮೀನುಗಾರಿಕಾ ಕಾರ್ಯದರ್ಶಿ ಅವರು ಕೂಡಲೇ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ ಭರವಸೆಯನ್ನೂ ಶಾಸಕರಿಗೆ ನೀಡಿದ್ದಾರೆ.