ಪಠಾಣ್‌ಕೋಟ್ : ಜಮ್ಮು ಕಾಶ್ಮೀರದ ಕಠುವಾದಲ್ಲಿ ನಡೆದಿದ್ದ 8 ವರ್ಷದ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಕೇಸಿನ ಏಳು ಆರೋಪಿಗಳ ಪೈಕಿ ಆರು ಮಂದಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಇಂದು ಸೋಮವಾರ ದೋಷಿಗಳೆಂದು ತೀರ್ಪು ನೀಡಿದೆ.
ದೋಷಿಗಳೆಂದು ಪರಿಗಣಿಸಲ್ಪಟ್ಟಿರುವ ಆರು ಮಂದಿಯಲ್ಲಿ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಹಾಗೂ ಅತ್ಯಾಚಾರ ಮತ್ತು ಕೊಲೆ ಕೃತ್ಯ ನಡೆದಿದ್ದ ದೇವಸ್ಥಾನದ ಪ್ರಧಾನ ಅರ್ಚಕ ಸಾಂಝೀ ರಾಮ್ ಸೇರಿದ್ದಾರೆ. ಪ್ರಕರಣದ ಏಳನೇ ಆರೋಪಿ ವಿಶಾಲ್ ನನ್ನು ಕೋರ್ಟ್ ಖುಲಾಸೆ ಗೊಳಿಸಿದೆ.
ಮುಚ್ಚಿದ ಬಾಗಿಲ ಹಿಂದೆ ನಡೆದಿದ್ದ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಕಳೆದ ಜೂನ್ 3ರಂದು ಮುಗಿಸಿತ್ತು. ಆ ದಿನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ತೇಜ್‌ವಿಂದರ್ ಸಿಂಗ್ ಅವರು ತೀರ್ಪಿನ ದಿನಾಂಕವನ್ನು ಪ್ರಕಟಿಸಿದ್ದರು.
ಅಂತೆಯೇ ಇಂದು ಸೋಮವಾರ ಮೇಲ್ಕಾಣಿಸಿದ ಆರೋಪಿಗಳು ಮಾತ್ರವಲ್ಲದೆ ಆನಂದ್ ದತ್ತ, ತಿಲಕ್ ರಾಜ್ ಮತ್ತು ಸುರೀಂದರ್ ಅವರನ್ನು ನ್ಯಾಯಾಧೀಶರು ರಣಬೀರ್ ಪೀನಲ್ ಕೋಡ್ ಪ್ರಕಾರ ಅಪರಾಧಿಗಳೆಂದು ಘೋಷಿಸಿದರು. ಆರು ಮಂದಿಯ ವಿರುದ್ಧ ಅಪಹರಣ, ರೇಪ್, ಸಾಕ್ಷ್ಯ ನಾಶ ಮತ್ತು ಇತರ ಅಪರಾಧಗಳ ದೋಷಾರೋಪ ಮಾಡಲಾಗಿತ್ತು.
ತೀರ್ಪಿನ ದಿನವಾದ ಇಂದು ಕೋರ್ಟ್ ಹೊರಗೆ ಬಿಗಿ ಭದ್ರತೆಯನ್ನು ಹಾಕಲಾಗಿತ್ತು.