ನವದೆಹಲಿ: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಕಥುವಾದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ ಯನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜತೆಗೆ, ತನಿಖೆಗೆ ಹೇರಲಾಗಿದ್ದ ತಡೆಯಾಜ್ಞೆಯನ್ನು ಸೋಮವಾರ ವಾಪಸ್ ಪಡೆದಿರುವ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ವಿಚಾರಣೆಯನ್ನು ಜಮ್ಮು-ಕಾಶ್ಮೀರದಿಂದ ಪಂಜಾಬ್‌ನ ಪಠಾಣ್‌ಕೋಟ್‌ಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವಂಥ ರಣಬೀರ್ ದಂಡ ಸಂಹಿತೆಯ ನಿಬಂಧನೆಯ ಆಧಾರದಲ್ಲೇ ವಿಚಾರಣೆ ನಡೆಸಬೇಕು. ಅದು ರಹಸ್ಯವಾಗಿ ನಡೆಯಬೇಕು ಹಾಗೂ ದಿನಂಪ್ರತಿ ವಿಚಾರಣೆ ನಡೆಯುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ, ಯಾವುದೇ ವಿಳಂಬ ಆಗದಂತೆ ಹಾಗೂ ಸಂತ್ರಸ್ತೆಯ ಕುಟುಂಬಕ್ಕೂ, ಆರೋಪಿ ಗಳಿಗೂ ನ್ಯಾಯಯುತವಾಗಿರುವಂತೆ ವಿಚಾ ರಣೆ ನಡೆಯ ಬೇಕು ಎಂದೂ ನ್ಯಾಯಪೀಠ ಆದೇಶಿಸಿದೆ.
ಭದ್ರತೆಗೆ ಸೂಚನೆ: ಇದೇ ವೇಳೆ, ಸಂತ್ರಸ್ತೆಯ ಕುಟುಂಬ, ಸ್ನೇಹಿತರು, ವಕೀಲರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆಗಳು, ದಾಖಲೆಗಳನ್ನು ಉರ್ದುವಿನಿಂದ ಆಂಗ್ಲಕ್ಕೆ ಭಾಷಾಂತರಿಸು ವಂತೆಯೂ ನ್ಯಾಯಾಲಯ ಸೂಚಿಸಿತು. ತಮ್ಮ ಕುಟುಂಬಕ್ಕೆ ಹಾಗೂ ವಕೀಲರಿಗೆ ಜೀವ ಬೆದರಿಕೆಯಿದೆ ಎಂದು ಆರೋಪಿಸಿ ಬಾಲಕಿಯ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ, ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸುವಂತೆಯೂ ಕೋರಿದ್ದರು. ಇದೇ ವೇಳೆ, ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ಪ್ರಕರಣದ ವಿಚಾರಣೆ ಜಮ್ಮುವಿನಲ್ಲೇ ನಡೆಯ ಬೇಕು ಮತ್ತು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೋರಿದ್ದರು. ಆದರೆ, ಸಂತ್ರ ಸ್ತೆಯ ತಂದೆಯ ಅರ್ಜಿಯನ್ನು ಪರಿಗಣಿಸಿದ ಸಿಜೆಐ ಮಿಶ್ರಾ, ನ್ಯಾ.ಡಿ.ವೈ. ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರಾ ಅವರಿದ್ದ ನ್ಯಾಯಪೀಠ, “ಭಯ ಮತ್ತು ನ್ಯಾಯಯುತ ವಿಚಾರಣೆ ಒಟ್ಟಿಗೇ ಇರಲು ಸಾಧ್ಯವಿಲ್ಲ. ಹಾಗಾಗಿ ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದೇವೆ’ ಎಂದಿದೆ.
ವಿಚಾರಣೆ ಬೇರೆಡೆಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ರಾಜ್ಯ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಏಕೆಂದರೆ, 8 ವರ್ಷದ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಪೊಲೀಸರು ಸಾಕಷ್ಟು ಶ್ರಮಿಸಿದ್ದಾರೆ.
ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಸಿಎಂ